ಬಿಜೆಪಿಗರು ಪಾಕಿಸ್ತಾನದ ರಾಯಭಾರಿಗಳಂತೆ ವರ್ತಿಸ್ತಿದ್ದಾರೆ: ಸಚಿವ ಆರ್‌.ಬಿ. ತಿಮ್ಮಾಪುರ

| Published : Mar 05 2024, 01:37 AM IST

ಬಿಜೆಪಿಗರು ಪಾಕಿಸ್ತಾನದ ರಾಯಭಾರಿಗಳಂತೆ ವರ್ತಿಸ್ತಿದ್ದಾರೆ: ಸಚಿವ ಆರ್‌.ಬಿ. ತಿಮ್ಮಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಗರು ಪಾಕಿಸ್ತಾನದ ರಾಯಭಾರಿಗಳಾಗಿದ್ದಾರೆ. ದಿನಕ್ಕೊಮ್ಮೆಯಾದರೂ ಆ ದೇಶದ ಹೆಸರು ಹೇಳುತ್ತಾರೆ. ಅವರಿಗೆ ಪಾಕಿಸ್ತಾನವೇ ಮನೆ ದೇವರಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಕಟುವಾಗಿ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿಜೆಪಿಗರು ಪಾಕಿಸ್ತಾನದ ರಾಯಭಾರಿಗಳಾಗಿದ್ದಾರೆ. ದಿನಕ್ಕೊಮ್ಮೆಯಾದರೂ ಆ ದೇಶದ ಹೆಸರು ಹೇಳುತ್ತಾರೆ. ಅವರಿಗೆ ಪಾಕಿಸ್ತಾನವೇ ಮನೆ ದೇವರಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಕಟುವಾಗಿ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಪಾಕಿಸ್ತಾನ ಜಿಂದಾಬಾದ್ ಆರೋಪದಲ್ಲಿ ಕಾಂಗ್ರೆಸ್ಸಿಗರೇ ಬಿಜೆಪಿಗರಿಗೆ ಆಹಾರ ಆಗುತ್ತಿದ್ದಾರೆಂಬ ಎಂಬ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, ಎಲ್ಲವನ್ನು ಇವರೇ ಕ್ರಿಯೇಟ್‌ ಮಾಡಿ ಹೇಳುತ್ತಾರೆ ಎಂದರು.

ಅಧಿಕಾರಕ್ಕಾಗಿ ಅಡ್ಡದಾರಿ ಹಿಡೀತಾರೆ:

ಮಂಡ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಅಂದವರ್‍ಯಾರು? ಯಾರು ಏನೇ ಮಾಡಿದರೂ ಪಾಕಿಸ್ತಾನದವರು ಮಾಡಿದರು ಎನ್ನುತ್ತಾರೆ. ಅವರ ಆಡಳಿತಾವಧಿಯಲ್ಲಿ ಸಂಸತ್‌ ಮೇಲೆ ದಾಳಿ ಮಾಡಿದಾಗ ನಾವು ರಾಜಕೀಯಕ್ಕೆ ಉಪಯೋಗಿಸಿಕೊಳ್ಳಲಿಲ್ಲ. ದೇಶಕ್ಕೆ ಅವಮಾನ ಆಗಿದೆ ಎಂದು ನೊಂದುಕೊಂಡೆವು. ಬಿಜೆಪಿಗರ ರೀತಿಯಲ್ಲಿ ನಾವು ರಾಜಕಾರಣ ಮಾಡಲಿಲ್ಲ. ಕಾರ್ಗಿಲ್ ಯುದ್ಧ ಮಾಡಿದಾಗಲೂ ರಾಜಕಾರಣ ಮಾಡಲಿಲ್ಲ. ಆದರೆ ಬಿಜೆಪಿಗರು ಛೋಟಾ, ಮೋಟಾ ಹಿಡಿದು ಎಲ್ಲದಕ್ಕೂ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸ್ತಾನ ಇವರ ಮನೆ ದೇವರು. ಆ ಹೆಸರು ಹೇಳಿಕೊಂಡೇ ಇವರು ಬದುಕೋದು, ಮುಂಜಾನೆ ಎದ್ದ ಕೂಡಲೇ ಇವರ ಬಾಯಲ್ಲಿ ಬರೋದೆ ಪಾಕಿಸ್ತಾನ. ಬಿಜೆಪಿಗರಿಗೆ ಈ ದೇಶದ ಹೆಸರೇ ಗೊತ್ತಿಲ್ಲ. ಪಾಕಿಸ್ತಾನದ ಹೆಸರು ಹೇಳಿ ಬಚಾವಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬಾಂಬ್‌ ಸ್ಫೋಟ ನೋಡಿದ್ದಾರಾ ?

ಬೆಂಗಳೂರು ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಚಿವ ಶರಣಪ್ರಕಾಶ್ ಪಾಟೀಲ್ ಲಘು ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಸಚಿವ ತಿಮ್ಮಾಪುರ, ಬಾಂಬ್ ಸ್ಪೋಟದ್ದು ಯಾರು ಮಾಡಿದ್ದಾರೆ, ? ಏನ್ ಮಾಡಿದ್ದಾರೆ ಎಂದು ವರದಿ ಬರಬೇಕಲ್ಲ,? ಕಾಂಗ್ರೆಸ್ ನವರೇ ಮಾಡಿದ್ದಾರೆ, ಉಗ್ರರು ಮಾಡಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಎಲ್ಲ ಗೊತ್ತಿದ್ದಂತೆ ಮಾತನಾಡುತ್ತಾರೆ. ಬಾಂಬ್‌ ಸ್ಫೋಟದ ಆರೋಪಿ ಗೊತ್ತಿದ್ದಂತೆ ಮಾತನಾಡುತ್ತಾರೆ. ಇವರು ನೋಡಿದ್ದಾರಾ ಸಚಿವ ಶರಣಪ್ರಕಾಶ್ ಹೇಳಿಕೆ‌ ನಾನು ನೋಡಿಲ್ಲ, ನೋಡದೇ ರಿಯಾಕ್ಷನ್ ಕೊಡಲ್ಲ ಎಂದು ಹೇಳಿದರು.

ಪಾಕಿಸ್ತಾನ ಜಿಂದಾಬಾದ್ ಎಂದು ಯಾರು ಅಂದಿದ್ದಾರೆ, ಅದು ಕ್ರಿಯೇಟೆಡ್. ಬಿಜೆಪಿ ಪಾರ್ಟಿಯವರು ಈ ಕೆಲಸ ಮಾಡಿದ್ದಾರೆ. ಇದೆಲ್ಲ ಯಾರು ಮಾಡುತ್ತಿದ್ದಾರೆ, ಏತಕ್ಕೆ ಮಾಡುತ್ತಿದ್ದಾರೆ, ಎಫ್ಎಸ್ಎಲ್ ವರದಿ ಬರುತ್ತೆ. ಸಿಂದಗಿಯಲ್ಲಿ ಪಾಕ್ ಧ್ವಜ ಪ್ರಕರಣ, ಮಂಗಳೂರು ಘಟನಾವಳಿಯಂತೆ, ಎಲ್ಲೋ ಒಂದು ಕಡೆ ಇವರ ಕೈವಾಡ ಇದೆ ಎಂಬ ಭಾವನೆ ಜನರಲ್ಲಿ ಬರುತ್ತಿದೆ ಎಂದರು.

ಮಂಗಳೂರು ಘಟನೆ ಇವರೇ ಕ್ರಿಯೇಟ್ ಮಾಡಿದರು. ಸಿಂದಗಿಯಲ್ಲಿ ಶ್ರೀರಾಮಸೇನೆಯವರು ಸಿಕ್ಕಿ ಹಾಕಿಕೊಂಡರು. ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಆಯ್ತು. ಕಾಂಗ್ರೆಸ್‌ನವರೇ ಮಾಡಿದರು ಎಂದು ಹೇಳುತ್ತಾರೆ. ಇವರು ನ್ಯಾಯಾಧೀಶರಾ? ಪೊಲೀಸರಾ ಅಲ್ಲಿ ಹೋಗಿ ನಿಂತಿದ್ದರಾ? ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಆದಾಗ ಇವರ ಸಿಎಂ ರಾಜೀನಾಮೆ ಕೊಟ್ಟರಾ ಎಂದು ಪ್ರಶ್ನಿಸಿದರು.

ಬಿಜೆಪಿಗರು ಎಂತಹ ದೇಶದ್ರೋಹಿಗಳು ಎಂದರೆ ಇವರಿಗೆ ದೇಶ, ಧರ್ಮ ಬೇಕಾಗಿಲ್ಲ. ಇವರಿಗೆ ಬೇಕಾಗಿರೋದು ಅಧಿಕಾರ ಮಾತ್ರ. ಪವರ್‌ ಹಿಡಿದು ಏನೆಲ್ಲ ನಾಟಕ ಮಾಡುತ್ತಿದ್ದಾರೆ. ಇದು ಈ ದೇಶದ ದುರ್ದೈವ ಎಂದ ಅವರು, ಅಧಿಕಾರಕ್ಕಾಗಿ ಎಂತಹ ಅಡ್ಡದಾರಿಯನ್ನಾದರೂ ಹಿಡಿಯಲು ಸಿದ್ಧರಿದ್ದಾರೆ ಎಂದು ಆರೋಪಿಸಿದರು.

ದಲಿತ ಆಗಿ ನಾನು ಹಿಂದು ಎಂದು ಹೇಳಿಕೊಳ್ತಿದಿನಿ: ದಲಿತ ಆಗಿ ನಾನು ಹಿಂದು ಅಂತ ಹೇಳಿಕೊಳ್ಳುತ್ತಿದ್ದೀನಿ, ಮಂದಿರದ ಒಳಗೆ ಬಿಡದೆ ಇದ್ದರೂ ಹಿಂದು ಎಂದು ಹೇಳಿಕೊಳ್ಳುತ್ತಿದ್ದೇನೆ. ನಮಗೆ ಹನುಮಂತ, ಸೀತಾ, ರಾಮ ಎಲ್ಲರೂ ಅಷ್ಟೇ. ಅವರೆಲ್ಲರೂ ಹಿಂದುಗಳಿಗೆ ದೇವರು, ನನ್ನ ಭಕ್ತಿ ನನ್ನದು, ಅವರ ಭಕ್ತಿ ಅವರದು. ಬಿಜೆಪಿಗರು ಹೇಳಿದಲ್ಲೇ ನಾವು ಹೋಗಬೇಕಿಲ್ಲ, ರಾಮಮಂದಿರಕ್ಕೆ ಕರೆದಿಲ್ಲ, ಸಿದ್ದರಾಮಯ್ಯನವರು ಹೋಗಿಲ್ಲ. ಶ್ರೀರಾಮ ಎಂದರೆ ಬಿಜೆಪಿಗರ ಮನೆ ಆಸ್ತಿನಾ? ಹಿಂದು ಧರ್ಮ ಎಲ್ಲರ ಆಸ್ತಿ. ಹಿಂದು ಧರ್ಮದಲ್ಲಿ ಎಲ್ಲರೂ ಸರಿಸಮಾನರು ಎಂದು ಬಿಜೆಪಿಗರು ಎಂದಾದರೂ ಹೇಳಿದ್ದಾರಾ? ಎಂದು ಪ್ರಶ್ನೆ ಮಾಡಿದರು.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಕಾಂಗ್ರೆಸ್‌ ಪಟ್ಟಿ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆ ಆಗಿದೆಯಾ? ಕರ್ನಾಟಕದ್ದು ಯಾಕೆ ಮಾಡಲಿಲ್ಲ? ನಮ್ಮ ಅಭ್ಯರ್ಥಿಗಳ ಪಟ್ಟಿಯನ್ನೂ ರಿಲೀಸ್‌ ಮಾಡುತ್ತೇವೆ. ಅದಕ್ಕಾಗಿ ಮೀಟಿಂಗ್‌ಗಳು ನಡೆಯುತ್ತಿವೆ. ನಾವು ಚುನಾವಣೆಗೆ ತಯಾರಿದ್ದೇವೆ ಎಂದರು. ಕಾಂಗ್ರೆಸ್ ಸೇನಾನಿ ಯಾರು ಎಂಬ ಪ್ರಶ್ನೆಗೆ ಮಲ್ಲಿಕಾರ್ಜನ ಖರ್ಗೆಜಿ ನಮ್ಮ ಸೇನಾನಿ. ಹಿ ಈಸ್ ಎಐಸಿಸಿ ಪ್ರೆಸಿಡೆಂಟ್. ಮತ್ಯಾಕ ಬೇಕು ನಮಗೆ ಸೇನಾನಿ ಎಂದು ಮರುಪ್ರಶ್ನೆ ಹಾಕಿದರು.

ರಾಜ್ಯದಲ್ಲಿ ಭೀಕರ ಬರ ಆವರಿಸಿರುವ ಕುರಿತು ಮಾತನಾಡಿದ ಸಚಿವರು, ರಾಜ್ಯದ ಜನರಿಗೆ ನಾವು ಫ್ರೀ ಕರೆಂಟ್, ಬಸ್ ಫ್ರೀ ಕೊಡುತ್ತಿದ್ದಿವಿ, ಆದರೆ, ಕೇಂದ್ರ ಸರ್ಕಾರದವರು ಏನನ್ನೂ ಕೊಡುತ್ತಿಲ್ಲ. ರಾಜ್ಯದಲ್ಲಿ ಬರ ಬಿದ್ದಿದೆ. ಇಲ್ಲಿನ ಎಂಪಿಗಳು ಬಾಯಿ ಬಿಡುತ್ತಿಲ್ಲ, ರಾಜ್ಯದ ಎಂಪಿಗಳು ಎಲ್ಲಿದ್ದಾರೆ ರಾಜ್ಯದಲ್ಲಿ ಇದ್ದಾರಾ? ಬರಗಾಲ ವೀಕ್ಷಣೆ ಮಾಡಿದ್ದಾರಾ? ಇಂತಹ ಎಂಪಿಗಳು ನಮ್ಮ ರಾಜ್ಯಕ್ಕೆ ಬೇಕಾ, ಬಿಜೆಪಿಗರಿಗೆ ಏನಿದ್ದರೂ ಶ್ರೀರಾಮ್ ಜಯರಾಮ್, ಮೋದಿಜಿ ಈ ಮೂವರಷ್ಟೇ. ಆದರೆ, ಜನ ಮೂರ್ಖರಲ್ಲ ಬಿಜೆಪಿಗರ ಅಟಾಟೋಪ ನೋಡುತ್ತಿದಾರೆ. ತಕ್ಕ ಪಾಠ ಕಲಿಸಲಿದ್ದಾರೆ ಎಂದರು.