ಸಾರಾಂಶ
ಜನರಿಗೆ ಬದುಕಲು ಅವಕಾಶಗಳನ್ನು ಕಲ್ಪಿಸಿಕೊಡುವ ಬದಲು ಗ್ಯಾರಂಟಿಗಳನ್ನು ಕೊಟ್ಟು ಜನರ ದಾರಿ ತಪ್ಪಿಸುವಂತಹ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆರೋಪಿಸಿದ್ದಾರೆ.
ಮುಂಡಗೋಡ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ ಎಂಬುದು ಕಾಂಗ್ರೆಸ್‌ನವರಿಗೂ ಗೊತ್ತಾಗಿರುವುದರಿಂದ ಇಲ್ಲಸಲ್ಲದ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಮತ ಕೇಳಲು ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.
ಶನಿವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರಿಗೆ ಬದುಕಲು ಅವಕಾಶಗಳನ್ನು ಕಲ್ಪಿಸಿಕೊಡುವ ಬದಲು ಗ್ಯಾರಂಟಿಗಳನ್ನು ಕೊಟ್ಟು ಜನರ ದಾರಿ ತಪ್ಪಿಸುವಂತಹ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಖಜಾನೆಯಲ್ಲಿ ಹಣವನ್ನು ಇಟ್ಟುಕೊಂಡು ಗ್ಯಾರಂಟಿ ನೀಡಲಿ, ಅದು ಬಿಟ್ಟು ಜನರಿಂದ ಮತ ಪಡೆಯಲು ಗ್ಯಾರಂಟಿ ಆಮಿಷವೊಡ್ಡಿ ಕುತಂತ್ರದಿಂದ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಗ್ಯಾರಂಟಿಗಳನ್ನು ನೀಡಬೇಕಾದರೆ ಬಹುಮತ ಬೇಕು. ಆದರೆ ೫೪೩ ಸ್ಥಾನದಲ್ಲಿ ಕಾಂಗ್ರೆಸ್ ಸ್ಪರ್ಧಿಸಿರುವುದು ಕೇವಲ ೨೩೦ ಸ್ಥಾನದಲ್ಲಿ ಮಾತ್ರ. ಇದರಲ್ಲಿ ಎಲ್ಲರೂ ಗೆಲುವು ಸಾಧಿಸಿದರೂ ಬಹುಮತ ಬರುವುದಿಲ್ಲ. ಅಂದ ಮೇಲೆ ಗ್ಯಾರಂಟಿಗಳನ್ನು ಎಲ್ಲಿಂದ ಕೊಡುತ್ತಾರೆ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಸರ್ಕಾರ ಕೊಲೆಗಾರರಿಗೆ ಪ್ರಚೋದನೆ ನೀಡುವ ಕೆಲಸಕ್ಕೆ ಕೈ ಹಾಕಿದ್ದು, ಒಂದು ಸಮುದಾಯವನ್ನು ಓಲೈಸುವಲ್ಲಿ ನಿರತವಾಗಿದೆ. ಮೊದಲು ಹೆಣ್ಣು ಮಕ್ಕಳಿಗೆ ಜೀವ ರಕ್ಷಣೆ ನೀಡಿ ಬಳಿಕ ಉಚಿತ ಗ್ಯಾರಂಟಿಗಳನ್ನು ನೀಡಲಿ ಎಂದು ಗುಡುಗಿದರು.
ಶಿವರಾಮ ಹೆಬ್ಬಾರರಿಂದ ಲಾಭವು ಇಲ್ಲ ನಷ್ಟವು ಇಲ್ಲ: ಶಿವರಾಮ ಹೆಬ್ಬಾರ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಬಿಜೆಪಿ ಸರ್ಕಾರದಲ್ಲಿ ಅಧಿಕಾರ ಅನುಭವಿಸಿದ್ದಾರೆ. ಈಗ ಅವರ ಮಗನನ್ನು ಮತ್ತೆ ಕಾಂಗ್ರೆಸ್‌ಗೆ ಕಳುಹಿಸಿ ತಾವು ಕೂಡ ಒಂದು ಕಾಲು ಹೊರಗಿಟ್ಟಿದ್ದಾರೆ. ಇದರಿಂದ ಬಿಜೆಪಿಗೆ ಯಾವುದೇ ರೀತಿ ನಷ್ಟವೂ ಇಲ್ಲ, ಲಾಭವು ಆಗುವುದಿಲ್ಲ ಎಂದು ರೂಪಾಲಿ ನಾಯ್ಕ ಸ್ಪಷ್ಟಪಡಿಸಿದರು.ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ವಲಸಿಗರಿಂದ ಬಿಜೆಪಿಗೆ ಯಾವುದೇ ನಷ್ಟವಾಗುವುದಿಲ್ಲ. ಬಿಜೆಪಿಗೆ ಮಧ್ಯಂತರ ಬಂದವರು ವಾಪಸ್ ಹೋಗಿದ್ದಾರೆ. ಸಬಲವಾದ ಕಾರ್ಯಕರ್ತರ ಪಡೆ ಇದ್ದು, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪಡೆದಷ್ಟೇ ಮತಗಳ ಅಂತರದಿಂದ ಬಿಜೆಪಿ ಜಯ ಗಳಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಚುನಾವಣೆಯ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು. ಮಂಡಲಾಧ್ಯಕ್ಷ ಮಂಜುನಾಥ ಪಾಟೀಲ, ಗುರು ಕಾಮತ್, ವಿನಾಯಕ ರಾಯ್ಕರ, ಅಶೋಕ ಚಲವಾದಿ, ವೀಣಾ ಓಶಿಮಠ, ಮಂಜು ಶೇಟ್, ಅಶೋಕ ಮೈನಳ್ಳಿ, ಬಸವರಾಜ ಠಣಕೆದಾರ, ವಿಠ್ಠಲ ಬಾಳಂಬೀಡ, ಭರತರಾಜ ಹದಳಗಿ ಉಪಸ್ಥಿತರಿದ್ದರು.