ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಬಾಗಲಕೊಟೆಯಲ್ಲಿ ಏ.17ರಂದು ಬಿಜೆಪಿಯಿಂದ ಜನಾಕ್ರೋಶ ಯಾತ್ರೆ ನಡೆಯಲಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ಮಂಗಳವಾರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಮುಸ್ಲಿಂ ಓಲೈಕೆ ಹಾಗೂ ದಲಿತರ ಹಣ ಲೂಟಿಯ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಅಭಿವೃದ್ಧಿ ಯೋಜನೆಯ ₹38,860 ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ಎಸ್‌ಸಿಎಸ್‌ಪಿ, ಟಿಎಸ್‌ಪಿಯ ಸುಮಾರು 10 ಸಾವಿರ ಕೋಟಿ ಹಣವನ್ನು ಅಲ್ಪಸಂಖ್ಯಾತರಿಗೆ ವರ್ಗಮಾಡಿದೆ. ಮಿತಿ ಮೀರಿ ಮುಸ್ಲಿಂ ಓಲೈಕೆ ಮಾಡುತ್ತಿದ್ದು, ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ಶಾದಿ ಭಾಗ್ಯಕ್ಕೆ ₹50 ಸಾವಿರ, ಉರ್ದು ಶಾಲೆಗಳಿಗೆ ₹500 ಕೊಟಿ, ಮುಸ್ಲಿಂ ವಿದ್ಯಾರ್ಥಿಗಳ ವಿದೇಶಿ ಅಭ್ಯಾಸಕ್ಕೆ ₹30 ಲಕ್ಷ, ಅಭಿವೃದ್ಧಿಗೆ ₹4500 ಕೋಟಿ ಮೀಸಲು, ಕಾಲೋನಿಗಳ ಅಭಿವೃದ್ಧಿಗೆ ಸಾವಿರ ಕೋಟಿ ಮೀಸಲಿಟ್ಟು ಉಳಿದ ಸಮಾಜಗಳನ್ನು ಕಡೆಗಣಿಸಿದೆ ಎಂದು ದೂರಿದರು.ಹಾಲಿನ ದರ ₹9 ಹೆಚ್ಚಳ, ಪೆಟ್ರೋಲ್ ₹3. ಡೀಸೆಲ್ ₹5 ಹೆಚ್ಚಳ, ವಿದ್ಯುತ್ ₹35 ಪೈಸೆ ಪ್ರತಿ ಯುನಿಟ್‌ಗೆ ಹೆಚ್ಚಳ, ಸ್ಮಾರ್ಟ್ ಮೀಟರ್ ₹950 ರಿಂದ ₹25 ಸಾವಿರಕ್ಕೆ ಏರಿಕೆ, 30 ಸಾವಿರದ ಟಿಸಿ ₹3 ಲಕ್ಷಕ್ಕೆ ಏರಿಕೆ, ವಾಲ್ಮೀಕಿ ಇಲಾಖೆಯಲ್ಲಿ ₹187 ಕೋಟಿ ಹಗರಣ, ಕಾರ್ಮಿಕ ಇಲಾಖೆಯಲ್ಲಿ ₹2 ಸಾವಿರ ಕೋಟಿ, ಇಂಧನ ಇಲಾಖೆಯ ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ₹15500 ಕೋಟಿ, ಅಬಕಾರಿಯಲ್ಲಿ ₹700 ಕೋಟಿ ಹಗರಣ ಮಾಡಿದ್ದರ ವಿರುದ್ಧ ಜನಾಕ್ರೋಶ ಯಾತ್ರೆ ನಡೆಯಲಿದೆ ಎಂದರು.ಅಂದು ಬೆಳಗ್ಗೆ ಡಾ.ಅಂಬೇಡ್ಕರ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಲಿದೆ. ಬಸವೇಶ್ವರ ವೃತ್ತದಲ್ಲಿ ಸಮಾರೋಪಗೊಳ್ಳಲಿದೆ. ಸುಮಾರು 20 ಸಾವಿರ ಜನ ಸೇರುವ ನಿರೀಕ್ಷೆ ಇದ್ದು ಜಮಖಂಡಿಯಿಂದ 150 ವಾಹನಗಳ ಮುಖಾಂತರ 2 ಸಾವಿರ ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ತುಂಗಳ ಮಾತನಾಡಿ, ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ಕಳಪೆ ಗುಣಮಟ್ಟದ ಬ್ಯಾಕ್ಟೀರಿಯಾಗಳಿಂದ ಕೂಡಿದ ಆರ್‌ಎಲ್ ಸಲಾಯನ್ ದ್ರಾವಣ ಬಳಕೆಯಿಂದಾಗಿದೆ. ಸರ್ಕಾರ ಇದರ ಬಗ್ಗೆ ಕ್ರಮ ಜರುಗಿಸಿಲ್ಲ. ಜತೆಗೆ ದ್ರಾವಣವನ್ನು ಖರೀದಿಸಿದೆ. ಔಷಧಿಗಳ ಖರೀದಿಯಲ್ಲೂ ದೊಡ್ಡ ಹಗರಣ ಆಗಿದೆ. ತನಿಖೆ ನಡೆಯಬೇಕಿದೆ. ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಕಾರ್ಯದರ್ಶಿ ಸಿ.ಟಿ.ಉಪಾಧ್ಯಾಯ ಮಾತನಾಡಿ, ರಾಜ್ಯ ಸರ್ಕಾರ ರೈತ ವಿರೋಧಿ ಹಾಗೂ ಜನವಿರೋಧಿಯಾಗಿದೆ. ಬೊಮ್ಮಾಯಿ ಅವರ ಕಾಲದಲ್ಲಿ ಪ್ರತಿಕ್ಷೇತ್ರಕ್ಕೆ 200 ಗಂಗಾ ಕಲ್ಯಾಣ ಯೋಜನೆಗಳನ್ನು ನೀಡಲಾಗುತ್ತಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅವರು 3-4 ಕ್ಕೆ ಇಳಿಸಿದ್ದಾರೆ. ವಾಸ್ತವದಿಂದ ದೂರವಿರುವ ಜನಗಣತಿಯ ವರದಿಯನ್ನು ಮಂಡಿಸಲು ಹೊರಟಿರುವ ರಾಜ್ಯ ಸರ್ಕಾರ ಗೊಂದಲ ಸೃಷ್ಟಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ. ಸದ್ಯ ನದಿ ತೀರದ ಗ್ರಾಮಗಳಲ್ಲಿ ನೀರಿನ ತೊಂದರೆಯಾಗಿದ್ದು ಮಹಾರಾಷ್ಟ್ರದಿಂದ ನೀರು ಬಿಡಿಸುವ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ದೂರಿದರು.ಈ ವೇಳೆ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸಂಗು ದಳವಾಯಿ, ಗ್ರಾಮೀಣ ಮಂಡಲ ಅಧ್ಯಕ್ಷ ಮಲ್ಲು ದಾನಗೌಡ, ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ ಶಿರಗಣ್ಣವರ, ಪ್ರದೀಪ ನಂದೆಪ್ಪನವರ, ಪ್ರಮುಖರಾದ ಸುರೇಶಗೌಡ ಪಾಟೀಲ, ಮಾಧ್ಯಮ ಸಂಚಾಲಕ ಶ್ರೀಧರ ಕಂಬಿ ಉಪಸ್ಥಿತರಿದ್ದರು.