ರಾಜ್ಯ ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆ ಸಂಪೂರ್ಣವಾಗಿ ವಿಫಲವಾಗಿದ್ದು, ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕ ಗುರುವಾರ ನಗರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರತಿಕೃತಿಯ ಶವಯಾತ್ರೆ ನಡೆಸಿ, ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿತು.

ಕೊಪ್ಪಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆ ಸಂಪೂರ್ಣವಾಗಿ ವಿಫಲವಾಗಿದ್ದು, ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕ ಗುರುವಾರ ನಗರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರತಿಕೃತಿಯ ಶವಯಾತ್ರೆ ನಡೆಸಿ, ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿತು.

ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಿಲ್‌ಗಳು ಬಾಕಿ ಉಳಿದಿವೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಸರ್ಕಾರ ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದೆ ಎಂದು ಮುಖಂಡರು ಆರೋಪಿಸಿದರು.

ಬಿಜೆಪಿ ಮುಖಂಡ ಬಸವರಾಜ ಕ್ಯಾವಟರ್ ಮಾತನಾಡಿ, ರಾಜ್ಯದಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆದಾರರಿಗೆ ಬಿಲ್ ಪಾವತಿ ವಿಳಂಬವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನರಿಗೆ ಭರವಸೆ ನೀಡುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಬೇಕು, ಬಾಕಿ ಪಾವತಿಗಳನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು ಹಾಗೂ ರಾಜ್ಯದ ವಾಸ್ತವಿಕ ಹಣಕಾಸು ಸ್ಥಿತಿಯನ್ನು ಜನರ ಮುಂದಿಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್‌ಕುಮಾರ ಗುಳಗಣ್ಣವರ್ ಮಾತನಾಡಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ರೈತರ ಸಂಕಷ್ಟದ ಬಗ್ಗೆ ಗಮನಹರಿಸುವ ಬದಲು ಸರ್ಕಾರ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಹಣಕಾಸು ವ್ಯವಸ್ಥೆ ಕಲ್ಪಿಸದೆ ಜನರಿಗೆ ಭರವಸೆ ನೀಡುವುದು ಸರಿಯಲ್ಲ. ಸರ್ಕಾರ ತನ್ನ ಆರ್ಥಿಕ ನಿರ್ವಹಣೆಯ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ರಾಜ್ಯ ಹಣಕಾಸು ಇಲಾಖೆಯು ಹೊಸ ಯೋಜನೆಗಳು ಮತ್ತು ಕಾಮಗಾರಿಗಳ ವೆಚ್ಚದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಿರುವುದು ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಚರ್ಚೆಗೆ ಕಾರಣವಾಗಿದೆ. ಬಾಕಿ ಕಾಮಗಾರಿಗಳು ಹಾಗೂ ಸೀಮಿತ ಹಣಕಾಸಿನ ಲಭ್ಯತೆ ಹಿನ್ನೆಲೆಯಲ್ಲಿ ಆದ್ಯತೆಯೊಂದಿಗೆ ವೆಚ್ಚ ನಿರ್ವಹಿಸುವ ಅಗತ್ಯವಿದೆ ಎಂದು ಇಲಾಖೆ ಸೂಚಿಸಿರುವುದನ್ನು ಬಿಜೆಪಿ ಮುಖಂಡರು ಪ್ರಸ್ತಾಪಿಸಿದರು.

ರೈತರ ಸಮಸ್ಯೆ, ಕಾಮಗಾರಿಗಳ ಬಾಕಿ ಪಾವತಿ ಹಾಗೂ ರಾಜ್ಯದ ಹಣಕಾಸು ನಿರ್ವಹಣೆ ಕುರಿತು ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗಣೇಶ ಹೊರತಟ್ನಾಳ, ಸುನೀಲ್ ಹೆಸರೂರು, ಮಹೇಶ ಹಾದಿಮನಿ, ಮಹಾಲಕ್ಷ್ಮಿ ಕಂದಾರಿ, ಗೀತಾ ಮುತ್ತಾಳ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.