ಸಾರಾಂಶ
ಹಾಸನ: ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಮುಡಾ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಲು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಮಂಗಳವಾರ ಡೀಸಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ಮೂರ್‍ನಾಲ್ಕು ತಿಂಗಳ ಹಿಂದೆ ನಡೆದ ಮುಡಾ ಭ್ರಷ್ಟಾಚಾರ ಹಗರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿರುವುದು ಜಹಜ್ಜಾಹೀರಾಗಿ ಮತ್ತು ಉಚ್ಛ ನ್ಯಾಯಾಲಯ ಸಿಎಂ ಅವರ ಮೇಲೆ ತನಿಖೆಗೆ ಆದೇಶ ನೀಡಲಾಗಿದ್ದರೂ ಈವರೆಗೂ ಸಿಎಂ ರಾಜೀನಾಮೆ ನೀಡದಿರುವುದು ಖಂಡನೀಯ ಎಂದರು.ಮುಡಾ ಹಗರಣ ವಿರುದ್ಧವಾಗಿ ಒಂದು ಬೃಹತ್ ಪಾದಯಾತ್ರೆಯನ್ನು ಕೂಡ ಹಮ್ಮಿಕೊಂಡು ಮೈಸೂರು ಚಲೋ ನಡೆಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡ ನಂತರ ಇಂದು ಮೊದಲ ಹಂತದ ಜಯ ದೊರಕಿದೆ. ನ್ಯಾಯಾಲಯ ಕಲಾಪ ಸೆ. ೧೨ಕ್ಕೆ ಮುಗಿದಿದ್ದರೂ ಆದೇಶವನ್ನು ಕಾಯ್ದಿರಿಸಿ ಸೆ.24ರ ಮಧ್ಯಾಹ್ನ ೧೨ ಗಂಟೆಗೆ ಐತಿಹಾಸಿಕ ತೀರ್ಪು ಕೊಟ್ಟಿರುವುದಾಗಿ ಹೇಳಿದರು. ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಸ್ಪಷ್ಟವಾಗಿ ಕಾಣುತ್ತಿರುವುದರಿಂದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದರು. ತಡೆಯಜ್ಞೆಗಾಗಿ ಮನವಿ ಮಾಡಿ ಸುದೀರ್ಘವಾಗಿ ವಿಚಾರಣೆ ನಡೆಸಿ ಅರ್ಜಿ ವಜಾಗೊಳಿಸುವ ಪ್ರಕ್ರಿಯೆಗೆ ಸರಕಾರವು ಕೈ ಹಾಕಿತ್ತು. ಎಲ್ಲಾ ಮೀರಿ ವಿಚಾರ ಆಲಿಸಿ ಉಚ್ಛ ನ್ಯಾಯಾಲಯವು ಐತಿಹಾಸಿಕ ತೀರ್ಪು ಕೊಟ್ಟಿದ್ದು, ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದಂತಹ ಅರ್ಜಿಯನ್ನು ವಜಾಗೊಳಿಸಿ ಆದೇಶವನ್ನು ಮಾಡಿದೆ. ನೈತಿಕತೆ ಇದ್ದರೆ ಕೂಡಲೇ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲವಾದರೆ ಬಿಜೆಪಿ ಪಕ್ಷದಿಂದ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಮುನ್ನೆಚರಿಕ ಕ್ರಮವಾಗಿ ಡೀಸಿ ಕಚೇರಿ ಆವರಣದಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಿ.ಎಚ್. ನಾರಾಯಣಗೌಡ, ಪ್ರೀತಿವರ್ಧನ್, ಚನ್ನಕೇಶವ, ಪ್ರಸನ್ನಕುಮಾರ್, ರತ್ನ ಪ್ರಕಾಶ್, ವೇದವತಿ, ಶೇಷಮ್ಮ ಸೇರಿ ಇತರರು ಉಪಸ್ಥಿತರಿದ್ದರು.