ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ರಾಹುಲ್ ಗಾಂಧಿ ನಡೆಸುತ್ತಿರುವ ನ್ಯಾಯ ಯಾತ್ರೆಗೆ ಬಿಜೆಪಿಯವರು ಉದ್ದೇಶಪೂರ್ವಕವಾಗಿಯೇ ಅಡ್ಡಿಯನ್ನುಂಟುಮಾಡುತ್ತಿದ್ದಾರೆ. ಇದು ಸಂವಿಧಾನಬಾಹಿರವಾದ ಕ್ರಮ. ಒಬ್ಬ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಹೀಗೆಲ್ಲಾ ನಡೆದುಕೊಳ್ಳಬಾರದು. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಅವರು ಕುಶಾಲನಗರ ಸಮೀಪ ಕೊಪ್ಪ ಗ್ರಾಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಬುಧವಾರ ಆಗಮಿಸಿದ ಸಂದರ್ಭ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಸ್ಸಾಂನಲ್ಲಿ ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆಗೆ ತಡೆಯೊಡ್ಡಿರುವ ಅಸ್ಸಾಂ ಸರ್ಕಾರದ ನಡೆಯ ಬಗ್ಗೆ ಪ್ರಧಾನಿಗಳು ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದರೂ ಪ್ರತಿಕ್ರಿಯೆ ನೀಡಿಲ್ಲ ಎಂಬ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿ ನಾಗರಿಕನಿಗೂ ಪಾದಯಾತ್ರೆ ಕೈಗೊಳ್ಳಲು ಅಥವಾ ಯಾವುದೇ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ವಾತಂತ್ರ್ಯವನ್ನು ಸಂವಿಧಾನ ಕೊಟ್ಟಿದೆ. ರಾಹುಲ್ ಗಾಂಧಿಯವರು ದೇಶದ ಜನರ ಸಮಸ್ಯೆಗಳನ್ನು ಅರಿಯಲು ಹಾಗೂ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.ಪ್ರಚೋದನೆ ನೀಡುವುದು ಸಂವಿಧಾನಬಾಹಿರ: ನೆಹರೂ ಕುಟುಂಬಕ್ಕೆ ಬೆದರಿಕೆಯಿದ್ದು, ಭಾರತ ಸರ್ಕಾರ ಹಾಗೂ ಅಸ್ಸಾಂ ರಾಜ್ಯ ಸರ್ಕಾರಗಳು ರಾಹುಲ್ ಗಾಂಧಿಯವರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕಾಗಿರುವುದು ಅವರ ಕರ್ತವ್ಯ. ಹಾಗೆ ಮಾಡದಿದ್ದರೆ ಅವರ ಕರ್ತವ್ಯಲೋಪ ಎಸೆಗಿದಂತಾಗುತ್ತದೆ ಎಂದರು. ಅಸ್ಸಾಂ ರಾಜ್ಯದ ಮುಖ್ಯಮಂತ್ರಿಗಳು ಮೊದಲು ಕಾಂಗ್ರೆಸ್‍ನಲ್ಲಿದ್ದು, ನಂತರ ಬಿಜೆಪಿಗೆ ಹೋಗಿ ಮುಖ್ಯಮಂತ್ರಿಗಳಾಗಿದ್ದಾರೆ. ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರನ್ನು ಮೆಚ್ಚಿಸಲೆಂದು ಈ ರೀತಿ ಮಾಡುತ್ತಿದ್ದಾರೆ. ಅದು ಅವರ ಕರ್ತವ್ಯ ಲೋಪವಲ್ಲದೇ ಅವರ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಸೋತಿದೆ. ಹಾಗೂ ಇಂಥದ್ದಕ್ಕೆ ಪ್ರಚೋದನೆ ನೀಡುವುದು ಸಂವಿಧಾನಬಾಹಿರ ಎಂದು ಸಿದ್ದರಾಮಯ್ಯ ಹೇಳಿದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆಯುವುದಿಲ್ಲ: ಜಗದೀಶ್ ಶೆಟ್ಟರ್ ಅವರು ವಾಪಸ್ ಬಿಜೆಪಿಗೆ ಹೋಗುತ್ತಾರೆಂಬ ವದಂತಿ ಬಗ್ಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಶೆಟ್ಟರ್ ಅವರೇ ನಾನು ಮತ್ತೆ ಬಿಜೆಪಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಪದೇ ಪದೇ ಉದ್ದೇಶಪೂರ್ವಕವಾಗಿ ಬಿಜೆಪಿ ಈ ಮಾತನ್ನು ಹರಿಯಬಿಡುತ್ತಿದೆ. ಯಾವುದ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ ಎಂದರು.ಪರಿಹಾರ ಬಗ್ಗೆ ಪ್ರಧಾನಿಗಳ ಗಮನಕ್ಕೆ ತರಲಾಗಿದೆ: ಕೇಂದ್ರಕ್ಕೆ ಭೇಟಿ ನೀಡಿ ಅಮಿತ್ ಶಾ ಅವರನ್ನು ಭೇಟಿ ನೀಡಿದಾಗ ಡಿಸೆಂಬರ್ 23 ರಂದು ಸಭೆ ಕರೆದು ಪರಿಹಾರ ಹಣವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಇಂದಿನವರೆಗೂ ಬಿಡುಗಡೆಯಾಗಲ್ಲ. ಸಭೆ ಕರೆದು ಕಾರಣಾಂತರದಿಂದ ಮುಂದೂಡಿದರು. ಇತ್ತೀಚೆಗೆ ಪ್ರಧಾನಿಗಳು ರಾಜ್ಯಕ್ಕೆ ಭೇಟಿ ನೀಡಿದಾಗ ಈ ವಿಷಯವನ್ನು ಅವರ ಗಮನಕ್ಕೆ ತಂದಿದ್ದೇನೆ. ರಾಜ್ಯದ ರೈತರು ಬರಗಾಲದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ, ಕೂಡಲೇ ಬಿಡುಗಡೆ ಮಾಡಿ ಎಂದು ಅವರಿಗೆ ನೆನಪು ಮಾಡಿದ್ದೇನೆ ಎಂದರು.
ವಾರದೊಳಗೆ ರೈತರಿಗೆ ಮೊದಲ ಕಂತು ಬಿಡುಗಡೆ: ಇಂದಿನವರೆಗೆ ನಮ್ಮ ಸರ್ಕಾರ ದನಕರುಗಳಿಗೆ ಹಾಗೂ ಜನಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ, ಜನರು ಗುಳೇ ಹೋಗದಂತೆ ನಿಭಾಯಿಸಿದ್ದೇವೆ. 550 ಕೋಟಿ ರು.ಗಳನ್ನು ರೈತರಿಗೆ ಪರಿಹಾರವಾಗಿ ಈವರೆಗೆ ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ್ದೇವೆ. ಇನ್ನೊಂದು ವಾರದೊಳಗೆ ಎಲ್ಲ ರೈತರಿಗೂ ಮೊದಲನೇ ಕಂತನ್ನು ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದರು.;Resize=(128,128))
;Resize=(128,128))
;Resize=(128,128))
;Resize=(128,128))