ಸಾರಾಂಶ
- ಹಾಲಿ ಸಂಸದರು ತಮ್ಮ ಗೆಲುವಿಗೆ ಕಾರಣ ಬಿಜೆಪಿಯ ಕೆಲವರು ಕಾರಣವೆಂದಿದ್ದು, ಆ ಕೆಲವರು ಯಾರು-ರೇಣು ತಂಡಕ್ಕೆ ಪ್ರಶ್ನೆ-ದಾವಣಗೆರೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು, ರವೀಂದ್ರನಾಥ ಅಲ್ಲ, ಪಕ್ಷದ ಸಾವಿರಾರು ಕಾರ್ಯಕರ್ತರು-ಯಶವಂತ ರಾವ್ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಬಿಜೆಪಿ ಭದ್ರಕೋಟೆ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ನಾವು ಕಳೆದುಕೊಳ್ಳುವುದಕ್ಕೆ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ ನೇತೃತ್ವದ ಸ್ವಯಂ ಘೋಷಿತ ಲಗಾನ್ ಟೀಂ, ಡೆಲ್ಲಿ ಬಾಯ್ಸ್ ತಂಡದ ಪೂರ್ವ ನಿರ್ಧಾರಿತ ಕುತಂತ್ರವೇ ಕಾರಣ ಎಂದು ಪಕ್ಷದ ಮಾಜಿ ಶಾಸಕರು, ಹಿರಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ಎಸ್.ಎಂ. ವೀರೇಶ ಹನಗವಾಡಿ, ಲೋಕಸಭೆ ಚುನಾವಣೆ ಪೂರ್ವದಲ್ಲಿ ರೇಣುಕಾಚಾರ್ಯ ತಾವೇ ಅಭ್ಯರ್ಥಿಯೆಂದು ಹಾಗೂ ಪಕ್ಷದ ಅಭ್ಯರ್ಥಿ ಘೋಷಣೆ ನಂತರ ಚುನಾವಣೆವರೆಗೂ ಗೊಂದಲ ಜೀವಂತವಿಟ್ಟರು. ಆ ಮೂಲಕ ನಮ್ಮ ಪಕ್ಷದ ಸೋಲಿಗೆ ಕಾರಣವಾಗಿದ್ದಾರೆ. ಇಂಥವರಿಗೆ ಭಂಡತನವೇ ಬಂಡವಾಳವಾಗಿದೆ. ಇಂತಹವರ ಬಂಡವಾಳ ನಮಗೂ ಗೊತ್ತಾಗಿದೆ ಎಂದರು.
ನನ್ನ ಕಾರ್ಯವೈಖರಿ ನೋಡಿ ಕ್ಷೇತ್ರದ ಚುನಾವಣಾ ಸಂಚಾಲಕರಾಗಿ ರಾಜ್ಯಾಧ್ಯಕ್ಷರು ನೇಮಿಸಿದ್ದರು. ಆದರೆ, ನನ್ನನ್ನು ಬದಲಿಸುವಂತೆ ನನ್ನ ಮುಂದೆಯೇ ಕಾಡಿಬೇಡಿ, ಸ್ಥಾನ ಪಡೆದುಕೊಂಡರೂ ಬಿಜೆಪಿ ಗೆಲುವಿಗಾಗಿ ಯಾವುದೇ ಸಭೆ, ಚರ್ಚೆ ಮಾಡಲೇ ಇಲ್ಲ. ಹೊನ್ನಾಳಿಗೆ ಪ್ರಚಾರಕ್ಕೆ ಬರಲಿದ್ದ ಮಾಜಿ ಸಚಿವ ಮಾಧುಸ್ವಾಮಿ, ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರ ಬರದಂತೆ ನೋಡಿಕೊಂಡಿದ್ದೂ ಇದೇ ತಂಡ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪ್ರಚಾರಕ್ಕೆ ಹೋದ ಕಡೆ ಹಿಂಬಾಲಕರ ಮೂಲಕ ಇಲ್ಲಸಲ್ಲದ ಪ್ರಶ್ನೆ ಕೇಳುವಂತೆ ಮಾಡಿದರು ಎಂದು ವೀರೇಶ ಹನಗವಾಡಿ ಕಿಡಿಕಾರಿದರು.ಹೇಳಿಕೆ ಹಿಂದಿನ ಸತ್ಯವೇನು?:
ಹೊನ್ನಾಳಿಗೆ ನಾನು ಹೋಗದಂತೆ ಒತ್ತಡ ಹೇರಿಸಿದ್ದರು. ಪಕ್ಷವೇನು ರೇಣುಕಾಚಾರ್ಯ, ರವೀಂದ್ರನಾಥ್ ಆಸ್ತಿಯೇ? ಸ್ವತಃ ರೇಣುಕಾಚಾರ್ಯರ ಸ್ವಗ್ರಾಮ ಕುಂದೂರಿನಲ್ಲಿ ಕಾಂಗ್ರೆಸ್ಸಿಗೆ 651 ಮತದ ಮುನ್ನಡೆ ಸಿಕ್ಕಿದೆ. ಬಿಜೆಪಿ ಕಾರ್ಯಕರ್ತರು ಸೋಲಿಗೆ ಎಂದಿಗೂ ಅಂಜಲ್ಲ. ಪಕ್ಷದ ಅಭ್ಯರ್ಥಿ ಸೋಲಿಗೆ ಲಗಾನ್ ತಂಡದ ನಾಯಕರು, ತಂಡ ನಡೆದುಕೊಂಡ ರೀತಿ ಕಾರಣ. ಇಂತಹ ಕುತಂತ್ರಗಳಿಂದಲೇ ಪಕ್ಷಕ್ಕೆ ಸೋಲಾಗಿದೆ. ಸ್ವತಃ ಕಾಂಗ್ರೆಸ್ಸಿನ ನೂತನ ಸಂಸದರೇ ತಮ್ಮ ಗೆಲುವಿಗೆ ಬಿಜೆಪಿಯ ಕೆಲವರ ಸಹಕಾರ ಕಾರಣ ಎಂದು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ಸಂಸದರು ಚುನಾವಣೆ ಪೂರ್ವದಲ್ಲಿ ಯಾರನ್ನು ಭೇಟಿ ಮಾಡಿದ್ದರು, ಏನು ಮಾಡಿದ್ದರೆಂಬ ವಿಚಾರವೂ ಎಲ್ಲರಿಗೆ ಗೊತ್ತಿದೆ ಎಂದು ಹೇಳಿದರು.ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿ ಆಗಬೇಕೆಂಬುದು ಗೊತ್ತಿದ್ದರೂ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದೆವು. ದಾವಣಗೆರೆ ಕ್ಷೇತ್ರದಲ್ಲಿ ಕುತಂತ್ರದಿಂದ ಆಗಿರುವ ಸೋಲು ಬಿಜೆಪಿಯಷ್ಟೇ ಅಲ್ಲ, ನರೇಂದ್ರ ಮೋದಿಯವರ ಸೋಲಾಗಿದೆ. ನನಗೆ ಹೊನ್ನಾಳಿಗೆ ಕಾಲಿಡದಂತೆ ರೇಣುಕಾಚಾರ್ಯ ಹೇಳಿದ್ದು, ಗಲಾಟೆ ಮಾಡಿಸುತ್ತಾರಾ? ಹೇಳಿ ಯಾವ ಊರಿಗೆ, ಯಾವ ದಿನ, ಸಮಯಕ್ಕೆ ಬರಬೇಕು. ನಾನೊಬ್ಬನೇ ಬರುತ್ತೇನೆ. ಏನು ಮಾಡುತ್ತೀರಿ ಎಂದು ರೇಣುಕಾಚಾರ್ಯಗೆ ಸವಾಲು ಹಾಕಿದರು.
ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಮಾತನಾಡಿ, ಸತತ 7 ವರ್ಷ ಮಂತ್ರಿಯಾಗಿದ್ದ ರವೀಂದ್ರನಾಥ್ ತಮ್ಮ ನಿವಾಸಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬರುತ್ತೇವೆಂದಾಗ ಬರದಂತೆ ಹೇಳಬಹುದಿತ್ತು. ಒಬ್ಬ ಸಾಮಾನ್ಯ ಕಾರ್ಯಕರ್ತರಿಗೆ ಇರುವ ಸಾಮಾನ್ಯಜ್ಞಾನವೂ ರವೀಂದ್ರನಾಥ್‌ರಿಗೆ ಇಲ್ಲವೇ? ರೇಣುಕಾಚಾರ್ಯ ನಾಟಕ, ಬ್ಲಾಕ್‌ಮೇಲ್, ಕುತಂತ್ರ ಎಲ್ಲವೂ ಎಲ್ಲರಿಗೂ ಗೊತ್ತಿದೆ. ಇನ್ನಾದರೂ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ಪೈಲ್ವಾನ್‌ಗಿರಿ ಏನೆಂಬುದನ್ನು ಇನ್ನು ಮೇಲೆ ತೋರಿಸಬೇಕಾಗುತ್ತದೆ. ಇದು ರವೀಂದ್ರನಾಥ್ ಕಟ್ಟಿದ ಪಕ್ಷವಲ್ಲ. ಸಾವಿರಾರು ಕಾರ್ಯಕರ್ತರು ಹಗಲಿರುಳು, ಶ್ರಮಿಸಿ ಕಟ್ಟಿದ ಪಕ್ಷ ಎಂದು ಎಚ್ಚರಿಸಿದರು.ಹಿರಿಯ ಮುಖಂಡ ಎಚ್.ಎಸ್.ಶಿವಕುಮಾರ ತುಮ್ಕೋಸ್ ಮಾತನಾಡಿ, ಚನ್ನಗಿರಿ ಸುದ್ದಿಗೆ ರೇಣುಕಾಚಾರ್ಯ ಬರುವುದೇ ಬೇಡ. ತಮ್ಮ ಹೊನ್ನಾಳಿ ಕ್ಷೇತ್ರದಲ್ಲಿ ಕೆಲಸ ಮಾಡಲಿ. ಇದೇರೀತಿ ಮುಂದುವರಿದರೆ ನಾನು ಹೊನ್ನಾಳಿಗೆ ಬಂದು ಸುದ್ದಿಗೋಷ್ಟಿ ಮಾಡುತ್ತೇನೆ. ನನಗೇನೂ ಯಾರ ಹೆದರಿಕೆಯೂ ಇಲ್ಲ. ಇಲ್ಲಿಗೆ ಎಲ್ಲವನ್ನೂ ನಿಲ್ಲಿಸಿ, ಪಕ್ಷ ಕಟ್ಟುವ ಕೆಲಸ ಮಾಡೋಣ. ಲೋಕಸಭೆ ಚುನಾವಣೆ ಟಿಕೆಟ್ ಘೋಷಣೆಗಿಂತ ಮುಂಚಿನಿಂದ ಈವರೆಗಿನ ಎಲ್ಲಾ ವಿಚಾರವನ್ನು ವರಿಷ್ಟರ ಗಮನಕ್ಕೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದ್ರೋಹ ಬಗೆದವರಿಗೆ ಶಿಕ್ಷೆಯೂ ಆಗಲಿದೆ. ಕಾದು ನೋಡಿ ಎಂದು ಸೂಚ್ಯವಾಗಿ ತಿಳಿಸಿದರು.
ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ನಿಕಟಪೂರ್ವ ಜಿಲ್ಲಾಧ್ಯಕ್ಷ ಅಣಬೇರು ಜೀವನಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ, ಉಪ ಮೇಯರ್ ಯಶೋಧ ಯೋಗೇಶ, ಪಾಲಿಕೆ ಸದಸ್ಯೆ ಗಾಯತ್ರಿ ಖಂಡೋಜಿರಾವ್, ದೂಡಾ ಮಾಜಿ ಅಧ್ಯಕ್ಷರಾದ ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಎನ್.ಎ.ಮುರುಗೇಶ, ಮಾಯಕೊಂಡ ಜಿ.ಎಸ್.ಶ್ಯಾಮ್, ರಮೇಶ ನಾಯ್ಕ, ಸುರೇಶ ಗಂಡಗಾಳೆ ಇತರರು ಇದ್ದರು.- - -
ಕೋಟ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿದವರ ಪರ ರೇಣುಕಾಚಾರ್ಯ ನಿಂತಿದ್ದಾರೆ. ನನ್ನ ಮತ್ತವರ ಮಧ್ಯೆ ಯಾವುದೇ ವಿರಸ, ದ್ವೇಷವೂ ಇಲ್ಲ. ನಾನು ಅರಿಗೆ ದ್ರೋಹವನ್ನೂ ಬಗೆದಿಲ್ಲ. ಯಾರಿಗೂ ಯಾರಲ್ಲೂ ವಿರಸ ಬೇಡ. ಎಲ್ಲವನ್ನೂ ಇಲ್ಲಿಗೆ ನಿಲ್ಲಿಸೋಣ, ಮತ್ತೆ ಪಕ್ಷವನ್ನು ಸದೃಢವಾಗಿ ಕಟ್ಟುವ ಕೆಲಸ ಮಾಡೋಣ. ಶೀಘ್ರವೇ ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿವೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ- ಎಸ್.ವಿ.ರಾಮಚಂದ್ರ, ಮಾಜಿ ಶಾಸಕ, ಜಗಳೂರು ಕ್ಷೇತ್ರ
- - -ಹರಿಹರದ ಶಾಸಕ ಬಿ.ಪಿ. ಹರೀಶ ಅವರನ್ನು ಕ್ರಿಮಿಯೆಂದು ಮಾಡಾಳ್ ಮಲ್ಲಿಕಾರ್ಜುನ ಟೀಕೆ ಮಾಡಿದ್ದಾರೆ. ಹರೀಶರವರು ಚುನಾವಣೆಗೆ ನಿಂತಷ್ಟು ವಯಸ್ಸು ಸಹ ಆಗದ ಮಾಡಾಳ್ ಮಲ್ಲಿಕಾರ್ಜುನ ಬಾಯಿ ಮೇಲೆ ಹಿಡಿತ ಇರಲಿ. ನಾವೂ ತೀರಾ ಕೆಳಮಟ್ಟದಿಂದಲೇ ಬೆಳೆದು ಬಂದವರು. ಸಾರ್ವಜನಿಕ ಜೀವನದಲ್ಲಿದ್ದವರು ಹೇಗೆ ಮಾತನಾಡಬೇಕೆಂಬುದನ್ನು ಕಲಿಯಲಿ. ಬಗಲಲ್ಲಿ ಚೂರಿ ಹಾಕಿದವರು ಇವರೆಲ್ಲಾ. ಹೊನ್ನಾಳಿಯಲ್ಲಿ ಯಾವತ್ತೂ ಬಿಜೆಪಿಗೆ ಹಿನ್ನಡೆ ಆಗಿರಲಿಲ್ಲ. ಈ ಸಲ ಏಕೆ ಹೀಗಾಯಿತು?
- ಎಸ್.ಎಂ. ವೀರೇಶ ಹನಗವಾಡಿ, ಮಾಜಿ ಜಿಲ್ಲಾಧ್ಯಕ್ಷ, ಬಿಜೆಪಿ- - -
-21ಕೆಡಿವಿಜಿ8, 9:ದಾವಣಗೆರೆಯಲ್ಲಿ ಶುಕ್ರವಾರ ಬಿಜೆಪಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತ ರಾವ್ ಜಾಧವ್, ಎಸ್.ಎಂ. ವೀರೇಶ ಹನಗವಾಡಿ, ಎಸ್.ಎಂ.ಶಿವಕುಮಾರ ತುಮ್ಕೋಸ್, ಬಿ.ಎಸ್.ಜಗದೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.