ಡಿಸ್ನಿಲ್ಯಾಂಡ್ ಯೋಜನೆ ಕೈಬಿಡುವಂತೆ ಬಿಜೆಪಿ ಮನವಿ

| Published : Aug 01 2024, 12:18 AM IST

ಡಿಸ್ನಿಲ್ಯಾಂಡ್ ಯೋಜನೆ ಕೈಬಿಡುವಂತೆ ಬಿಜೆಪಿ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಡಿಸ್ನಿಲ್ಯಾಂಡ್ ಮಾದರಿಯ ಪಾರ್ಕ್ ನಿರ್ಮಾಣ ಮಾಡ ಹೊರಟಿರುವುದು ಖಂಡನೀಯ. ಈ ವ್ಯಾಪ್ತಿಗೆ ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಟಿ.ನರಸೀಪುರದ ೧೯ ಗ್ರಾಮಗಳು ಸೇರುತ್ತವೆ. ರಂಗನತಿಟ್ಟು ಕನ್ನಡಿಗರ ಹೆಮ್ಮೆ. ದೇಶ- ವಿದೇಶದಿಂದ ಸಾವಿರಾರು ಪಕ್ಷಿಗಳು ತಮ್ಮ ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುತ್ತವೆ. ಮಾತ್ರವಲ್ಲದೆ ಒಳ್ಳೆ ಪ್ರವಾಸಿ ತಾಣವು ಆಗಿದೆ. ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ಅದಾಯವಿದೆ. ರೈತರು ಈ ಯೋಜನೆಯಿಂದ ತಮ್ಮ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿಯಲ್ಲಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡಲು ಹೊರಟಿರುವ ಯೋಜನೆಯನ್ನು ರಾಜ್ಯಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಡೀಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಮುಖಂಡರು, ರಾಜ್ಯ ಸರ್ಕಾರದ ನಡೆ ಸರಿಯಲ್ಲ. ಈ ಯೋಜನೆಯಿಂದ ಕೂಡಲೇ ಹಿಂದೆ ಸರಿಯಬೇಕು ಎಂಬುದೂ ಸೇರಿ ಇತರೆ ವಿಚಾರಗಳುಳ್ಳ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಕೋರಿದರು.

ಸುಪ್ರೀಂಕೋರ್ಟ್ ಆದೇಶದನ್ವಯ ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಧಾಮಗಳ ವ್ಯಾಪ್ತಿಯ ೧೦ ಕಿ.ಮೀ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಬೇಕು. ಜತೆಗೆ, ರಾಷ್ಟ್ರೀಯ ವನ್ಯಜೀವಿ ಮಂಡಳಿಯು ೨೦೦೨ರಲ್ಲಿ ಅಳವಡಿಸಿಕೊಂಡಿರುವ ವನ್ಯಜೀವಿ ಸಂರಕ್ಷಣಾ ಕಾರ್ಯತಂತ್ರದ ಅನ್ವಯ ಎಲ್ಲ ವನ್ಯಜೀವಿ ಪಕ್ಷಿಧಾಮದ ವ್ಯಾಪ್ತಿಯ ಪ್ರದೇಶವನ್ನು ಸೂಕ್ಷ್ಮ ವಲಯವೆಂದು ಘೋಷಿಸುವುದು ಕಡ್ಡಾಯ ಎಂದು ತೀರ್ಪು ನೀಡಿದೆ. ಅದರಂತೆ ಹರಿಯಾಣ, ಗುಜರಾತ್, ಮಿಜೋರಾಂ, ಮೇಘಾಲಯ, ಅಸ್ಸಾಂ ಹಾಗೂ ಗೋವಾ ರಾಜ್ಯಗಳು ಮಾತ್ರ ಸೂಕ್ಷ್ಮ ವಲಯ ಘೋಷಣೆಗೆ ಮುಂದಾಗಿದ್ದವು. ಉಳಿದ ರಾಜ್ಯಗಳು ಹಿಂದೇಟು ಹಾಕಿದ್ದವು. ಹೀಗಾಗಿ ೨೦೦೬ರ ಡಿ. ೪ರಂದು ತ್ವರಿತವಾಗಿ ಸೂಕ್ಷ್ಮವಲಯ ಘೋಷಿಸುವಂತೆ ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳಿಗೂ ಸೂಚಿಸಿತ್ತು. ಈ ನಡುವೆ ೨೦೧೧ರ ಫೆ. ೯ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿತ್ತು. ಆದರೆ, ಇಂದಿಗೂ ಹಲವು ರಾಜ್ಯಗಳು ಸೂಕ್ಷ್ಮವಲಯ ಘೋಷಣೆಗೆ ಮುಂದಾಗಿಲ್ಲ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಮಾರ್ಗಸೂಚಿ ಅನ್ವಯ ಸೂಕ್ಷ್ಮ ಪರಿಸರ ವಲಯ ಘೋಷಣೆ ಸಂಬಂಧ ಪ್ರಸ್ತಾವ ಸಲ್ಲಿಸುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸರ್ಕಾರಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಪತ್ರ ಬರೆದಿದೆ. ಶ್ರೀರಂಗಪಟ್ಟಣದ ರಂಗನ ತಿಟ್ಟು, ಅರಕೆರೆಯ ಗೆಂಡೆ ಹೊಸಹಳ್ಳಿ ದ್ವೀಪಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮಪರಿಸರ ವಲಯ ಎಂದು ವಿಶೇಷ ಗೆಜೆಟ್‌ನಲ್ಲಿ ಘೋಷಣೆ ಮಾಡಿದೆ. ಜತೆಗೆ ಈ ವಲಯದ ೧೦ ಕಿ.ಮೀ ವ್ಯಾಪ್ತಿಯೊಳಗೆ ಗಣಿಗಾರಿಕೆ ಮಾಡುವುದು ನಿಷೇಧ. ಕ್ವಾರಿ, ಜಲ್ಲಿ ಕ್ರಷರ್, ಕೈಗಾರಿಕೆ, ವಾಣಿಜ್ಯ ಹೋಟೆಲ್, ಸಾಮಿಲ್ ಸ್ಥಾಪಿಸುವಂತಿಲ್ಲ. ಜಲವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೂ ನಿಷೇಧ ಹೇರಲಾಗಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಡಿಸ್ನಿಲ್ಯಾಂಡ್ ಮಾದರಿಯ ಪಾರ್ಕ್ ನಿರ್ಮಾಣ ಮಾಡ ಹೊರಟಿರುವುದು ಖಂಡನೀಯ. ಈ ವ್ಯಾಪ್ತಿಗೆ ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಟಿ.ನರಸೀಪುರದ ೧೯ ಗ್ರಾಮಗಳು ಸೇರುತ್ತವೆ. ರಂಗನತಿಟ್ಟು ಕನ್ನಡಿಗರ ಹೆಮ್ಮೆ. ದೇಶ- ವಿದೇಶದಿಂದ ಸಾವಿರಾರು ಪಕ್ಷಿಗಳು ತಮ್ಮ ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುತ್ತವೆ. ಮಾತ್ರವಲ್ಲದೆ ಒಳ್ಳೆ ಪ್ರವಾಸಿ ತಾಣವು ಆಗಿದೆ. ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ಅದಾಯವಿದೆ. ರೈತರು ಈ ಯೋಜನೆಯಿಂದ ತಮ್ಮ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಆದ್ದರಿಂದ ಯೋಜನೆಯನ್ನು ಮಳವಳ್ಳಿ ತಾಲೂಕಿನ ಗಗನಚುಕ್ಕಿಗೆ ಸ್ಥಳಾಂತರಿಬೇಕು. ಇದರಿಂದಾಗಿ ಆ ಭಾಗದ ಪ್ರವಾಸೋದ್ಯಮ ಬೆಳೆಯುವುದರ ಜತೆಗೆ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಪ್ರಸನ್ನಕುಮಾರ್, ನಂದೀಶ್, ಚಂದ್ರ ಇತರರಿದ್ದರು.