ಗೋವುಗಳ ಕೆಚ್ಚಲು ಕೊಯ್ದ ಘಟನೆ ಖಂಡಿಸಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

| Published : Jan 16 2025, 12:48 AM IST

ಗೋವುಗಳ ಕೆಚ್ಚಲು ಕೊಯ್ದ ಘಟನೆ ಖಂಡಿಸಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗೋವುಗಳ ಕೆಚ್ಚಲು ಕೊಯ್ದ ದುಷ್ಕೃತ್ಯ ಖಂಡಿಸಿ ಬಿಜೆಪಿಯ ರೈತ ಮೋರ್ಚಾ ಪ್ರತಿಭಟನೆ ನಡೆಸಿತು.

ಬಳ್ಳಾರಿ: ಗೋವುಗಳ ಕೆಚ್ಚಲು ಕೊಯ್ದ ದುಷ್ಕೃತ್ಯ ಖಂಡಿಸಿ ಬಿಜೆಪಿಯ ರೈತ ಮೋರ್ಚಾ ಕಾರ್ಯಕರ್ತರು ನಗರದ ಗಡಗಿಚನ್ನಪ್ಪ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಕೆಚ್ಚಲು ಕೊಯ್ದ ಘಟನೆಯ ಹಿಂದೆ ಹುನ್ನಾರವಿದೆ. ಈ ಮೂಲಕ ಹಿಂದೂ ಸಮಾಜವನ್ನು ಭಯಬೀಳಿಸಬಹುದು ಎಂದುಕೊಂಡಿದ್ದಾರೆ. ಆದರೆ, ಈ ಘಟನೆಯಿಂದ ಹಿಂದೂ ಸಮಾಜ ಎಚೆತ್ತುಕೊಂಡಿದೆ. ರಾಜ್ಯದ ಗೃಹ ಸಚಿವರು ಪ್ರಕರಣದ ಸಮಗ್ರ ತನಿಖೆ ಮಾಡಬೇಕು. ಯಾರೋ ಒಬ್ಬರನ್ನು ಬಂಧಿಸಿ ಆತನೇ ಕೆಚ್ಚಲು ಕೊಯ್ದುವ, ಮಾನಸಿಕ ಅಸ್ವಸ್ಥ ಎಂದು ಬಿಂಬಿಸಲಾಗುತ್ತಿದ್ದು, ಆದರೆ, ಇದನ್ನು ನಾವು ಒಪ್ಪುವುದಿಲ್ಲ. ದುಷ್ಕರ್ಮಿಗಳ ಹುನ್ನಾರವಿಲ್ಲದೆ ಈ ಘಟನೆ ನಡೆಯಲು ಸಾಧ್ಯವಿಲ್ಲ. ಪ್ರಕರಣವನ್ನು ಸೂಕ್ತ ತನಿಖೆಗೆ ಒಳಪಡಿಸಿದರೆ ದುಷ್ಕರ್ಮಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಜಮೀರ್ ಭಾವಚಿತ್ರಕ್ಕೆ ಸಗಣಿ

ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ರಾಜಕಾರಣಕ್ಕಾಗಿ ದುಷ್ಕೃತ್ಯ ಎಸಗಿದ ಆರೋಪಿಗಳನ್ನು ರಕ್ಷಣೆ ಮಾಡಲು ಮುಂದಾಗಿದೆ. ಚಾಮರಾಜಪೇಟೆಯ ಶಾಸಕ ಈ ಘಟನೆಯ ಹೊಣೆ ಹೊತ್ತುಕೊಳ್ಳಬೇಕು. ತಮ್ಮ ಕ್ಷೇತ್ರದಲ್ಲಿಯೇ ಘಟನೆ ನಡೆದಿದ್ದು, ಯಾವುದೇ ಕ್ರಮಕ್ಕೆ ಮುಂದಾಗದೆ ಜಾಣ ಮೌನ ವಹಿಸಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ರೈತ ಮೋರ್ಚಾ ಮುಖಂಡ ಐನಾಥ ರೆಡ್ಡಿ ಹಾಗೂ ಎಚ್. ಹನುಮಂತಪ್ಪ ಆರೋಪಿಸಿದರು.

ಬಳ್ಳಾರಿ ಜಿಲ್ಲಾ ಉಸ್ತವಾರಿ ವಹಿಸಿಕೊಂಡಿರುವ ಜಮೀರ್ ಅಹ್ಮದ್ ಅವರು ನಾಲ್ಕು ತಿಂಗಳಾದರೂ ಬಳ್ಳಾರಿಗೆ ಭೇಟಿ ನೀಡಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕಾಳಜಿ ಇರಬೇಕಾದ ಸಚಿವರು ಈ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಇಂತಹ ವ್ಯಕ್ತಿಗಳಿಗೆ ಜಿಲ್ಲಾ ಉಸ್ತುವಾರಿ ನೀಡಿರುವುದು ನಮ್ಮ ಜಿಲ್ಲೆಯ ದೌರ್ಭಾಗ್ಯವಾಗಿದೆ ಎಂದು ಟೀಕಿಸಿದರಲ್ಲದೆ, ರಾಜ್ಯ ಸರ್ಕಾರ ಗೋವುಗಳ ರಕ್ಷಣೆಗೆ ಮುಂದಾಗಬೇಕು. ರಾಜ್ಯದಲ್ಲಿ ಗೋ ಶಾಲೆಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು. ಎರಡು ಗೋವುಗಳೊಂದಿಗೆ ಪ್ರತಿಭಟನೆ ನಡೆಸಿದ ಬಿಜೆಪಿ ರೈತ ಮೋರ್ಚಾ ಸದಸ್ಯರು, ಸಚಿವ ಜಮೀರ್ ಅಹ್ಮದ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಸಚಿವರ ಭಾವಚಿತ್ರಕ್ಕೆ ಗೋವಿನ ಸಗಣಿ ಎರಚಿ ಇಂತಹ ಸಚಿವ ಬಳ್ಳಾರಿ ಜಿಲ್ಲೆಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.