ಸಾರಾಂಶ
ಧಾರವಾಡ: ಅಕಾಲಿಕ ಮಳೆಯಿಂದಾಗಿ ಗ್ರಾಮೀಣ ಮತ್ತು ಶಹರದಲ್ಲಿ ಅಪಾರ ಪ್ರಮಾಣದ ಬೆಳೆಹಾನಿ ಮತ್ತು ಮನೆಗಳು ಧರೆಗುರುಳಿದ್ದು, ಇವುಗಳಿಗೆ ಶೀಘ್ರವೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳೀಗೆ ಮನವಿ ಸಲ್ಲಿಸಿದರು.
ಮಂಗಳವಾರ ಪ್ರಾರಂಭವಾದ ಅಹೋರಾತ್ರಿ ಪ್ರತಿಭಟನೆ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಅಂತ್ಯಗೊಳಿಸಲಾಯಿತು.ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಎಲ್ಲ ಬೆಳೆ ಸಂಪೂರ್ಣ ಹಾನಿಯಾಗಿದೆ. ಜತೆಗೆ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಮನೆಗಳು ಧರೆಗುರುಳಿವೆ. ಕಳೆದ ೨೦೧೯-೨೩ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿದ್ದ ಪ್ರತಿ ಮನೆಗೆ ₹೫ ಲಕ್ಷ ಪರಿಹಾರ ನೀಡಲಾಗಿತ್ತು. ಈಗ ರಾಜ್ಯ ಸರ್ಕಾರ ಕನಿಷ್ಠ ₹೧೦ ಲಕ್ಷಗಳನ್ನು ಬಿದ್ದ ಮನೆಗಳಿಗೆ ಪರಿಹಾರ ರೂಪವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಬೆಳೆಗಳು ಸಂಪೂರ್ಣ ಹಾಳಾಗಿ ಹೋಗಿದ್ದು, ರೈತರ ಜೀವನ ದುಸ್ತರವಾಗಿದೆ. ಆದ್ದರಿಂದ ಪ್ರತಿ ಎಕರೆಗೆ ಕನಿಷ್ಠ ₹೫೦ ಸಾವಿರ ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಮಹಾಪೌರ ಈರೇಶ ಅಂಚಟಗೇರಿ, ಗಂಗಾಧರಪಾಟೀಲ ಕುಲಕರ್ಣಿ, ಪಿ.ಎಚ್. ನೀರಲಕೇರಿ, ರಾಘವೇಂದ್ರ ಪಾಟೀಲ, ನಿಂಗಪ್ಪ ಸುತಗಟ್ಟಿ, ಶಶಿಮೌಳಿ ಕುಲಕರ್ಣಿ, ಶಂಕರಕೊಮಾರ ದೇಸಾಯಿ, ಶಂಕರ ಶೇಳಕೆ, ಮೋಹನ ರಾಮದುರ್ಗ, ಮಂಜುನಾಥ ನಡಟ್ಟಿ, ಮಹಾದೇವಪ್ಪ ದಂಡಿನ, ಈಶ್ವರಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.