ಬಿಜೆಪಿ ಕೃಪಾಪೋಷಿತ ಪಕ್ಷೇತರ ಅಭ್ಯರ್ಥಿ ಕಲ್ಲೋಳಕರ

| Published : Apr 30 2024, 02:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲುವ ಭಯ ಎದುರಾಗಿದ್ದರಿಂದ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಅವರನ್ನು ಪುಸಲಾಯಿಸುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲುವ ಭಯ ಎದುರಾಗಿದ್ದರಿಂದ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಅವರನ್ನು ಪುಸಲಾಯಿಸುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ಆರೋಪಿಸಿದರು.

ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಪರ ಮತಪ್ರಚಾರ ನಡೆಸಿದ ಅವರು, ಚಿಕ್ಕೋಡಿ ಸ್ಪರ್ಧಾ ಕಣದಲ್ಲಿ ಬಿಜೆಪಿ ಕೃಪಾಪೋಷಿತ ಅಭ್ಯರ್ಥಿ ಶಂಭು ಕಲ್ಲೋಳಕರ ಕಣದಲ್ಲಿದ್ದು ಮತದಾರರು ಎಚ್ಚರಿಕೆಯಿಂದ ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಿಸಬೇಕು ಎಂದರು.

ಮಾಜಿ ಶಾಸಕ ಎಸ್.ಬಿ.ಘಾಟಗೆ ಮಾತನಾಡಿ, ರಾಜ್ಯ ಸರ್ಕಾರದ ಜನಪರ ಆಡಳಿತದಿಂದ ಬಿಜೆಪಿಗೆ ಈಗಾಗಲೇ ಸೋಲಿನ ಭಯ ಹುಟ್ಟಿದೆ. ಹಾಗಾಗಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳನ್ನು ವಿಭಜಿಸಲು ಬಿಜೆಪಿ ಹುನ್ನಾರ ನಡೆಸಿದ್ದು ಪಕ್ಷೇತರ ಅಭ್ಯರ್ಥಿ ಕಲ್ಲೋಳಕರಗೆ ಕುಮ್ಮಕ್ಕು ನೀಡಿ ದಲಿತರ ಧಿಕ್ಕು ತಪ್ಪಿಸುತ್ತಿದೆ. ಬಿಜೆಪಿ ಕುತಂತ್ರ ರಾಜಕಾರಣ ಮಾಡುತ್ತಿದೆ. ಇದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯದಲ್ಲಿದ್ದು ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಮುಖಂಡ ಮಹಾವೀರ ಮೋಹಿತೆ ಮಾತನಾಡಿ, ಜಿಲ್ಲೆಯಲ್ಲಿ ರಾಜಕಿಹೊಳಿ ಕುಟುಂಬವು ಸದಾ ದಲಿತರ ಬೆನ್ನಿಗೆ ನಿಂತಿದೆ. ಹೀಗಾಗಿ ಎಲ್ಲ ಸಮುದಾಯಗಳು ಸಹೋದರತೆ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿವೆ. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿಯವರು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಮೇಲ್ವರ್ಗದ ಬಡವರಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಹಿರಿಯ ಮುಖಂಡ ಅಶೋಕ ಅಸೋದೆ ಮಾತನಾಡಿ, ಇಂದಿರಾ ಗಾಂಧಿ ಕಾಲದಿಂದಲೂ ದಲಿತ ಸಮುದಾಯ ಕಾಂಗ್ರೆಸ್ ಬೆಂಬಲಿಸುತ್ತ ಬಂದಿದ್ದು, ಈಗಲೂ ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ನಿಂತಿದೆ. ಪಕ್ಷೇತರ ಕಲ್ಲೋಳಕರ ಮೂಲಕ ಬಿಜೆಪಿ ದಲಿತ ಸಮಾಜವನ್ನು ಒಡೆಯುವ ಷಡ್ಯಂತ್ರ ರೂಪಿಸಿದೆ. ಪಕ್ಷೇತರ ಕಲ್ಲೋಳಕರಗೆ ಹಾಕುವ ಮತ ಬಿಜೆಪಿಗೆ ಹಾಕಿದಂತೆ. ಹಾಗಾಗಿ ದಲಿತ ಮತಗಳು ವಿಭಜನೆಯಾಗದಂತೆ ಪಕ್ಷದ ಕಾರ್ಯಕರ್ತರು ನಿಗಾ ವಹಿಸಬೇಕು ಎಂದು ಕೋರಿದರು.

ಮುಖಂಡರಾದ ಸಿದ್ಧಾರ್ಥ ಶಿಂಗೆ, ಸುರೇಶ ತಳವಾರ, ರಾಜು ಶಿರಗಾಂವೆ, ಶ್ರೀಕಾಂತ ತಳವಾರ, ಸತ್ತಾರ ಮುಲ್ಲಾ, ನಾಮದೇವ ಕಾಂಬಳೆ, ಅನಂತ ಬ್ಯಾಕೂಡ, ಸಂತೋಷ ನವಲೆ, ರಾವಸಾಹೇಬ ಐಹೊಳೆ, ಬಸವರಾಜ ಕೋಳಿ, ದಿಲೀಪ ಹೊಸಮನಿ, ಸುನೀತಾ ಐಹೊಳೆ ಮತ್ತಿತರರು ಉಪಸ್ಥಿತರಿದ್ದರು.