ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತ ಪರವಾಗಿ ಯಾವುದೇ ಯೋಜನೆಗಳನ್ನೂ ಜಾರಿಗೊಳಿಸಲಿಲ್ಲ. ಬದಲಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ಪರ ಯೋಜನೆ ನಿಲ್ಲಿಸುವ ಮೂಲಕ ರಾಜಕೀಯ ಹಗೆತನವನ್ನು ರೈತರ ಮೇಲೆ ಸಾಧಿಸುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಹಾಗೂ ರೈತ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕ ಸುರೇಶ್‌ಗೌಡ ಮಾತನಾಡಿ, ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತ ಪರವಾಗಿ ಯಾವುದೇ ಯೋಜನೆಗಳನ್ನೂ ಜಾರಿಗೊಳಿಸಲಿಲ್ಲ. ಬದಲಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ಪರ ಯೋಜನೆ ನಿಲ್ಲಿಸುವ ಮೂಲಕ ರಾಜಕೀಯ ಹಗೆತನವನ್ನು ರೈತರ ಮೇಲೆ ಸಾಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ 14.58 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶ ಬೆಳೆ ಹಾನಿಯಾಗಿ 10,748 ಕೋಟಿ ರು. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಪರಿಹಾರ 2251.63 ಕೋಟಿ ರು. ರೈತರ ಬ್ಯಾಂಕ್‌ಗೆ ನೇರವಾಗಿ ಜಮಾ ಆಗಲಿದೆ ಎಂದು ಸರ್ಕಾರ ಹೇಳುತ್ತಿದೆಯಾದರೂ ಇದರ ಸತ್ಯಾಸತ್ಯತೆ ಪರಿಶೀಲಿಸಬೇಕು. ವೈಜ್ಞಾನಿಕ ಸಮೀಕ್ಷೆ ರೈತರ ಪರ ನಿಂತಿಲ್ಲ. ಮರು ಸಮೀಕ್ಷೆ ಆಗಬೇಕು. ಪರಿಹಾರ ಮೊತ್ತ ಹೆಚ್ಚಿಸಬೇಕು. ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿ ಹೆಚ್ಚು ಬೆಳೆ ನಷ್ಟ ಸಂಭವಿಸಿದೆ. ಹಾಗೆಯೇ ಕೃಷ್ಣ ಮತ್ತು ಭೀಮಾ ಜಲಾನಯನ ಪ್ರದೇಶಗಳಲ್ಲಿ ನಿರಂತರ ಒಳ ಹರಿವು ಹೆಚ್ಚಳದಿಂದ ಕಲ್ಬುರ್ಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ತೊಗರಿಬೇಳೆ, ಹೆಸರುಕಾಳು, ಹತ್ತಿ, ಮೆಕ್ಕೆಜೋಳ ಬೆಳೆಗಳಿಗೆ ಅತಿ ಹೆಚ್ಚು ಹಾನಿಯಾಗಿದೆ ಎಂದು ದೂರಿದರು.ಪಶ್ಚಿಮ ಘಟ್ಟಗಳು ಮತ್ತು ಕರಾವಳಿ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಪ್ರಾಣಿ ಮಾನ ಸಂಘರ್ಷ, ಕಾಫಿ ಮತ್ತು ಅಡಿಕೆಗೆ ಕೊಳೆ, ಎಲೆಚುಕ್ಕೆ ರೋಗ, ಮಧ್ಯ ಕರ್ನಾಟಕದಲ್ಲಿ ಈರುಳ್ಳಿ ಮತ್ತು ನೆಲಗಡಲೆ ಬೆಳೆಗೆ ಹಾನಿ, ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ಶೇ. 20ರಷ್ಟು ಉತ್ಪಾದನೆ ಕೊರತೆ, ಬೆಂಗಳೂರು ಗ್ರಾಮಾಂತರ ವಿಭಾಗಗಳಲ್ಲಿ ಸರ್ಕಾರ ಮತ್ತು ರೈತರ ನಡುವೆ ಭೂ ವಿವಾದದ ಸಂಘರ್ಷ ಎದುರಾಗಿದೆ ಎಂದು ಆರೋಪಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತೋಟಗಾರಿಕೆ ಬೆಳೆಗಾರರ ಸಮಸ್ಯೆಗಳು, ಮೈಸೂರು ವಿಭಾಗದಲ್ಲಿ ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಗಳಾ, ಮುಖಂಡರಾದ ಡಾ. ಸಿದ್ದರಾಮಯ್ಯ, ಇಂಡುವಾಳು ಎಸ್.ಸಚ್ಚಿದಾನಂದ, ಯಮದೂರು ಸಿದ್ದರಾಜು, ಶಕುಂತಲಾ, ನರಸಿಂಹಮೂರ್ತಿಗೌಡ, ಸಿ.ಟಿ. ಮಂಜುನಾಥ್, ಎಚ್.ಆರ್. ಅಶೋಕ್‌ಕುಮಾರ್, ಮನು, ಭೀಮೇಶ್, ಮಲ್ಲಿಕಾರ್ಜುನ್, ಎಚ್.ಆರ್. ಅರವಿಂದ್, ನಾಗಾನಂದ, ನರಸಿಂಹಾಚಾರ್, ಕೆ.ಎಂ. ಜವರೇಗೌಡ, ರಾ.ಸಿ. ಸಿದ್ದರಾಜು, ಕೆರಗೋಡು ಮಹೇಶ್, ಶಿವಕುಮಾರ್ ಆರಾಧ್ಯ ಸೇರಿದಂತೆ ನೂರಾರು ಮಂದಿ ಕಾರ್‍ಯಕರ್ತರು ಭಾಗವಹಿಸಿದ್ದರು.