ಕೈ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಕುತಂತ್ರ

| Published : Aug 20 2024, 12:51 AM IST

ಸಾರಾಂಶ

ಗುಬ್ಬಿಯಲ್ಲಿ ಕಾಂಗ್ರೆಸ್‌ ನಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಗುಬ್ಬಿ

ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಕುತಂತ್ರ ನಡೆಸುತ್ತಿದೆ ಎಂದು ಶಾಸಕ ಎಸ್. ಆರ್. ಶ್ರೀನಿವಾಸ್ ಹೇಳಿದರು.ಪಟ್ಟಣದ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್‌ನಿಂದ ಸೋಮವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿಸಿರುವುದು ಖಂಡನೀಯ ಎಂದು ಹೇಳಿದರು.ಮುಡಾದಲ್ಲಿ ಯಾವುದೇ ಆವ್ಯವಹಾರ, ಅಕ್ರಮ ನಡೆಯದೇ ಇದ್ದರೂ ಬಿಜೆಪಿ ಉದ್ದೇಶಪೂರ್ವಕವಾಗಿ ಹಗರಣದಂತೆ ಬಿಂಬಿಸುತ್ತಿರುವುದು ವಿಪರ್ಯಾಸ ಸಂಗತಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅವ್ಯವಹಾರಗಳ ತನಿಖೆಯಾದಲ್ಲಿ ಬಹುತೇಕ ಬಿಜೆಪಿಗರು ಜೈಲು ಸೇರುವುದು ಖಂಡಿತ ಎಂದರು.

ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ನಂತರ ಈ ರಾಜ್ಯಕಂಡ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಿದ್ದಾರೆ. ದೀನ,ದಲಿತ ಹಾಗೂ ಹಿಂದುಳಿದವರ ಪರವಾಗಿದ್ದುಕೊಂಡು ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸಿಕೊಡಲು ಬದ್ಧರಾಗಿರುವ ಸಿದ್ದರಾಮಯ್ಯನವರನ್ನು ಪಕ್ಷ ಹಾಗೂ ನಾಯಕರು ಬಿಟ್ಟುಕೊಡುವ ಪ್ರಶ್ನೆ ಇಲ್ಲ. ಕೇಂದ್ರ ಬಿಜೆಪಿ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲರನ್ನು ತಕ್ಷಣವೇ ವಜಾ ಮಾಡಬೇಕು. ಅವರ ಮೇಲೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗೆ ಮನವಿ ಕಳುಹಿಸಿ ಕೊಡುತ್ತೇವೆ ಎಂದು ಹೇಳಿದರು.