ದಾವಣಗೆರೆ ಎಂಸಿಸಿ ಬಿ ಬ್ಲಾಕ್‌ನ ಶಾಮನೂರು ರಸ್ತೆಯ ಪಾರ್ಕ್‌ನ ಸುಸ್ಥಿತಿಯಲ್ಲಿದ್ದ ಕಾಂಪೌಂಡ್ ತೆರವುಗೊಳಿಸಿದ್ದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಅದೇ ಪಾರ್ಕ್ ಎದುರು ಗುರುವಾರ ಧರಣಿ ನಡೆಸಲಾಯಿತು. ಕಾಂಪೌಂಡ್ ತೆರವಾದ ಸ್ಥಳದ ಬಳಿಯೇ ಧರಣಿ ನಡೆಸಿದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಡಿಸಿ ಆದೇಶವೆಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಹೇಳಿಕೆ ಬಗ್ಗೆ ಸ್ಪಷ್ಟನೆಗೆ ಒತ್ತಾಯ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಎಂಸಿಸಿ ಬಿ ಬ್ಲಾಕ್‌ನ ಶಾಮನೂರು ರಸ್ತೆಯ ಪಾರ್ಕ್‌ನ ಸುಸ್ಥಿತಿಯಲ್ಲಿದ್ದ ಕಾಂಪೌಂಡ್ ತೆರವುಗೊಳಿಸಿದ್ದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಅದೇ ಪಾರ್ಕ್ ಎದುರು ಗುರುವಾರ ಧರಣಿ ನಡೆಸಲಾಯಿತು. ಕಾಂಪೌಂಡ್ ತೆರವಾದ ಸ್ಥಳದ ಬಳಿಯೇ ಧರಣಿ ನಡೆಸಿದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ ಮಾತನಾಡಿ, ಪಾರ್ಕ್‌ನ ಸುಸಜ್ಜಿತ ಕಾಂಪೌಂಡ್ ತೆರವು ಮಾಡಿ, ತೋಟಗಾರಿಕೆ ಇಲಾಖೆ ಅನುದಾನದಲ್ಲಿ ಡಿಸಿ ಆದೇಶದ ಮೇರೆಗೆ ಹೊಸ ಕಾಮಗಾರಿ ಕೈಗೊಳ್ಳುತ್ತಿರುವುದಾಗಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದು, ಈ ಬಗ್ಗೆ ಡಿಸಿ ಸ್ಪಷ್ಟನೆ ನೀಡಲಿ. ಕಾಂಪೌಂಡ್ ತೆರವು ಕಾಮಗಾರಿ ನಿಲ್ಲಿಸುವಂತೆ ಸೆ.1ರಂದು ಸ್ಥಳಕ್ಕೆ ಭೇಟಿ ನೀಡಿ, ಡಿಸಿಗೂ ಮನವಿ ಮಾಡಿದ್ದೆವು. ತಾಂತ್ರಿಕ ಸಮಿತಿ ರಚಿಸಿ, ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ್ದೆವು ಎಂದರು.
ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಸುಸ್ಥಿತಿಯಲ್ಲಿದ್ದ ಕಾಂಪೌಂಡ್ ಕೆಡವಿ, ₹96 ಲಕ್ಷ ವೆಚ್ಚದಲ್ಲಿ ಹೊಸ ಕಾಮಗಾರಿ ಕೈಗೊಂಡಿರುವುದು ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಹುನ್ನಾರವಾಗಿದೆ. ರಾಜ್ಯದಲ್ಲಿ ಬರ ಆವರಿಸಿದ್ದರೂ ಜಿಲ್ಲಾ ಸಚಿವರು ವಿದೇಶದಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಬರ ಸೇರಿದಂತೆ ಅನೇಕ ಪ್ರಮುಖ ವಿಚಾರದ ಬಗ್ಗೆ ಕರೆದಿದ್ದ ವಿಧಾನಸಭೆ ವಿಶೇಷ ಅಧಿವೇಶನಕ್ಕೂ ಗೈರಾಗಿದ್ದಾರೆ. ಗಣಿ ಮತ್ತು ತೋಟಗಾರಿಕೆ ಇಲಾಖೆಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇಡೀ ಜಿಲ್ಲಾಡಳಿತವು ಶಾಮನೂರು ಕುಟುಂಬದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಮಾತನಾಡಿ, ತೀವ್ರ ಬರ ಆವರಿಸಿದ್ದರೂ ಖಾಲಿ ಬೊಕ್ಕಸದ ಕಾಂಗ್ರೆಸ್ ಸರ್ಕಾರ ಇಲ್ಲಿ ಸುಸ್ಥಿತಿಯಲ್ಲಿದ್ದ ಕಾಂಪೌಂಡ್ ತೆರವು ಮಾಡಿಸಿ, ಸಾರ್ವಜನಿಕರ ತೆರಿಗೆ ಹಣವನ್ನು ಕೊಳ್ಳೆ ಹೊಡೆಯಲು ಮುಂದಾಗಿದೆ. ತಕ್ಷಣವೇ ಕಾಮಗಾರಿ ತಡೆ ಹಿಡಿದು, ಸುಸ್ಥಿತಿಯಲ್ಲಿರುವ ಕಾಂಪೌಂಡ್ ಯಥಾಸ್ಥಿತಿಯಲ್ಲಿ ಬಿಡದಿದ್ದರೆ ಬಿಜೆಪಿಯಿಂದ ತೀವ್ರ ಹೋರಾಟ ನಡೆಸಬೇಕಾದೀತು ಎಂದರು.
ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಮಾತನಾಡಿ, ಉತ್ತರ, ದಕ್ಷಿಣ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಸಾಕಷ್ಟು ಕೆಲಸಗಳು ಬಾಕಿ ಇದೆ. ಸಾಕಷ್ಟು ಮೂಲ ಸೌಕರ್ಯ ಕಲ್ಪಿಸುವುದಾಗಿ ಬಾಕಿ ಇದೆ ಎಂದರು.ಉತ್ತರ ಕ್ಷೇತ್ರ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ ಮಾತನಾಡಿ, ಈ ಹಿಂದೆ ನಮ್ಮ ಸರ್ಕಾರವನ್ನು ಶೇ.40 ಕಮೀಷನ್ ಸರ್ಕಾರವೆಂದು ಸುಳ್ಳು ಆರೋಪ ಮಾಡುತ್ತಿದ್ದ ಕಾಂಗ್ರೆಸ್ಸಿನ ಸರ್ಕಾರದಲ್ಲಿ ಇಂದು ಶೇ.60-70ರಷ್ಟು ಕಮೀಷನ್ ವಸೂಲು ಮಾಡುತ್ತಿದ್ದಾರೆ. ಮಂತ್ರಿಗಳ ಜೊತೆಗೆ ಮಂತ್ರಿಗಳ ಹಿಂಬಾಲಕರ ಕಮೀಷನ್ ಸೇರಿದಂತೆ ಶೇ.60-70 ವಸೂಲಿ ಮಾಡುತ್ತಿದ್ದಾರೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ, ಎಸ್.ಟಿ.ವೀರೇಶ, ಎಚ್.ಎನ್.ಗುರುನಾಥ, ಶಿವನಹಳ್ಳಿ ರಮೇಶ, ಕೊಂಡಜ್ಜಿ ಜಯಪ್ರಕಾಶ, ಎಚ್.ಎನ್.ಶಿವಕುಮಾರ, ಜಿ.ಎಸ್.ಅನಿತಕುಮಾರ, ಮುರುಗೇಶ ಆರಾಧ್ಯ, ಶಿವರಾಜ ಪಾಟೀಲ, ಸುರೇಶ ಗಂಡಗಾಳೆ, ಶಿವನಗೌಡ ಟಿ.ಪಾಟೀಲ, ಲಿಂಗರಾಜ, ಧನಂಜಯ ಕಡ್ಲೇಬಾಳ್, ಆರ್.ಲಕ್ಷ್ಮಣ, ಸಿದ್ದೇಶ, ತಾರೇಶ ನಾಯ್ಕ, ಜಯಪ್ರಕಾಶ, ಎಚ್.ಪಿ.ವಿಶ್ವಾಸ, ಗುತ್ತೂರು ಮಂಜುನಾಥ, ವಿನಯ್ ದಿಳ್ಯಪ್ಪ, ಪಿ.ಎಸ್.ಬಸವರಾಜ, ಅಣಬೇರು ನಂದಕುಮಾರ, ಬಿ.ಆನಂದ ಕೆಟಿಜೆ ನಗರ, ಟಿಂಕರ ಮಂಜಣ್ಣ, ಕರಿಯಪ್ಪ, ಹರೀಶ ಶಾಮನೂರು, ಕೆ.ಜಿ.ಕಲ್ಲಪ್ಪ, ಡಿ.ಎಸ್.ಶಿವಶಂಕರ, ಕುಂಬಾರ ನಾಗಣ್ಣ, ಬಸವರಾಜಯ್ಯ, ಶ್ಯಾಗಲೆ ದೇವೇಂದ್ರಪ್ಪ, ನನ್ನಯ್ಯ, ಸೋಗಿ ಗುರು, ಮುಕುಂದ, ಗೋವಿಂದರಾಜ, ನಾಗರಾಜ ಸುರ್ವೆ, ಸಂಗೀತ ಮಂಜುನಾಥ, ಉಷಾ ಪದ್ಮನಾಭ ಶೆಟ್ಟಿ, ಶಾಂತಾ ದೊರೆ, ವೀಣಾ ನಂಜಪ್ಪ, ಕಲಾವತಿ, ಕುಸುಮ, ನೀಲಮ್ಮ ಇತರರು ಇದ್ದರು.- - -
(ಕೋಟ್) ಕಾಮಗಾರಿ ಬಗ್ಗೆ ದಾಖಲೆ ಕೋರಿದರೆ ತೋಟಗಾರಿಕೆ ಇಲಾಖೆಗೆ ಮಾಹಿತಿ ನೀಡುತ್ತಿಲ್ಲ. ನಿರ್ಮಿತಿ ಕೇಂದ್ರದ ಮುಖ್ಯಸ್ಥರಾದ ಜಿಲ್ಲಾಧಿಕಾರಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸದೇ, ಕಾಮಗಾರಿ ಪುನಾರಂಭಕ್ಕೆ ಅನುಮತಿ ನೀಡಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಜನವರಿಯಲ್ಲಿ ಪಾರ್ಕ್ ನ ಜಿಪಿಎಸ್ ಫೋಟೋ ಸಹ ಅದು ಶಿಥಿಲಗೊಂಡಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿವೆ. ಈ ಹಿನ್ನೆಲೆ ತಕ್ಷಣ ಕಾಮಗಾರಿ ತಡೆ ಹಿಡಿಯಬೇಕು.- ಕೆ.ಪ್ರಸನ್ನಕುಮಾರ, ವಿಪಕ್ಷದ ಮಾಜಿ ನಾಯಕ, ನಗರ ಪಾಲಿಕೆ.
- - --1ಕೆಡಿವಿಜಿ8:
ದಾವಣಗೆರೆ ಶಾಮನೂರು ರಸ್ತೆಯ ಎಂಸಿಸಿ ಬಿ ಬ್ಲಾಕ್‌ನ ಸುಸ್ಥಿತಿಯ ಕಾಂಪೌಂಡ್ ತೆರವು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.