ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಾಲಿನ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಪ್ರತಿಪಕ್ಷ ಬಿಜೆಪಿ, ಹೆಚ್ಚಿಸಿರುವ ಹಾಲಿನ ದರವನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದರೆ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸರ್ಕಾರದ ನಡೆ ವಿರುದ್ಧ ವಾಗ್ದಾಳಿ ನಡೆಸಿದರು. ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಕಾಂಗ್ರೆಸ್, ಮತದಾರರ ಮೇಲಿರುವ ಸಿಟ್ಟನ್ನು ಬೆಲೆ ಏರಿಕೆ ಮಾಡುವ ಮೂಲಕ ತೀರಿಸಿಕೊಳ್ಳಲು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿ.ವೈ.ವಿಜಯೇಂದ್ರ ತಮ್ಮ ‘ಎಕ್ಸ್’ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ, ಬೆಲೆ ಏರಿಸುವುದರಲ್ಲಿ ನಿಸ್ಸೀಮತನಕ್ಕೆ ಹೆಸರಾಗುತ್ತಿರುವ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯ ಮನೆಯಲ್ಲಿ ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಹಾಲು ದರವನ್ನು ಉಕ್ಕಿಸಲು ಮುಂದಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಸರ್ಕಾರದ ನಡೆಯು ಬಡವರಿಗೂ ಉಪಕಾರಿಯಾಗಲಿಲ್ಲ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕನ್ನೂ ಹಸನಾಗಿಸಲಿಲ್ಲ. ನಂದಿನಿ ಹಾಲಿನ ದರ ಹೆಚ್ಚಿಸಿ ಸದ್ಯ ಲೀಟರ್ ಹಾಲಿಗೆ ಇರುವ 42 ರು. ದರವನ್ನು 2.10 ರು. ಹೆಚ್ಚಳ ಮಾಡಲಾಗಿದೆ. ರಾಜ್ಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದೆ. ಈ ಜನವಿರೋಧಿ ಸರ್ಕಾರ ಕೆಳಗಿಳಿಸುವವರೆಗೂ ಬಿಜೆಪಿಯ ಜನಪರ ಹೋರಾಟ ನಿರಂತರ ಸಾಗಲಿದೆ ಎಂದು ಕಿಡಿಕಾರಿದ್ದಾರೆ.ಆರ್.ಅಶೋಕ್ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಬಡವರು, ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು. ತುರ್ತು ಪರಿಸ್ಥಿತಿ ಹೇರಿಕೆಯ ವಾರ್ಷಿಕೋತ್ಸವ ಸಂಭ್ರಮಿಸಲು ಕಾಂಗ್ರೆಸ್ ಸರ್ಕಾರ ನಂದಿನಿ ಹಾಲಿನ ದರವನ್ನು ಲೀಟರ್‌ಗೆ ಎರಡು ರೂಪಾಯಿ ಹೆಚ್ಚಳ ಮಾಡಿ ವಿಕೃತ ಸಂತೋಷ ಅನುಭವಿಸುತ್ತಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಕೇವಲ 13 ತಿಂಗಳಿನಲ್ಲಿ ಹಾಲಿನ ದರವನ್ನು ಎರಡು ಬಾರಿ ಹೆಚ್ಚಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ 3 ರು. ಹೆಚ್ಚಳವಾಗಿದ್ದ ಹಾಲಿನ ಬೆಲೆ ಈಗ ಮತ್ತೊಮ್ಮೆ 2 ರುಪಾಯಿ ಹೆಚ್ಚಾಗಿದೆ. ಹಾಲಿನ ದರ ಹೆಚ್ಚಳ ಮಾಡಿ ಬಡವರ ಗಾಯದ ಮೇಲೆ ಬರೆ ಎಳೆಯಲಾಗಿದೆ ಎಂದು ಟೀಕಿಸಿದ್ದಾರೆ.
ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಲೋಕಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯ ರಾಜ್ಯದ ಜನತೆಯ ಮೇಲೆ ಬೆಲೆ ಏರಿಕೆಯ ಬರೆಯನ್ನು ಹಾಕಲು ಹೊರಟಿದ್ದಾರೆ. ರಾಜ್ಯದ ಜನರ ವಿರುದ್ಧ ವಿಷ ಕಾರುವ, ದ್ವೇಷ ಸಾಧಿಸುವ ಹಾದಿಗೆ ಸಿದ್ದರಾಮಯ್ಯನವರು ಹೊರಟಿದ್ದಾರೆ ಎಂದು ಟೀಕಿಸಿದರು.ಹೆಚ್ಚಳ ಮಾಡಿರುವ ಹಾಲಿನ ಹೆಚ್ಚುವರಿ ದರವನ್ನು ರೈತರಿಗೆ ನೀಡಲಾಗುತ್ತದೆಯೇ? ಎರಡು ರು. ಅನ್ನು ನೇರವಾಗಿ ರೈತರಿಗೆ ಕೊಡಲಾಗುತ್ತದೆಯೇ? ಎಂಬುದರ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು. ಪಶು ಆಹಾರದ ದರವನ್ನೂ ಹೆಚ್ಚಿಸಲಾಗಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.
ಬೆಲೆ ಏರಿಸುವುದರಲ್ಲಿ ನಿಸ್ಸೀಮತನಕ್ಕೆ ಹೆಸರಾಗುತ್ತಿರುವ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯ ಮನೆಯಲ್ಲಿ ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಹಾಲು ದರವನ್ನು ಉಕ್ಕಿಸಲು ಮುಂದಾಗಿದೆ.-ವಿಜಯೇಂದ್ರ