ಸಾರಾಂಶ
ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಐವಾನ್ ಡಿಸೋಜ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಾಂಗ್ಲಾದೇಶ ಮಾದರಿಯಲ್ಲಿ ರಾಜ್ಯಭವನದ ಮೇಲೆ ದಾಳಿಯಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಹೇಳಿಕೆಗೆ ಶಿವಮೊಗ್ಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರಚೋದನಕಾರಿ ಹೇಳಿಕೆ ನೀಡಿದ ಐವಾನ್ ಡಿಸೋಜ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಂಗಳವಾರ ದೂರು ಸಲ್ಲಿಸಲಾಯಿತು.ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ಐವಾನ್ ಡಿಸೋಜಾ ತಮ್ಮ ಕಾರ್ಯಕರ್ತರಿಗೆ ದೇಶ ವಿರೋಧಿ ಚಟುವಟಿಕೆ ನಡೆಸಲು ಕುಮ್ಮಕ್ಕು ನೀಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ದುರುದ್ದೇಶವಿದೆ. ಅವರ ವಿರುದ್ಧ ತಕ್ಷಣ ಪ್ರಕರಣ ದಾಖಲು ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.
ಬಾಂಗ್ಲಾ ದೇಶದಲ್ಲಿ ಆದ ಹಿಂಸಾಚಾರದ ಸ್ವರೂಪ ಇಲ್ಲೂ ಆಗುತ್ತದೆ ಎಂಬ ಪ್ರಚೋದಕಾರಿ ಹೇಳಿಕೆ ನೀಡಿರುವ ಐವಾನ್ ಡಿಸೋಜಾ ಅವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡು ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.ಇದರ ಜೊತೆ ಸಿಎಂ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಯಿತು. ಈ ವೇಳೆ ಮಾತನಾಡಿದ ಹರಿಕೃಷ್ಣ ಕೈಯಲ್ಲಿ ಸಂವಿಧಾನ ಹಿಡಿದು ಪರಿಪಾಲಕನಂತೆ ಬಿಂಬಿಸಿಕೊಳ್ಳುವ ರಾಹುಲ್ ಗಾಂಧಿ, ಐವಾನ್ ಹೇಳಿಕೆ ಸಂವಿಧಾನ ಬದ್ಧವಾಗಿದೆಯಾ ಅಥವಾ ಇಲ್ಲವಾ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.