ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ದೆಹಲಿಯ ಜೆಎನ್‌ಯು ಪ್ರಾಧ್ಯಾಪಕ, ಕಾಂಗ್ರೆಸ್ ಸಂಸದ ಡಾ.ಬಿಮೋಲ್ ಅಕೋಯಿಜಮ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

- ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ । ಮಹಿಳಾ ಮೋರ್ಚಾದ ಕೆಲವರ ವಶ, ಬಿಡುಗಡೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ದೆಹಲಿಯ ಜೆಎನ್‌ಯು ಪ್ರಾಧ್ಯಾಪಕ, ಕಾಂಗ್ರೆಸ್ ಸಂಸದ ಡಾ.ಬಿಮೋಲ್ ಅಕೋಯಿಜಮ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಅಮರ್ ಜವಾನ್ ಪಾರ್ಕ್ ವೃತ್ತದ ಬಳಿಯಿಂದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೇತನಾ ಬಾಯಿ ಶಿವಕುಮಾರ, ರಾಜ್ಯ ಉಪಾಧ್ಯಕ್ಷೆ ಎಚ್.ಸಿ.ಜಯಮ್ಮ ಇತರರ ನೇತೃತ್ವದ ಪ್ರತಿಭಟನಾ ಮೆರವಣಿಗೆ ಕಾಂಗ್ರೆಸ್ ಜಿಲ್ಲಾ ಕಚೇರಿಯತ್ತ ತೆರಳುತ್ತಿತ್ತು. ಈ ವೇಳೆ ಸರ್ಕಾರಿ ನೌಕರರ ಸಮುದಾಯ ಭವನ ಬ‍ಳಿ ತಿರುವಿನಲ್ಲಿ ಮಹಿಳಾ ಪೊಲೀಸರು ಪ್ರತಿಭಟನಾಕಾರರನ್ನು ತಮ್ಮ ವಶಕ್ಕೆ ಪಡೆದು, ಪೊಲೀಸ್ ಕವಾಯಿತು ಮೈದಾನಕ್ಕೆ ಕರೆದೊಯ್ದರು. ಬಳಿಕ ಕೆಲ ಸಮಯದ ನಂತರ ಬಿಡುಗಡೆ ಮಾಡಿದರು.

ಇದೇ ವೇಳೆ ಚೇತನಾ ಬಾಯಿ ಮಾತನಾಡಿ, ಮಹಿಳೆಯರ ರಕ್ಷಣೆ, ಸಂರಕ್ಷಣೆ ಮಾಡುತ್ತೇವೆಂದು ಹಳ್ಳಿಯಿಂದ ದಿಲ್ಲಿವರೆಗೂ ಕಾಂಗ್ರೆಸ್ಸಿನ ನಾಯಕರು ಹೇಳುತ್ತಾರೆ. ಇದೇನಾ ನಿಮ್ಮ ಪಕ್ಷದ ಸಂಸ್ಕೃತಿ, ಮಹಿಳೆಯರ ಸಂರಕ್ಷಣೆ? ದೆಹಲಿಯ ಜೆಎನ್‌ಯು ಕಾಲೇಜಿನ 11 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕಾಂಗ್ರೆಸ್ ಸಂಸದ ಡಾ.ಬಿಮೋಲ್‌ ಅಕೋಯಿಜಮ್ ವಿರುದ್ಧ ಸ್ಪಷ್ಟವಾಗಿದೆ. ಈ ವಿಚಾರದ ಬಗ್ಗೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ನಾಯಕರು ಮೌನ ವಹಿಸಿದ್ದು ಏಕೆ? ಡಾ.ಬಿಮೋಲ್‌ನಂತಹ ವ್ಯಕ್ತಿಯನ್ನು ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷೆ ಗಾಯತ್ರಿ, ಬಿಜೆಪಿ ಮಹಿಳಾ ಮೋರ್ಚಾದ ಮುಖಂಡರಾದ ದೇವೀರಮ್ಮ, ವೀಣಾ ನಂಜಪ್ಪ, ಭಾಗ್ಯ ಪಿಸಾಳೆ, ರೇಣುಕಾ ಕೃಷ್ಣ, ಗೌರಮ್ಮ ಪಾಟೀಲ, ಮಮತಾ ಗೌಡ, ದಾಕ್ಷಾಯಣಿ ಅಂದಾನಪ್ಪ, ಲಕ್ಷ್ಮೀ ಉಮೇಶ, ಕಮಲ, ಗೀತಾ, ಚಂದ್ರಕಲಾ, ನೀತು ನಂದೀಶ, ಮಾಯಕೊಂಡ ಲತಾ, ಲಕ್ಷ್ಮೀ, ಅಕ್ಕಮ್ಮ, ಸುಶೀಲಮ್ಮ, ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ, ಪ್ರಧಾನ ಕಾರ್ಯದರ್ಶಿ ಆರ್.ಲಕ್ಷ್ಮಣ, ಯುವ ಮೋರ್ಚಾ ಅಧ್ಯಕ್ಷ ರಾಕೇಶ ಬಜರಂಗಿ, ಮಟ್ಟಿಕಲ್ಲು ಕರಿಬಸಪ್ಪ, ಎಚ್.ಎನ್.ಹಾಲೇಶ, ತಾರಕೇಶ ನಾಯ್ಕ ಇತರರು ಇದ್ದರು.

- - -

(ಟಾಪ್‌ ಕೋಟ್‌)

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಜೆಎನ್‌ಯು ಆಂತರಿಕ ಸಮಿತಿ ನೀಡಿದ ವರದಿ ಸ್ಪಷ್ಟಪಡಿಸಿದೆ. ಬೋಧನೆ ವೇಳೆಯೂ ಅಸಮರ್ಪಕ, ಅಶ್ಲೀಲ ಪದಗಳನ್ನು ಆತ ಬಳಸುತ್ತಿದ್ದ ಬಗ್ಗೆ ವಿದ್ಯಾರ್ಥಿನಿಯರು ದೂರಿದ್ದಾರೆ. ಅಂತಹ ಕಾಮುಕ ಪ್ರಾಧ್ಯಾಪಕ, ಸಂಸದನನ್ನು ಜೆಎನ್‌ಯು ವಜಾಗೊಳಿಸಿದ್ದು ಸ್ವಾಗತಾರ್ಹ. ಬರೀ ಸೇವೆಯಿಂದ ವಜಾಗೊಳಿಸಿದರಷ್ಟೇ ಸಾಲದು, ಸಂಸದ ಸ್ಥಾನದಿಂದಲೂ ವಜಾ ಮಾಡಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.

- ಎಚ್.ಸಿ.ಜಯಮ್ಮ, ರಾಜ್ಯ ಉಪಾಧ್ಯಕ್ಷೆ.

- - -

-13ಕೆಡಿವಿಜಿ5, 6, 7:

ಡಾ.ಬಿಮೋಲ್ ಅಕೋಯಿಜಮ್ ವಿರುದ್ಧ ಕಠಿಣ ಕ್ರಮ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ನಡೆಯಿತು.