ಕೋಟೆ ನಾಡಲ್ಲಿ ಮೊಳಗಿದ ಬಿಜೆಪಿ ಜನಾಕ್ರೋಶ

| Published : Apr 18 2025, 12:44 AM IST

ಸಾರಾಂಶ

ರಾಜ್ಯದಲ್ಲಿ ಹಿಂದೂ ವಿರೋಧಿ, ರೈತ ವಿರೋಧಿ ಸರ್ಕಾರ ಇದೆ. ಬೆಲೆ ಏರಿಕೆ ವಿಪರೀತವಾಗಿದೆ. ರಾಜ್ಯದಲ್ಲಿ ಈ 3 ಕಾರಣಕ್ಕೆ ಜನಾಕ್ರೋಶ ಯಾತ್ರೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯದಲ್ಲಿ ಹಿಂದೂ ವಿರೋಧಿ, ರೈತ ವಿರೋಧಿ ಸರ್ಕಾರ ಇದೆ. ಬೆಲೆ ಏರಿಕೆ ವಿಪರೀತವಾಗಿದೆ. ರಾಜ್ಯದಲ್ಲಿ ಈ 3 ಕಾರಣಕ್ಕೆ ಜನಾಕ್ರೋಶ ಯಾತ್ರೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬಾಗಲಕೋಟೆಯಲ್ಲಿ ಗುರುವಾರ ಬಿಜೆಪಿ ಜನಾಕ್ರೋಶ ಯಾತ್ರೆಗೂ ಮುಂಚೆ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ, ಎತ್ತಿನ ಬಂಡಿಯಲ್ಲಿ ನಿಂತು ಬಾರುಕೋಲು ಬೀಸಿ ಯಾತ್ರೆಗೆ ಚಾಲನೆ ನೀಡಿದ ಮಾತನಾಡಿದರು. ಅಹಿಂದ ಹೆಸರಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ದಲಿತರ ಹಣ ಹೊಡೆದಿದೆ. ಹಿಂದೂಗಳ ಅವಮಾನ ಮಾಡುತ್ತಿರುವ ಕೈ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಲವ್ ಜಿಹಾದ್, ಗೋಹತ್ಯೆ ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಮೊಸಳೆ ಕಣ್ಣೀರು ಹಾಕುತ್ತಿರುವ ಸಿಎಂ ಸಿದ್ದರಾಮಯ್ಯ ಅವರು, ಮತ್ತೇ ಸಿಎಂ ಆಗೋದಿಲ್ಲ ಅಂತ ವೀರಶೈವ ಲಿಂಗಾಯತರಲ್ಲಿ ವಿವಾದ ಹುಟ್ಟಿಸಿದ್ದಾರೆ. ಹಿಂದೂಗಳಲ್ಲಿ ಬಡವರಿಲ್ಲವೇ? ಅದ್ಯಾಕೆ ಕೇವಲ ಅಲ್ಪಸಂಖ್ಯಾತರಿಗೆ ಮಾಡುತ್ತಿದ್ದಿರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ 20 ತಿಂಗಳಾಯಿತು. ಕೃಷ್ಣೆಗೆ ನೀರು ಬಿಡುವ ವಿಚಾರ ಮಾಡುತ್ತಿಲ್ಲ. ಯಡಿಯೂರಪ್ಪ ಇದ್ದಾಗ ಬಾಗಲಕೋಟೆ ಜಿಲ್ಲೆ ಅಭಿವೃದ್ಧಿಗೆ ₹20 ಸಾವಿರ ಕೋಟಿ ಕೊಟ್ಟಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಏನು ಮಾಡಿಲ್ಲ. ನೇಕಾರರ ಬಗ್ಗೆ ಸಿಎಂಗೆ ಚಿಂತನೆ ಇಲ್ಲ. ಕೇಳುವ ಸೌಜನ್ಯ ಸರ್ಕಾರಕ್ಕೆ ಇಲ್ಲವಾಗಿದೆ. ಯಾವಾಗ ಕುರ್ಚಿ ಅಲ್ಲಾಡುತ್ತದೆ ಆವಾಗ ಓಬಿಸಿ ನೆನಪಾಗುತ್ತೆ ಎಂದ ಅವರು, ಬೆಂಗಳೂರಲ್ಲಿ ಗಲಭೆ ಮಾಡಿದವರ ರಕ್ಷಣೆ ಮಾಡಲು ಸಿಎಂ ಮುಂದಾದರು. ದಲಿತರ, ಹಿಂದುಳಿದವರಗೆ ಬಗ್ಗೆ ಕಾಳಜಿ ಇಲ್ಲ. ಬೆಲೆ ಏರಿಕೆಯಿಂದ ಸಾಮಾನ್ಯ ಜನ ನರಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಸರ್ಕಾರ ಕಸಿದುಕೊಳ್ಳುತ್ತಿದೆ. ಇಂತಹ ಜನ ವಿರೋಧಿ ಸರ್ಕಾರ ಮರಣ ಶಾಸನ ಬರೆಯುತ್ತಿದೆ. ಬಾಗಲಕೋಟೆಯಲ್ಲಿ ಬಸವಣ್ಣನ ಮೂರ್ತಿ ಸ್ಥಾಪನೆಗೆ ಬಿಡದ ಸರ್ಕಾರ, ನಾವೇನು ಭಾರತದಲ್ಲಿದ್ದೆವೋ ಅಥವಾ ಪಾಕಿಸ್ತಾನದಲ್ಲಿದ್ದೇವೋ ಎಂದು ಪ್ರಶ್ನಿಸಿದರು.ಪ್ರಧಾನಿ ನರೇಂದ್ರ ಮೋದಿ ಒಬ್ಬ ಶಕ್ತಿ. ಜಗತ್ತಿನಲ್ಲಿ ಭಾರತವನ್ನು ಆರ್ಥಿಕ ಶಕ್ತಿಯನ್ನಾಗಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರಿಗೆ ಸಿಎಂ ಮೇಲೆ ವಿಶ್ವಾಸ ಇಲ್ಲ. ಇನ್ನು ಜನರಿಗೆ ಹೇಗೆ ವಿಶ್ವಾಸ ಬಂದೀತು ಎಂದ ಅವರು, ವೇದಿಕೆಯಲ್ಲಿರುವ ಮುಖಂಡರು, ಕೆಳಗೆ ಕೂತಿರೋ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. ಮತ್ತೇ ಬಾಗಲಕೋಟೆಯ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಪಣ ತೊಡಬೇಕು ಎಂದು ಕರೆ ನೀಡಿದರು.

ಸಿದ್ದರಾಮಯ್ಯ ರಾಜಕೀಯ ಪುಟ ಸೇರುತ್ತಿದ್ದರು:

ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸಿದ್ದರಾಮಯ್ಯ ರಾಜಕೀಯ ಪುಟ ಸೇರುತ್ತಿದ್ದರು. ರಾಜಕೀಯ ಪುನರ್ಜನ್ಮ ನೀಡಿದ್ದು ಬಾದಾಮಿ ಜನ. ಅವರ ಆಸೆ ಈಡೇರಿಸುವ ಕೆಲಸ ಮಾಡಲಿಲ್ಲ. ಏಳು ವರ್ಷಗಳಲ್ಲಿ ಸಿದ್ದರಾಮಯ್ಯ ಕೊಟ್ಟಿದ್ದು ಬರೀ ಶೂನ್ಯ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಉತ್ತರ ಕರ್ನಾಟಕಕ್ಕೆ ಮೋಸ ಮಾಡಿದ ಸಿಎಂ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ. ಸಿದ್ದರಾಮಯ್ಯ ಮಹಾ ಮೋಸಗಾರ ಸಿಎಂ ಎಂದು ಕಿಡಿಕಾರಿದರು.6550 ಎಕರೆ ಜಮೀನು ಖರೀದಿ ಮಾಡಿ, ಪುನರ್ವಸತಿಗೆ ಚಾಲನೆ ನೀಡಿದೆವು. ಇವತ್ತು ಆ ಕಾಮಗಾರಿಗಳು ನಿಂತಿವೆ. ಬಿಜಾಪುರ-ಬಾಗಲಕೋಟೆ ಜಿಲ್ಲೆಯ ಶಾಸಕರು ಏನ ಮಾಡುತ್ತಿದ್ದಿರಿ? ನೀವು ಧ್ವನಿ ಎತ್ತುತ್ತಿಲ್ಲವೇಕೆ ಎಂದ ಅವರು, ಯುಕೆಪಿಗೆ ದುಡ್ಡು ಕೊಡದಿದ್ದರೇ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಮೋದಿ ಅವರು ವಕ್ಫ್ ಕಾನೂನು ತಿದ್ದುಪಡಿ ಮಾಡಿದರೆ, ರಾಹುಲ್ ಗಾಂಧಿ ಅದನ್ನ ತಿರುಚುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅವರಿಗೆ ತುಷ್ಟಿಕರಣ ಮಾಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಸಿದ್ದರಾಮಯ್ಯ 30 ಜಿಲ್ಲೆಗಳಲ್ಲಿ ಅಭಿವೃದ್ಧಿಯನ್ನೇ ಮಾಡಲಿಲ್ಲ. ಈ ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ ಕಡೆ ಅಂತ ತೋರಿಸಿ, ಒಡೆಯುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ನಿವೊಬ್ಬ ಮಹಾ ಮೋಸಗಾರ ಎಂದು ಆರೋಪಿಸಿದರು.ಸಿದ್ದರಾಮಯ್ಯ ನೀವು ಸಂಡೇ ಲಾಯರ್:

ಸಮಾವೇಶದಲ್ಲಿ ವಿಪ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಅವರ ಮೊಂಡುವಾದ ಇದೆ. ಜನರಿಗೆ ಬೆಲೆ ಏರಿಕೆ, ಸುಲಿಗೆಯಿಂದ ಆಕ್ರೋಶ ಇದೆ. ಬೆಳಗ್ಗೆ ಹಾಲು ಕುಡಿಯುವುದರಿಂದ ಹಿಡಿದು ರಾತ್ರಿ ಆಲ್ಕೋಹಾಲ್ ಕುಡಿಯೊವರೆಗೂ ಎಲ್ಲವೂ ದುಬಾರಿಯಾಗಿದೆ. ಶೇ.40ರಷ್ಟು ಕಮಿಷನ್ ಇದೆ ಎಂದು ಸುಳ್ಳು ಹೇಳಿ ನಮ್ಮ ಸರ್ಕಾರವನ್ನು ಬಲಿ ತೆಗೆದುಕೊಂಡಿದೆ. ಹಾಗಾಗಿ ನಿಮ್ಮ ಸರ್ಕಾರದ ಮೇಲೆ ನಮ್ಮ ಆಕ್ರೋಶ ಇದೆ. ಲಿಂಗಾಯತರು ನಂಬರ್ ಒನ್ ಅಂತ ಕಾಲವಿತ್ತು. ಇವಾಗ ಲಿಂಗಾಯತ ಏಕಿಲ್ಲ? ಕಾರಣವಿಷ್ಟೇ ಒಬ್ಬೊಬ್ಬರನ್ನೇ ಒಡೆದು ಹಾಕುತ್ತಿದ್ದಿರಿ. ನಮ್ಮ ಸರ್ಕಾರ ಇರದೇ ಇದ್ದಿದ್ರೆ ಒಳ ಮೀಸಲಾತಿ ಘೋಷಣೆ ಆಗುತ್ತಿರಲಿಲ್ಲ. ಎಸ್ಸಿ ಮೀಸಲಾತಿ ಶೇ.17ರವರೆಗೆ ಏರುತ್ತಿರಲಿಲ್ಲ. ಇಷ್ಟೆಲ್ಲ ಮಾಡಿದರೂ ದಲಿತರು ಯಾರಿಗೆ ವೋಟ್ ಹಾಕಿದ್ರಿ? ಬಾಗಲಕೋಟೆಯಲ್ಲಿ ಚರಂತಿಮಠ ಯಾಕ್ ಸೋಲ್ತಿದ್ರು? ನೀವು ಮಾಡಿದ್ದು ಅನ್ಯಾಯ ಅಲ್ವಾ? ಮೋಸ ಅಲ್ವಾ? ಸಿದ್ದರಾಮಯ್ಯ ಅವರ ಸುಳ್ಳಿನ ಹಳ್ಳಕ್ಕೆ ಬಿದ್ದೀದ್ದೀರಿ ನೀವು ಎಂದು ಜನರಿಗೆ ಹೇಳಿದರು.ಬಾಬಾ ಸಾಹೇಬ್ ಅವರ ಬೆನ್ನಿಗೆ ಚೂರಿ ಹಾಕಿದ್ದೀರಿ. ಅಂಬೇಡ್ಕರ್ ಸೋಲಿಸಿದ್ದು ಸಾವರ್ಕರ್, ಬಿಜೆಪಿ ಅಂತ ಸಿದ್ದರಾಮಯ್ಯ ಹೇಳಿದರು. ಸಿದ್ದರಾಮಯ್ಯ ಅವರೇ ನೀವು ಸಂಡೇ ಲಾಯರ್. ಮರಿ ಖರ್ಗೆ ಯಾವುದೋ ಕಾಗದ ಕೊಟ್ರೆ, ಅದನ್ನು ನೀವು ಸಿದ್ದರಾಮಯ್ಯ ಓದ್ತಿದಿರಲ್ಲ? ನಿಮಗೆ ಜನ ಮೂರು ಕಾಸಿನ ಮರ್ಯಾದೆ ಕೊಡ್ತಾರಾ? ನಮ್ಮಲ್ಲಿ ಅಂಬೇಡ್ಕರ್ ಅವರಿಗೆ ಗೌರವಿಸೋ ಕೆಲಸ ಮಾಡ್ತಿದಿವಿ. ದೇಶದಲ್ಲಿ ಶೇ.24 ದಲಿತರು ಇದ್ದೀವಿ. ರಾಜ್ಯದಲ್ಲಿ ಶೇ.24 ದಲಿತರೇ ಹೆಚ್ಚಿದ್ದೇವೆ. ಮುಸ್ಲಿಮರೇ ನಂಬರ್ ಒನ್ ಅಂತಾ ಮಾಡಿದ್ದೀರಿ. ಮುಸ್ಲಿಮರು ಬಹುಸಂಖ್ಯಾತರು ಅಂದ್ರೆ ನಿಮಗೆ ರಕ್ಷಣೆ ಯಾರು ಕೊಡ್ತಾರೆ? ನೀವು ಅಲ್ಪಸಂಖ್ಯಾತರು ಅಂದಾಗ ದೇಶದ ಸಂವಿಧಾನ, ಕಾನೂನು ರಕ್ಷಣೆ ನೀಡಿದೆ. ಬಿಜೆಪಿ ಅಲ್ಪಸಂಖ್ಯಾತ, ದಲಿತರ ವಿರೋಧಿ ಅಲ್ಲ ಹೇಳಿದರು.ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರೇ ಈ ಜನಾಕ್ರೋಶ ಯಾತ್ರೆ ಯಶಸ್ವಿಯಾಗಿದೆ ಎಂದು ಸಾಬೀತಾಗಿದೆ. ಜನರಲ್ಲಿ ಸಿಎಂ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರದ ಬಗ್ಗೆ ಜನರ ಆಕ್ರೋಶವಿದೆ. ಹಾಲಿನ ದರ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಹೆಣ್ಣು ಮಕ್ಕಳ ಬಗ್ಗೆ ಗೌರವ ಇಲ್ಲ. ಜನರಿಗೆ ಇದೆಲ್ಲದರ ಬಗ್ಗೆ ಆಕ್ರೋಶ ಇದೆ ಎಂದರು.ಜನ ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸಲು ಸಿದ್ಧರಾಗಿದ್ದಾರೆ. ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅರ್ಕಾವತಿ ಹಗರಣ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ ಶೆಟ್ಟರ್, ಅರ್ಕಾವತಿಯ ಕೆಂಪಣ್ಣ ವರದಿಯಲ್ಲಿ ಸಿದ್ಧರಾಮಯ್ಯನವರು ತಪ್ಪುಗಾರರಿದ್ದಾರೆ. ಇದರ ಜೊತೆ ಮುಡಾ ಹಗರಣ ಮುಚ್ಚಲು ಪ್ರಯತ್ನ ಮಾಡಿದರು. ಆದರೂ ಇಡಿಯವರು ಬಿಟ್ಟಿಲ್ಲ ಎಂದರು.ಖರ್ಗೆ ಅವರು ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿಲ್ಲ ಎಂದಿದ್ದಾರೆ. ಮೋದಿ, ಅಮಿತ್ ಶಾ ಏನಾದರೂ ಮಾಡುತ್ತಾರೆ ಎಚ್ಚರದಿಂದ ಇರಿ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಮೋದಿ, ಅಮಿತ ಶಾ ಏನು ಮಾಡಲ್ಲ. ಇದಕ್ಕೆ ಡಿ.ಕೆ.ಶಿವಕುಮಾರ್ ಟೈಂ ಬಾಂಬ್ ಇಡುತ್ತಾರೆ. ಇತ್ತ ಸಿದ್ಧರಾಮಯ್ಯನವರು ತಾವೇ ಇನ್ನಷ್ಟು ದಿನ ಮುಂದುವರಿಯಬೇಕು ಅಂತಾರೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಟೈಂ ಬಾಂಬ್ ಸ್ಫೋಟವಾಗುತ್ತದೆ. ನೋಡಿ ಬರೆದುಕೊಡುತ್ತೇನೆ, ಟೈಂ ಬಾಂಬ್ ಸ್ಫೋಟ ಆಗಿ ಸರ್ಕಾರ ಮನೆಗೆ ಹೋಗುತ್ತದೆ ಎಂದು ತಿಳಿಸಿದರು.