ಸರ್ಕಾರದ ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇಲಾಖೆಗಳ ಅಧಿಕಾರಿಗಳು, ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ಸ್ಥಳೀಯ ಆಡಳಿತದ ಸಹಕಾರ ಪಡೆದುಕೊಂಡು ಶ್ರಮಿಸಬೇಕು

ಕುಷ್ಟಗಿ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರೆ, ಗ್ಯಾರಂಟಿ ಸಮಿತಿ ಸದಸ್ಯರು ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್ ಮಾತನಾಡಿ, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ತಲುಪಬೇಕು. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದಿಸಿ, ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರದೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ತಾಪಂ ಇಒ ಅಮರೇಶ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇಲಾಖೆಗಳ ಅಧಿಕಾರಿಗಳು, ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ಸ್ಥಳೀಯ ಆಡಳಿತದ ಸಹಕಾರ ಪಡೆದುಕೊಂಡು ಶ್ರಮಿಸಬೇಕು ಎಂದರು.

ಯುವನಿಧಿ ಯೋಜನೆಯ ನೋಡಲ್ ಅಧಿಕಾರಿ ಶಿವಯೋಗಪ್ಪ ಮಾತನಾಡಿ, ಯುವನಿಧಿ ಯೋಜನೆಯಿಂದ ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೆಎಸ್ಆರ್‌ಟಿಸಿ ಘಟಕದ ವ್ಯವಸ್ಥಾಪಕ ಶಿವಶಂಕರಗೌಡ ಪಾಟೀಲ ಮಾತನಾಡಿ, ಕುಷ್ಟಗಿ ಘಟಕದಲ್ಲಿ ಸುಮಾರು 300 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 12 ಸಿಬ್ಬಂದಿ ಕೊರತೆ ಇದೆ. ಆದರೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಾರಿಗೆ ಸೇವೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಬಸ್ ಪಾಸ್ ಮೊತ್ತವನ್ನು ಮರುಪಾವತಿ ಮಾಡಲಾಗುತ್ತಿದ್ದು, ಶಾಲಾ ಮಕ್ಕಳ ಅನುಕೂಲಕ್ಕಾಗಿ ವಿಶೇಷ ಬಸ್‌ಗಳನ್ನು ಬಿಡಲಾಗುತ್ತಿದೆ ಎಂದು ಹೇಳಿದರು.

ಆಹಾರ ಇಲಾಖೆ ಅಧಿಕಾರಿ ಮಾತನಾಡಿ, ತಾಲೂಕಿನಲ್ಲಿ 104 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 72 ಸಾವಿರ ರೇಷನ್ ಕಾರ್ಡ್‌ಗಳಿವೆ. ಎರಡು ಲಕ್ಷಕ್ಕೂ ಅಧಿಕ ಫಲಾನುಭವಿಗಳು ವಿವಿಧ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಹುಲಿಯಾಪುರ ನ್ಯಾಯಬೆಲೆ ಅಂಗಡಿ ಪರವಾನಗಿಯನ್ನು ರದ್ದುಪಡಿಸಿ ಮತ್ತೊಂದು ಅಂಗಡಿಗೆ ಜೋಡಿಸಲಾಗಿದೆ ಎಂದರು.

ಜೆಸ್ಕಾಂ ಅಧಿಕಾರಿ ಮಾತನಾಡಿ, ಹನುಮಸಾಗರ ಹಾಗೂ ನಿಲೋಗಲ್ ಭಾಗದಲ್ಲಿ ಲೋಡ್ ಜಾಸ್ತಿ ಆಗುತ್ತಿರುವ ಕಾರಣ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಶಿಥಿಲಗೊಂಡ ಕಂಬಗಳು ಹಾಗೂ ಹಳೆಯ ತಂತಿಗಳನ್ನು ಬದಲಾವಣೆ ಮಾಡಲು ಮುಂದಾಗಿದ್ದೇವೆ. ಸುಟ್ಟಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ತ್ವರಿತವಾಗಿ ಬದಲಾಯಿಸಲಾಗುತ್ತಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾದಾಗ ತ್ವರಿತ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಅಮರೇಶ ಸೂಚಿಸಿದರು.

ಸಿಡಿಪಿಒ ಇಲಾಖೆ ಅಧಿಕಾರಿ ಪ್ರಗತಿ ವರದಿ ಓದಿದರು. ಶಾರದಾ ಕಟ್ಟಿಮನಿ, ವೀರಬಸಯ್ಯ ಕಾಡಗಿಮಠ ಭಾಗವಹಿಸಿದ್ದರು.

ಸ್ವಚ್ಛತೆ ಕಾಪಾಡಿ: ಕುಷ್ಟಗಿ ಬಸ್ ನಿಲ್ದಾಣದಲ್ಲಿರುವ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಸ್ವಚ್ಛವಾಗಿಡಬೇಕು ಎಂದು ಕೆಎಸ್ಆರ್‌ಟಿಸಿ ಘಟಕದ ವ್ಯವಸ್ಥಾಪಕ ಶಿವಶಂಕರಗೌಡ ಪಾಟೀಲ ಅವರು ತಾಪಂ ಇಒ ಅಮರೇಶ ಸೂಚಿಸಿದರು. ಪ್ರಯಾಣಿಕರಿಗೆ ಬಸ್ ವೇಳಾಪಟ್ಟಿ ಹಾಗೂ ಅಗತ್ಯ ಮಾಹಿತಿಯನ್ನು ಸ್ಪಷ್ಟವಾಗಿ ಒದಗಿಸುವ ವ್ಯವಸ್ಥೆ ಮಾಡಬೇಕು. ವಾಣಿಜ್ಯ ಮಳಿಗೆಗಳ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ನಿಯಮ ಉಲ್ಲಂಘಿಸಿದರೆ ಗುತ್ತಿಗೆ ಷರತ್ತು ಪ್ರಕಾರ ಕ್ರಮ ಕೈಗೊಳ್ಳಬೇಕು. ಸ್ವಚ್ಛತೆ ಕಾಪಾಡಬೇಕು, ಶೌಚಾಲಯಕ್ಕೆ ಹೆಚ್ಚಿನ ದುಡ್ಡು ವಸೂಲಿ ನಿಯಂತ್ರಣ ಮಾಡಬೇಕು. ಎಂದು ಹೇಳಿದರು.