ವಿದುರಾಶ್ವತ್ಥದಲ್ಲಿ ಬಿಜೆಪಿಯಿಂದ ತಿರಂಗಾ ಯಾತ್ರೆ

| Published : Aug 13 2025, 12:30 AM IST

ವಿದುರಾಶ್ವತ್ಥದಲ್ಲಿ ಬಿಜೆಪಿಯಿಂದ ತಿರಂಗಾ ಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಆ.13ರಿಂದ ಹರ್‌ ಘರ್‌ ತಿರಂಗಾ ಕಾರ್ಯಕ್ರಮದ ಮೂಲಕ ಪ್ರತಿ ಮನೆಯಲ್ಲೂ ತಿರಂಗಾ ಧ್ವಜ ಹಾರಾಡಲಿದೆ. ಈ ಮೂಲಕ ಸ್ವಾತಂತ್ರ್ಯಸಂಭ್ರಮ ಮತ್ತಷ್ಟು ಹೆಚ್ಚಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಶಾಲೆಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ನಾನಾ ಕಡೆ ಆ.15ರಂದು 79ನೇ ಸ್ವಾತಂತ್ರ ದಿನಾಚರಣೆಗೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಹೀಗಾಗಿ, ಆ.13ರಿಂದ ಹರ್‌ ಘರ್‌ ತಿರಂಗಾ ಕಾರ್ಯಕ್ರಮದ ಮೂಲಕ ಪ್ರತಿ ಮನೆಯಲ್ಲೂ ತಿರಂಗಾ ಧ್ವಜ ಹಾರಾಡಲಿದೆ. ಈ ಮೂಲಕ ಸ್ವಾತಂತ್ರ್ಯಸಂಭ್ರಮ ಮತ್ತಷ್ಟು ಹೆಚ್ಚಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಶ್ರೀ ಅಶ್ವತ್ಥನಾರಾಯಣ ಸ್ವಾಮಿಯ ಸನ್ನಿಧಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಮನೆ, ಮನೆಗೆ ತ್ರಿವರ್ಣ ಧ್ವಜ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯಾತ್ರೆಗೂ ಮುನ್ನ ವಿದುರಾಶ್ವತ್ಥ ಶ್ರೀ ಅಶ್ವತ್ಥನಾರಾಯಣಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ನಂತರ ವೀರಸೌಧಕ್ಕೆ ನಮನ ಸಲ್ಲಿಸಿದರು.

ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ:

ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ನಾಗರಿಕರು ರಾಷ್ಟ್ರಧ್ವಜವನ್ನು ಮನೆಗೆ ತಂದು ಹೆಮ್ಮೆಯಿಂದ ಪ್ರದರ್ಶಿಸಲು ಪ್ರೇರೇಪಿಸುವುದು ಹರ್ ಘರ್ ತಿರಂಗಾ ಅಭಿಯಾನದ ಪ್ರಾಥಮಿಕ ಉದ್ದೇಶ. ನಮ್ಮ ದೇಶದ ಸಾರ್ವಭೌಮತ್ವ ಮತ್ತು ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗಗಳ ಸಂಕೇತವಾಗಿ ರಾಷ್ಟ್ರಧ್ವಜದ ಮಹತ್ವವನ್ನು ಬಲಪಡಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ ಎಂದರು.

ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದೇ ಖ್ಯಾತಿ ಪಡೆದಿರುವ ವಿದುರಾಶ್ವತ್ಥದಲ್ಲಿ 1938ರಲ್ಲಿ ದೇಶಕ್ಕಾಗಿ 33 ಮಂದಿ ವೀರರು ಪ್ರಾಣತ್ಯಾಗ ಮಾಡಿದರು. ಇದೇ ರೀತಿ ದೇಶದ 9 ಕಡೆ ಸ್ವಾತಂತ್ರ್ಯಕ್ಕೆ ಹೋರಾಡಿದ ಹುತಾತ್ಮರ ಸ್ಥಳಗಳಿವೆ ಎಂದು ಅವರು ತಿಳಿಸಿದರು.

ಅಭಿಯಾನಕ್ಕೆ ಕೈಜೋಡಿಸಿ:

ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ತಮ್ಮ ಮನೆಗಳ ಮೇಲೆ ಆ.13 ರಿಂದ 15ರವರೆಗೆ ತ್ರಿವರ್ಣ ಧ್ವಜ ಹಾರಿಸಿ, ತಿರಂಗಾ ಅಭಿಯಾನದ ಛಾಯಾಚಿತ್ರಗಳನ್ನು ಮಾಡಬಹುದಾಗಿದೆ. ಸಾರ್ವಜನಿಕರು ಈ ತಿರಂಗಾ ಅಭಿಯಾನದಲ್ಲಿ ಕೈ ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಸಮಾರಂಭದಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವನಾಥ್‌, ಶಾಸಕ ಮುನಿರಾಜು, ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಮತ್ತಿತರ ನಾಯಕರು ಪಾಲ್ಗೊಂಡಿದ್ದರು.

ರ್‍ಯಾಲಿ ಆಯೋಜನೆ:

ಯಾತ್ರೆಯ ಅಂಗವಾಗಿ ಬೆಂಗಳೂರು- ಯಲಹಂಕ- ದೊಡ್ಡಬಳ್ಳಾಪುರ- ಗೌರಿಬಿದನೂರು ಹೊರವಲಯದ ಎಪಿಎಂಸಿ ಮಾರುಕಟ್ಟೆ ಸರ್ಕಲ್ ನಿಂದ ವಿದುರಾಶ್ವತ್ಥದ ವೀರಸೌಧದವರೆಗೆ‌ ಬೈಕ್ ರ್‍ಯಾಲಿ ಆಯೋಜಿಸಲಾಗಿತ್ತು. ಈ ಮಧ್ಯೆ, ನಗರ ಹೊರವಲಯದಲ್ಲಿರುವ ತಾಲೂಕು ಕಚೇರಿ ಆವರಣದಲ್ಲಿ ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟುದಾರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಇದೇ ಮಾರ್ಗವಾಗಿ ಬಂದ ವಿಜಯೇಂದ್ರ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ವಾಟದಹೊಸಹಳ್ಳಿ ಕೆರೆ ನೀರನ್ನು ಗೌರಿಬಿದನೂರು ನಗರಕ್ಕೆ ಹರಿಸದಂತೆ ಆಗ್ರಹಿಸಿದರು.