ಬಿಜೆಪಿಯ ಪ್ರತ್ಯೇಕ ಬಣವೊಂದರ ನಾಯಕರು ದೆಹಲಿಗೆ ಪ್ರಯಾಣಿಸಿದ್ದಾರೆ.
ಕನ್ನಡಪ್ರಭ ವಾರ್ತೆ ನವದೆಹಲಿ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ತಾತ್ಕಾಲಿಕ ಬ್ರೇಕ್ ದೊರೆತ ಬೆನ್ನಲ್ಲೇ ಬಿಜೆಪಿಯ ಪ್ರತ್ಯೇಕ ಬಣವೊಂದರ ನಾಯಕರು ದೆಹಲಿಗೆ ಪ್ರಯಾಣಿಸಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಶ್ರೀಮಂತ್ ಪಾಟೀಲ್, ಬಿ.ವಿ.ನಾಯಕ್ ಮತ್ತು ಬಸನಗೌಡ ಪಾಟೀಲ್ ಸೇರಿದಂತೆ ಬಿಜೆಪಿಯ ಪ್ರತ್ಯೇಕ ಬಣದ ಹಲವು ನಾಯಕರು ದೆಹಲಿಗೆ ತೆರಳಿದ್ದು, ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.ದೆಹಲಿಯ ಕರ್ನಾಟಕ ಭವನದಲ್ಲಿ ಮಂಗಳವಾರ ಸಭೆ ಸೇರಿದ ನಾಯಕರು, ಹೈಕಮಾಂಡ್ ನಾಯಕರ ಭೇಟಿಗೆ ಯತ್ನ ಮುಂದುವರಿಸಿದ್ದಾರೆ. ಕೇಂದ್ರ ಸಚಿವರ ಭೇಟಿಗೆ ಸಮಯ ಕೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆಗೆ ಆಗ್ರಹಿಸುತ್ತಿರುವ ರೆಬಲ್ ನಾಯಕರು, ಇದೇ ಹಿನ್ನೆಲೆಯಲ್ಲಿ ಹಲವು ನಾಯಕರನ್ನು ಭೇಟಿ ಮಾಡಲು ಯತ್ನ ನಡೆಸಿದ್ದಾರೆ. ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಹಲವು ನಾಯಕರು ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರ್ ಬಂಗಾರಪ್ಪ, ಹೈಕಮಾಂಡ್ ಜತೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕಾಲಾವಕಾಶ ಸಿಕ್ಕಿದೆ. ಈ ಭೇಟಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದ್ದಲ್ಲ. ಬದಲಾಗಿ, ಸಂಘಟನಾತ್ಮಕ ವಿಷಯಗಳು, ವಿಶೇಷವಾಗಿ, 2028ರ ಚುನಾವಣೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಭೇಟಿ ವೇಳೆ ಚರ್ಚೆ ನಡೆಯಲಿದೆ ಎಂದು ಹೇಳಿದರು.