ಬಿಜೆಪಿಗರ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ: ಡಿ.ಸುಧಾಕರ್ ವ್ಯಂಗ್ಯ

| Published : May 21 2024, 12:32 AM IST

ಬಿಜೆಪಿಗರ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ: ಡಿ.ಸುಧಾಕರ್ ವ್ಯಂಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ರೋಟರಿ ಸಭಾಂಗಣದಲ್ಲಿ ಸೋಮವಾರ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರ ಸಭೆಯನ್ನು ಸಚಿವ ಡಿ.ಸುಧಾಕರ್ ಉದ್ಘಾಟನೆ ಮಾಡಿ ಬಳಿಕ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಬಿಜೆಪಿಯವರ ಮಾತಿಗೂ ಕೃತಿಗೂ ಸಂಬಂಧವೇ ಇರುವುದಿಲ್ಲ. ಅವರು ಹೇಳುವುದೊಂದು ಮಾಡುವುದೊಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಆರೋಪಿಸಿದರು.

ನಗರದ ರೋಟರಿ ಸಭಾಂಗಣದಲ್ಲಿ ಸೋಮವಾರ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿಯ ಕೇಂದ್ರ ನಾಯಕರು ರಾಜ್ಯದಲ್ಲಿ ಬಿಜೆಪಿಯ ರಾಜ್ಯ ನಾಯಕರು ಅವರ ಶಕ್ತಾನುಸಾರ ಜಿದ್ದಿಗೆ ಬಿದ್ದವರಂತೆ ಸುಳ್ಳು ಹೇಳುತ್ತಾರೆ. ಈ ಹಿಂದೆ ಈ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಇದೀಗ ನಮ್ಮ ನಾಯಕರು ಆರಕ್ಕೆ ಆರು ಕ್ಷೇತ್ರಗಳನ್ನು ಗೆಲ್ಲುವ ಹಠ ತೊಟ್ಟಿದ್ದು, ಕಾಂಗ್ರೆಸ್ ಕಾರ್ಯ ಕರ್ತರು ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ನಮ್ಮ ತಾಲೂಕಿನಲ್ಲಿನ ಎಲ್ಲಾ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಮುಖಂಡರು ಕೆಲಸ ಮಾಡಿ. ನಾರಾಯಣಸ್ವಾಮಿ ಶಿಕ್ಷಕರ ಸಮಸ್ಯೆಗಳನ್ನು ಸದಾ ಜೀವಂತವಾಗಿಟ್ಟು, ರಾಜಕಾರಣ ಮಾಡಿದ್ದಾರೆ. ಶಿಕ್ಷಕರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ. ಸಿದ್ದರಾಮಯ್ಯನವರು 2013ರಲ್ಲಿ ಮುಖ್ಯಮಂತ್ರಿಯಾದಾಗ ಪ್ರಣಾಳಿಕೆಯ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದರು. ಅವರಿಗೆ ಶಿಕ್ಷಕರ ಸಮಸ್ಯೆಗಳ ಅರಿವಿದೆ. 7ನೇ ವೇತನ ಆಯೋಗದ ಜಾರಿಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಹಾಗಾಗಿ ಪ್ರಜ್ಞಾವಂತ ಶಿಕ್ಷಕರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಶ್ರೀನಿವಾಸ್‌ರವರ ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಓಪಿಎಸ್ ಎನ್ನುವ ಅನಿಷ್ಟ ಪದ್ಧತಿಯಿಂದ ನೌಕರರನ್ನು ಹೊರ ತರಲು ಕಾಂಗ್ರೆಸ್ ಬದ್ಧವಾಗಿದೆ. ಶ್ರೀನಿವಾಸ್ ರವರ ಗೆಲುವಿನಿಂದ ಶಿಕ್ಷಕರ ಸಮಸ್ಯೆ ಬಗೆಹರಿಯಲಿವೆ. ಸುಳ್ಳು ಹೇಳುವುದನ್ನೇ ಅಭಿವೃದ್ಧಿ ಎಂದುಕೊಂಡಿರುವ ಬಿಜೆಪಿಯವರ ಬಗ್ಗೆ ಶಿಕ್ಷಕರು ಎಚ್ಚರವಾಗಿರಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರ ಕೆಡವುತ್ತಾರೆ ಎಂದು ಪ್ರಧಾನಿ ಹೇಳುತ್ತಾರೆ. ಪ್ರಧಾನಿ ಹುದ್ದೆಗೆ ಅವಮಾನವಾಗುವಂತಹ ಮಾತನ್ನು ಮೋದಿ ಆಡುತ್ತಾರೆ. ರಾಮ ನಮ್ಮ ದೇವರು. ಬಿಜೆಪಿಯವರಿಗೆ ಇರುವ ಭಕ್ತಿಗಿಂತ ಹೆಚ್ಚಿನ ಭಕ್ತಿ ನಮಗೆ ರಾಮನ ಮೇಲಿದೆ. ಬುಲ್ದೊಜರ್ ಸಂಸ್ಕೃತಿ ಏನಿದ್ದರೂ ಯೋಗಿ ಆದಿತ್ಯನಾಥರದು. ಸಿದ್ದರಾಮಯ್ಯ ನವರಂತಹ ಮುಖ್ಯಮಂತ್ರಿಯನ್ನ ನೀವು ಮತ್ತೆಂದೂ ನೋಡಲಾರಿರಿ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಶಿಕ್ಷಕರ ಸಮಸ್ಯೆ ತಂತಾನೇ ಬಗೆಹರಿಯಲಿವೆ ಎಂದರು.

ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಒಂದೇ ಒಂದು ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಅಡ್ವೋಕೇಟ್ ಕಳಿಸಿ ನಮ್ಮ ನಾಮಪತ್ರ ತಿರಸ್ಕೃತಗೊಳಿಸೋ ತಂತ್ರ ಮಾಡ್ತಾರೆ ಅಂದ್ರೆ, ವಿರೋಧಿಗಳ ಕುತಂತ್ರದ ಬಗ್ಗೆ ಯೋಚಿಸಿ.ಆದ್ದರಿಂದ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಬಗ್ಗೆ ಶಿಕ್ಷಕರು ಯೋಚಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಸ್ತುವಾರಿ ರಾಮಲಿಂಗಯ್ಯ, ಪ್ರಾಂಶುಪಾಲರಾದ ನಾಗರಾಜ್, ಮನೋಹರ್, ಸೌಮ್ಯ, ಶಬ್ಬೀರ್, ನಾಗಣ್ಣ, ರಂಗಸ್ವಾಮಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಗೀತಾ ನಂದಿನಿ ಗೌಡ, ಬಿ ಹೆಚ್ ಮಂಜುನಾಥ್, ಬಿಪಿ ತಿಪ್ಪೇಸ್ವಾಮಿ,ಅಮೃತೇಶ್ವರ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಖಾದಿ ರಮೇಶ್, ಈರಲಿಂಗೇಗೌಡ, ಡಾ ಸುಜಾತಾ, ನಾಗೇಂದ್ರ ನಾಯ್ಕ, ಬಿಪಿ ತಿಪ್ಪೇಸ್ವಾಮಿ, ಪೂರ್ಣಿಮಾ ಶ್ರೀನಿವಾಸ್, ಜಿ ಎಸ್ ಮಂಜುನಾಥ್, ಶಿವರಂಜಿನಿ, ಗೀತಾ ನಾಗಕುಮಾರ್ ಮುಂತಾದವರು ಹಾಜರಿದ್ದರು.ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಮೂರು ಬಾರಿ ಗೆದ್ದರೂ ನಾರಾಯಣಸ್ವಾಮಿ ನಿಮ್ಮ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಿಲ್ಲ. ನಮ್ಮ ಪಕ್ಷದ ಸರ್ಕಾರ ಓಪಿಎಸ್ ಜಾರಿ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ಅದಕ್ಕಾಗಿಯೇ ಸಮಿತಿ ರಚಿಸಿ ಎರಡು ಸಭೆ ನಡೆಸಲಾಗಿದೆ. ಅತಿಥಿ ಶಿಕ್ಷಕರ ಸಂಬಳ ಹೆಚ್ಚಿಸಿದ್ದು , ಫ್ರಿಡಂಪಾರ್ಕ್ ನಲ್ಲಿ ಶಿಕ್ಷಕರು ಹೋರಾಟ ನಡೆಸಿದಾಗ ನಮ್ಮ ಮುಖಂಡರು ಬೆಂಬಲಕ್ಕೆ ನಿಂತಿದ್ದು, ಹೀಗೆ ಯಾವಾಗ್ಯಾವಾಗ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೋ ಆಗೆಲ್ಲಾ ಕಾಂಗ್ರೆಸ್ ಪಕ್ಷ ಅವರ ಬೆನ್ನಿಗೆ ನಿಂತಿದೆ. ಬಿಜೆಪಿಯವರ ಸುಳ್ಳುಗಳಿಗೆ ಮರುಳಾಗದೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು.