ಕಾರವಾರ: ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಭಾರತೀಯ ಜನತಾ ಪಾರ್ಟಿ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಒಟ್ಟು 1,445 ಮತಗಟ್ಟೆಗಳ ಪೈಕಿ 1,400 ಮತಗಟ್ಟೆಗಳಿಗೆ ಪಕ್ಷದ ವತಿಯಿಂದ ಬೂತ್ ಲೆವೆಲ್ ಏಜೆಂಟ್-2 ನೇಮಕ ಮಾಡಲಾಗಿದೆ ಎಂದು ಬಿಜೆಪಿ ಎಸ್‌ಐಆರ್ ಜಿಲ್ಲಾ ಪ್ರಭಾರಿ ವೆಂಕಟೇಶ ನಾಯಕ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ಎಲ್ಲ ಮತಗಟ್ಟೆಗಳಿಗೆ ಏಜೆಂಟ್‌ಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಅನುಮತಿಯೂ ಲಭಿಸಿದೆ. ಈ ಏಜೆಂಟ್‌ಗಳಿಗೆ ಪಕ್ಷದ ವತಿಯಿಂದ ಗುರುತಿನ ಚೀಟಿಗಳನ್ನು ವಿತರಿಸಲಾಗಿದ್ದು, ಅವರು ಮತಗಟ್ಟೆ ಅಧಿಕಾರಿಗಳೊಂದಿಗೆ ನೇರವಾಗಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸುವುದು ಮತ್ತು ಮತದಾರರ ಪಟ್ಟಿಯನ್ನು ಪಾರದರ್ಶಕಗೊಳಿಸುವುದು ನಮ್ಮ ಉದ್ದೇಶ ಎಂದು ಅವರು ವಿವರಿಸಿದರು.ರಾಜ್ಯದಲ್ಲಿ ಸುಮಾರು 20 ಲಕ್ಷ ವಿದೇಶಿ ಅಥವಾ ಅಕ್ರಮ ಮತದಾರರಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಭಟ್ಕಳದಂತಹ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಅನರ್ಹ ಮತದಾರರು ಇರುವ ಸಾಧ್ಯತೆ ದಟ್ಟವಾಗಿದೆ. ಇಂತಹವರನ್ನು ಗುರುತಿಸಿ ಪಟ್ಟಿಯಿಂದ ಕೈಬಿಡುವ ನಿಟ್ಟಿನಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಬಿಜೆಪಿ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ವೆಂಕಟೇಶ ನಾಯಕ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಗಳನ್ನು ತಳ್ಳಿಹಾಕಿದ ಅವರು, ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಮೂಲಕ ಮತದಾರರ ಹಕ್ಕು ಕಸಿಯಲಾಗುತ್ತಿದೆ ಎಂಬುದು ಕೇವಲ ರಾಜಕೀಯ ಪ್ರೇರಿತ ಆರೋಪ. ಅಂತಿಮ ಪಟ್ಟಿ ಪ್ರಕಟವಾದ ನಂತರ ಎಲ್ಲಿಯೂ ಅನ್ಯಾಯವಾಗಿರುವುದು ಸಾಬೀತಾಗಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗಲೂ ಕಾಂಗ್ರೆಸ್ ಇದೇ ರೀತಿ ಸುಳ್ಳು ಸುದ್ದಿ ಹರಡಿತ್ತು. ಈಗಲೂ ಮತದಾರರ ಪಟ್ಟಿ ಶುದ್ಧೀಕರಣದ ವಿರುದ್ಧ ಅಪಪ್ರಚಾರ ನಡೆಸುತ್ತಿದೆ. ನಾವು ಕೇವಲ ಅರ್ಹರ ಹೆಸರನ್ನು ಉಳಿಸಿ, ಅನರ್ಹರನ್ನು ತೆಗೆಯುವ ಕೆಲಸಕ್ಕೆ ಸಹಕರಿಸುತ್ತಿದ್ದೇವೆ ಎಂದು ಟೀಕಿಸಿದರು.ಬಿಜೆಪಿ ಮುಖಂಡರಾದ ಜಗದೀಶ ನಾಯಕ ಮೊಗಟಾ, ಸುಭಾಷ ಗುನಗಿ, ಕಿಶನ್ ಕಾಂಬಳೆ ಹಾಗೂ ರಾಘವೇಂದ್ರ ಭಟ್ ಸೇರಿದಂತೆ ಪಕ್ಷದ ಪ್ರಮುಖ ಪದಾಧಿಕಾರಿಗಳು ಇದ್ದರು.
