ಹಾವೇರಿ: ಬಿಜೆಪಿ ವಿಶ್ವದಲ್ಲಿಯೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ದೇಶದ ಹಿತರಕ್ಷಣೆಗೆ ಹಾಗೂ ಸಮಗ್ರತೆಗೆ ಬಿಜೆಪಿ ಅವಿರತವಾಗಿ ಹೋರಾಟ ಮಾಡುತ್ತಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಡಾ. ಶ್ಯಾಮಪ್ರಸಾದ ಮುಖರ್ಜಿಯವರ 125ನೇ ಜನ್ಮ ದಿನೋತ್ಸವ ಹಾಗೂ ಎಸ್‌ಐಆರ್ ಕುರಿತು ಜಾಗೃತಿ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.1951ರಲ್ಲಿ ಶ್ಯಾಮಪ್ರಸಾದ್ ಮುಖರ್ಜಿಯವರು ಜನಸಂಘ ಸ್ಥಾಪಿಸಿ ದೇಶಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿರುವಂತಹ ಶ್ರೇಷ್ಠ ನಾಯಕರಾಗಿದ್ದಾರೆ. ಅವರು ಭಾರತದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಉದಾತ್ತ ಧ್ಯೇಯಗಳನ್ನು ಪಕ್ಷದ ಕಾರ್ಯಕರ್ತರಲ್ಲಿ ಮೂಡಿಸಿದರು. ನಾವೆಲ್ಲರೂ ಇಂದು ಸಮಗ್ರ ಹಾಗೂ ಸುಂದರವಾದ ಭಾರತದಲ್ಲಿ ನಿರ್ಭಯವಾಗಿ ಜೀವಿಸುತ್ತಿದ್ದೇವೆ ಎಂದರೆ ಡಾ. ಶ್ಯಾಮಪ್ರಸಾದ ಮುಖರ್ಜಿರವರ ಉದಾತ್ತ ಆದರ್ಶಗಳೆ ಪ್ರಮುಖ ಕಾರಣಗಳಾಗಿವೆ ಎಂದರು.
ಮುಖರ್ಜಿಯವರ ವಿಚಾರ ಮತ್ತು ಅವರ ಆದರ್ಶಗಳು ಇಂದು ಕೂಡ ನಮಗೆ ದಾರಿದೀಪವಾಗಿವೆ. ಆ ದಾರಿದೀಪ ಮುಂದಿನ ಪೀಳಿಗೆಗೂ ಕೂಡ ಇರಬೇಕು ಅನ್ನುವ ಕಾರಣಕ್ಕಾಗಿ ಈ ಜನ್ಮದಿನ ನಾವು ಆಚರಣೆ ಮಾಡುತ್ತಿದ್ದೇವೆ. ಇದನ್ನು ಅತ್ಯಂತ ಶ್ರದ್ಧೆಯಿಂದ, ಭಕ್ತಿಯಿಂದ ನಾವು ಮಾಡಬೇಕಾಗಿ ತಮ್ಮೆಲ್ಲರಿಗೂ ವಿನಂತಿಯನ್ನು ಮಾಡುತ್ತೇನೆ. ಅವರ ವಿಚಾರಧಾರೆಗಳನ್ನು ಓದಿ ತಿಳ್ಕೊಂಡು, ಅನುಷ್ಠಾನ ನಿಮ್ಮ ಬದುಕಿನಲ್ಲಿ ಮಾಡಿದರೆ ಅದು ಸಾರ್ಥಕತೆ ಆಗುತ್ತದೆ ಎಂದರು.ಎಸ್‌ಐಆರ್ ಪ್ರಕ್ರಿಯೆ ಕುರಿತು ಮಾತನಾಡಿದ ಅವರು, 2002ರ ಪೂರ್ವದಲ್ಲಿ 7 ಬಾರಿ ಮತದಾರರ ಪರಿಷ್ಕರಣೆ ಜರುಗಿದೆ. ಕಾಂಗ್ರೆಸ್ ಅನಗತ್ಯವಾಗಿ ಎಸ್‌ಐಆರ್ ಕುರಿತು ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದೆ. ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರು ಕಡ್ಡಾಯವಾಗಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ಅಗತ್ಯ ದಾಖಲೆಗಳನ್ನು ಬಿಎಲ್‌ಒಗಳಿಗೆ ನೀಡಿ ಸಹಕರಿಸಬೇಕು ಎಂದು ತಿಳಿಸಿದರು.
ಗದಗ ಜಿಲ್ಲಾ ಕೋಶಾಧ್ಯಕ್ಷ ನಾಗರಾಜ ಕುಲಕರ್ಣಿ ಮಾತನಾಡಿ, ಡಾ. ಶ್ಯಾಮಪ್ರಸಾದ ಮುಖರ್ಜಿರವರು ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿ ಪಕ್ಷವನ್ನು ಹುಟ್ಟಿಹಾಕಿ ದೇಶದಲ್ಲಿ ಒಂದೆ ಕಾನೂನು ಇರಬೇಕು, ಒಂದೇ ಧ್ವಜ ಇರಬೇಕು, ಒಂದೇ ಸಂವಿಧಾನ ಇರಬೇಕು ಹಾಗೂ ಭಾರತ ಸಮಗ್ರವಾಗಿರಬೇಕೆಂದು ಚಿಂತನೆ ಮಾಡಿ ದೇಶಾದ್ಯಂತ ಜನಾಂದೊಲನ ರೂಪಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖಂಡ ಭೋಜರಾಜ ಕರೂದಿ ಮಾತನಾಡಿ, ಡಾ. ಶ್ಯಾಮಪ್ರಸಾದ ಮುಖರ್ಜಿರವರು ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿ ಕೇಂದ್ರದ ಸಚಿವರಾಗಿ ಅನೇಕ ಜನಪರ ಕಾರ್ಯಕ್ರಮವನ್ನು ಈ ನಾಡಿಗೆ ನೀಡಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ರಾಷ್ಟçದ ಹಿತಚಿಂತಕರಾಗಿ ಕೆಲಸವನ್ನು ಮಾಡಿದವರು ಡಾ. ಶ್ಯಾಮಪ್ರಸಾದ ಮುಖರ್ಜಿರವರು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಮುನ್ನಡೆಯೋಣ ಎಂದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಸಿದ್ದರಾಜ ಕಲಕೋಟಿ, ಶೋಭಾ ನಿಸ್ಸೀಮಗೌಡ್ರ, ನೀಲಪ್ಪ ಚಾವಡಿ, ಸಂತೋಷ ಆಲದಕಟ್ಟಿ, ಸಿದ್ದಪ್ಪ ಚಿಕ್ಕಬಿದರಿ, ನಂಜುಂಡೇಶ ಕಳ್ಳೇರ, ಶಿವಲಿಂಗಪ್ಪ ತಲ್ಲೂರು, ಪ್ರಕಾಶಗೌಡ ಪಾಟೀಲ, ಶಿವಾನಂದ ಮ್ಯಾಗೇರಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಮಂಡಲದ ಪದಾಕಾರಿಗಳು, ಪ್ರಕೋಷ್ಠ ಪದಾಕಾರಿಗಳು ಪಾಲ್ಗೊಂಡಿದ್ದರು.ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಅಕ್ರಮ ಮತದಾರರ ಸೇರ್ಪಡೆಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬೇಡಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಅದನ್ನ ತಡೆಯಲು ಸ್ಕ್ವಾಡ್‌ಗಳನ್ನು ಎಲ್ಲಾ ಕಡೆ ರೇಡ್ ಮಾಡಬೇಕು. ಚೆಕ್ ಮಾಡಬೇಕು. ತಪ್ಪಿದ್ದರೆ ಕೇಸ್ ಅಲ್ಲೇ ಬುಕ್ ಮಾಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್ ಮಾಡುತ್ತಿದೆ. ಅದರ ಕೆಳಗೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಕೈಯಲ್ಲಿ ನೀವು ಕೆಲಸ ಮಾಡ್ತಾ ಇಲ್ಲ, ನೀವು ರಾಜ್ಯ ಸರ್ಕಾರದ ನೌಕರರು ಇರಬಹುದು. ಆದರೆ ಈ ಕೆಲಸ ಇಲೆಕ್ಷನ್ ಕಮಿಷನ್ ಕೆಲಸ. ಚುನಾವಣಾ ಸಂದರ್ಭದಲ್ಲಿ ಇದ್ದ ಹಾಗೆ ನಿಷ್ಪಕ್ಷಪಾತವಾಗಿ ಇರಬೇಕು. ಅದೇ ರೀತಿ ಈಗಲೂ ಕೂಡ ನಿಷ್ಪಕ್ಷಪಾತವಾಗಿ ಯಾವುದೇ ಪ್ರಭಾವಕ್ಕೆ, ಒತ್ತಡಕ್ಕೆ ಮಣಿಯದೇ ಕೆಲಸ ಮಾಡಬೇಕು. ಮಾಡದಿದ್ದರೆ, ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ನಾವು ತಯಾರಿದ್ದೇವೆ ಎಂದರು.