ಕರ್ನಾಟಕದ ಎಲ್ಲ ಕರಸೇವಕರ ಮೇಲೆ ಕೇಸ್‌ ಹಾಕಲಿ: ಡಾ.ಭರತ್‌ ಶೆಟ್ಟಿ ಸವಾಲು

| Published : Jan 04 2024, 01:45 AM IST

ಕರ್ನಾಟಕದ ಎಲ್ಲ ಕರಸೇವಕರ ಮೇಲೆ ಕೇಸ್‌ ಹಾಕಲಿ: ಡಾ.ಭರತ್‌ ಶೆಟ್ಟಿ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನವನ್ನು ವಿರೋಧಿಸಿ ಮಂಗಳೂರಿನಲ್ಲಿ ಬುಧವಾರ ಬಿಜೆಪಿ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಹುಬ್ಬಳ್ಳಿಯಲ್ಲಿ ಮೂರು ದಶಕಗಳ ಹಿಂದೆ ರಾಮ ಮಂದಿರ ಹೋರಾಟದಲ್ಲಿ ಭಾಗಿಯಾಗಿದ್ದ 75 ವರ್ಷದ ಕರಸೇವಕ ಶ್ರೀಕಾಂತ್‌ ಪೂಜಾರಿ ಎಂಬವರನ್ನು 31 ವರ್ಷಗಳ ಬಳಿಕ ಬಂಧಿಸಿರುವುದನ್ನು ವಿರೋಧಿಸಿ ಬಿಜೆಪಿ ದ.ಕ. ಜಿಲ್ಲಾ ಘಟಕದ ವತಿಯಿಂದ ಬುಧವಾರ ನಗರದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಡಾ. ಭರತ್‌ ಶೆಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಮಾಜದಲ್ಲಿ ವಿಷಬೀಜ ಬಿತ್ತುವ ಕಾರ್ಯ ಮಾಡುತ್ತಿದೆ. ಮೂರು ದಶಕಗಳ ಹಿಂದಿನ ಪ್ರಕರಣವನ್ನು ಮರು ತನಿಖೆಗೆ ತೆಗೆದುಕೊಂಡಿರುವುದನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಹಿಂದೂಗಳ ಅಸ್ಮಿತೆಯನ್ನು ತುಳಿಯುವ ಪ್ರಯತ್ನ ಮಾಡಿದರೆ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

75 ವರ್ಷದ ವೃದ್ಧರನ್ನು ಬಂಧಿಸಿರುವುದ ಮೂರ್ಖತನಕ್ಕೆ ಸಾಕ್ಷಿ. ರಾಜ್ಯ ಸರ್ಕಾರ ಹಿಂದುಗಳ ತಾಳ್ಮೆ ಪರೀಕ್ಷಿಸಲು ಮುಂದಾದರೆ ತಕ್ಕ ಬೆಲೆ ತೆರಬೇಕಾದೀತು. ಕಾಂಗ್ರೆಸ್‌ ಸರ್ಕಾರ ಧೈರ್ಯವಿದ್ದರೆ ಕರ್ನಾಟಕದಿಂದ ಕರಸೇವೆಯಲ್ಲಿ ಭಾಗಿಯಾಗಿದ್ದ ಎಲ್ಲರ ಮೇಲೆ ಕೇಸು ಹಾಕಲಿ ಎಂದು ಅವರು ಸವಾಲು ಹಾಕಿದರು.

ವಿಧಾನಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಕೋಟ್ಯಂತರ ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಕರಸೇವಕ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿರುವ ವಿಷಯ ಆಘಾತ ತಂದಿದೆ. ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇದರ ವಿರುದ್ಧ ಸಮಾಜ ಒಂದಾಗಬೇಕು ಎಂದರು.

ಕೇಸ್‌ ವಾಪಸ್‌ಗೆ ಆಗ್ರಹ: ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮಾತನಾಡಿ, 31 ವರ್ಷಗಳ ಹಿಂದಿನ ಪ್ರಕರಣವನ್ನು ಮತ್ತೆ ಕೆದಕಿ ಹಿಂದು ಕಾರ್ಯಕರ್ತರೊಬ್ಬರನ್ನು ಬಂಧಿಸಿರುವುದು ಕಾಂಗ್ರೆಸ್‌ ಸರ್ಕಾರದ ಹಿಂದು ವಿರೋಧಿ ನೀತಿಯನ್ನು ಪ್ರತಿಬಿಂಬಿಸಿದೆ ಎಂದರು.

ಶ್ರೀರಾಮ ಮಂದಿರ ಉದ್ಘಾಟನೆಯೊಂದಿಗೆ ಶ್ರೀರಾಮ ದೇವರ ವಿಗ್ರಹ ಪ್ರತಿಷ್ಠಾಪನೆಯ ಕಾರ್ಯವನ್ನು ದೇಶವೇ ಎದುರು ನೋಡುತ್ತಿದೆ. ಇದರ ನಡುವೆ ಕಾಂಗ್ರೆಸ್‌ ತನ್ನ ಹಿಂದೂ ವಿರೋಧಿ ನೀತಿಯನ್ನು ಮತ್ತೆ ಪ್ರದರ್ಶಿಸಿದೆ. ಬಂಧಿಸಿರುವ ಹಿರಿಯ ಕರಸೇವಕರ ಮೇಲಿನ ಕೇಸನ್ನು ಹಿಂಪಡೆದು ತಕ್ಷಣ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಮೇಯರ್‌ ಎಚ್ಚರಿಸಿದರು.

ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್‌ ಶೇಣವ, ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ಸತೀಶ್‌ ಕುಂಪಲ, ಕಸ್ತೂರಿ ಪಂಜ, ರಾಮದಾಸ ಬಂಟ್ವಾಳ, ಹರಿಕೃಷ್ಣ ಬಂಟ್ವಾಳ, ಕ್ಯಾಪ್ಟನ್‌ ಬೃಜೇಶ್‌ ಚೌಟ ಮತ್ತಿತರರು ಇದ್ದರು. ರಾಮಭಕ್ತರ ಮೇಲಿನ ಪ್ರಕರಣ ಕೈಬಿಡಲು ಆಗ್ರಹ: ಶ್ರೀರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ದಾಖಲಾದ ಸುಳ್ಳು ಪ್ರಕರಣಗಳನ್ನು ರಾಜ್ಯ ಸರ್ಕಾರ ತಕ್ಷಣ ಕೈಬಿಡಬೇಕು ಮತ್ತು ಯಾವುದೇ ಕಾರಣಕ್ಕೂ ರಾಮಭಕ್ತರನ್ನು ಬಂಧಿಸಬಾರದು. ಮರುತನಿಖೆ ಹೆಸರಿನಲ್ಲಿ ಬಂಧಿಸಿದರೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಹೇಳಿದ್ದಾರೆ.

ಶ್ರೀರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ದಾಖಲಾದ ಸುಳ್ಳು ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರವು ಹೇರಲು ಪಿತೂರಿ ನಡೆಸುತ್ತಿದೆ. 30-35 ವರ್ಷಗಳಷ್ಟು ಹಳೆಯ ಪ್ರಕರಣಗಳಲ್ಲಿನ ಅನೇಕರು ಸಾವನ್ನಪ್ಪಿದ್ದಾರೆ ಮತ್ತು ಉಳಿದವರು 70ರಿಂದ 80 ವರ್ಷದೊಳಗಿನವರು. ಈ ಪ್ರಕರಣವನ್ನು ಮರುತನಿಖೆ ನಡೆಸುವ ಮೂಲಕ ರಾಮಭಕ್ತರನ್ನು ಹಿಂಸಿಸಲಾಗತ್ತಿದೆ. ಶ್ರೀರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ದಾಖಲಾಗಿದ್ದ ಸುಳ್ಳು ಪ್ರಕರಣಗಳು ಹೆಚ್ಚಿನವು ಬೋಗಸ್ ಆಗಿದ್ದರಿಂದ ಹಿಂದಿನ ಕೆಲವು ಸರ್ಕಾರಗಳು ಅವುಗಳನ್ನು ರದ್ದುಗೊಳಿಸಿದವು. ಇಂದು ಆ ಕೇಸನ್ನು ಮರುತನಿಖೆ ನಡೆಸಲು ಆದೇಶಿಸಿ ಕಾರ್ಯಕರ್ತರನ್ನು ಮತ್ತೆ ಬಂಧಿಸಲಾಗುತ್ತಿದೆ. ಇದು ಖಂಡನೀಯ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.