ಕೊನೆಗೂ ರಾಯಚೂರು ಬಿಜೆಪಿ ಬಂಡಾಯ ಶಮನ

| Published : Apr 14 2024, 01:49 AM IST / Updated: Apr 14 2024, 08:27 AM IST

ಸಾರಾಂಶ

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ ವಿಚಾರದಲ್ಲಿ ಉಂಟಾಗಿದ್ದ ಬಂಡಾಯ ಕೊನೆಗೂ ಶಮನಗೊಂಡಿದೆ 

  ರಾಯಚೂರು :  ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ ವಿಚಾರದಲ್ಲಿ ಉಂಟಾಗಿದ್ದ ಬಂಡಾಯ ಕೊನೆಗೂ ಶಮನಗೊಂಡಿದೆ. ಮಾಜಿ ಸಂಸದ ಬಿ.ವಿ.ನಾಯಕ ಅವರನ್ನು ಬಿಟ್ಟು ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕಗೆ ಮತ್ತೊಮ್ಮೆ ಟಿಕೆಟ್ ನೀಡಿದ್ದಕ್ಕೆ ಬಂಡಾಯ ಉಂಟಾಗಿತ್ತು. ಬಿ.ವಿ.ನಾಯಕ ಬೆಂಬಲಿಗರು ಹಲವಾರು ರೀತಿಯಲ್ಲಿ ಅಸಮಾಧಾನದ ಆಕ್ರೋಶ ಹೊರಹಾಕಿದ್ದರು.

ಬಂಡಾಯ ಶಮನಕ್ಕಾಗಿ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್‌ ಅಗರ್ವಾಲ್‌, ಕಾರ್ಯದರ್ಶಿ ಪಿ.ರಾಜೀವ್‌ ಅವರು ಮಧ್ಯ ಪ್ರವೇಶ ಮಾಡಿ ಅವರು ಸ್ಥಳೀಯ ಐಡಿಎಸ್‌ಎಂಟಿ ಬಡಾವಣೆಯಲ್ಲಿರುವ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ ಮನೆಯಲ್ಲಿ ಟಿಕೆಟ್‌ ವಂಚಿತ ಬಿ.ವಿ.ನಾಯಕ ಹಾಗೂ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರೊಂದಿಗೆ ಸಮಾಲೋಚನೆ ನಡೆಸಿ ಸಂಧಾನ ಮಾಡಿ ಬಂಡಾಯ ಶಮನಗೊಳಿಸಿದರು.

ಸಂಘಟನಾತ್ಮಕ ಸಭೆಯಲ್ಲಿ ಗಲಾಟೆ: ನಂತರ ನಗರದ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ನಡೆದ ಪಕ್ಷದ ಸಂಘಟನಾತ್ಮಕ ಸಭೆಯಲ್ಲಿ ಬಿ.ವಿ.ನಾಯಕ ಅಭಿಮಾನಿಗಳು ಗದ್ದಲ ಮಾಡಿ, ಕಾರ್ಯಕರ್ತರ ಮೇಲೆ ಹಲ್ಲೆಗೂ ಯತ್ನಿಸಿದ್ದರು. ರಾಧಾಮೋಹನ್ ಅಗರ್ವಾಲ್‌, ಪಿ.ರಾಜೀವ್‌ ಇತರೆ ಮುಖಂಡರ ಉಪಸ್ಥಿತಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಬಿ.ವಿ ನಾಯಕ ಅವರ ಬೆಂಬಲಿಗರು ಬಿ.ವಿ ನಾಯಕ ಪರ ಜೈಕಾರ ಹಾಕಿ ‘ಗೋ ಬ್ಯಾಕ್ ರಾಜಾ ಅಮರೇಶ್ವರ ನಾಯಕ’ ಘೋಷಣೆ ಕೂಗಿದರು. ಬಿ.ವಿ. ನಾಯಕ ಆಗಮಿಸಿದ ನಂತರ ಪರಿಸ್ಥಿತಿ ತಿಳಿಗೊಂಡಿತು.

ನಂತರ ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯದ ನಾಯಕರು, ಪಕ್ಷದ ಹೈಕಮಾಂಡ್‌ ರಾಜಾ ಅಮರೇಶ್ವರ ನಾಯಕ ಅವರಿಗೆ ಟಿಕೆಟ್‌ ನೀಡಿದ್ದು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ತಿಳಿಸಿದರು. ಇದೇ ವೇಳೆ ಟಿಕೆಟ್‌ ವಂಚಿತ ಬಿ.ವಿ.ನಾಯಕ ಅವರಿಂದಲೆನೇ ರಾಜಾ ಅಮರೇಶ್ವರ ನಾಯಕಗೆ ಬಿ.ಫಾರಂನನ್ನು ಹಸ್ತಾಂತರಿಸುವುದರ ಮುಖಾಂತರ ಬಂಡಾಯಕ್ಕೆ ಇತಿಶ್ರೀ ಹಾಡಿದರು.