ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಸುಗ್ಗಿ ಬೆಳೆಗೆ ಡಿಸೆಂಬರ್ ಅಂತ್ಯದ ವರೆಗೆ ನೀರು ಹರಿಸಬೇಕು, ನದಿ ಭಾಗ ಸೇರಿ ಪಂಪ್‌ಸೆಟ್ ಆಧಾರಿತ ರೈತರಿಗೆ ನಿರಂತರ ೯ ಗಂಟೆ ವಿದ್ಯುತ್ ಪೂರೈಸಬೇಕು ಮತ್ತು ಕೂಡಲೇ ಬರ ಪರಿಹಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಬುಧವಾರ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಕಾರಟಗಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಸುಗ್ಗಿ ಬೆಳೆಗೆ ಡಿಸೆಂಬರ್ ಅಂತ್ಯದ ವರೆಗೆ ನೀರು ಹರಿಸಬೇಕು, ನದಿ ಭಾಗ ಸೇರಿ ಪಂಪ್‌ಸೆಟ್ ಆಧಾರಿತ ರೈತರಿಗೆ ನಿರಂತರ ೯ ಗಂಟೆ ವಿದ್ಯುತ್ ಪೂರೈಸಬೇಕು ಮತ್ತು ಕೂಡಲೇ ಬರ ಪರಿಹಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಬುಧವಾರ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಇಲ್ಲಿನ ಪುರಸಭೆ ಕಚೇರಿಯಿಂದ ಬಿಜೆಪಿ ಕಾರ್ಯಕರ್ತರು, ಮುಖಂಡರು, ವಿವಿಧ ರೈತ ಸಂಘಟನೆಗಳು, ವಿವಿಧ ಮೋರ್ಚಾಗಳ ಮುಖ್ಯಸ್ಥರು ಸೇರಿ ನವಲಿ ವೃತ್ತದ ವರೆಗೆ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸಾಗಿದರು. ಎತ್ತಿನ ಗಾಡಿ ಮತ್ತು ಟ್ರ್ಯಾಕ್ಟರ್ ಮೂಲಕ ರಾಜ್ಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ರೈತರಿಗೆ ವಿದ್ಯುತ್ ಮತ್ತು ನೀರು ನೀಡದಿರುವುದಕ್ಕೆ ಹಿಡಿಶಾಪ ಹಾಕಿದರು. ಮೆರವಣಿಗೆ ಕನಕದಾಸ ವೃತ್ತದ ಬಳಿ ಸಮಾವೇಶಗೊಂಡು ವಿವಿಧ ಮೋರ್ಚಾ, ರೈತ ಮುಖಂಡರು ರೈತ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಎಲ್ಲ ಉಪಕಾಲುವೆಗಳಿಗೆ ಡಿಸೆಂಬರ್ ಅಂತ್ಯದ ವರೆಗೆ ನೀರು ಬಿಡಬೇಕು, ನಿರಂತರ ೯ ತಾಸು ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ಸಚಿವ ಶಿವರಾಜ್ ತಂಗಡಗಿ ಅವರು ನಮ್ಮ ರೈತರಿಗೆ ಸಮರ್ಪಕ ನೀರು, ವಿದ್ಯುತ್ ನೀಡುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರದ ಕನಕಗಿರಿ ಭಾಗದಲ್ಲಿ ರೈತರು, ಜನ, ಜಾನುವಾರುಗಳು ಮೇವು-ನೀರಿಲ್ಲದೇ ಸಂಕಷ್ಟದಲ್ಲಿವೆ. ಇಲ್ಲಿಯವರೆಗೂ ಸಚಿವ ತಂಗಡಗಿ ಅವರು ಸರ್ಕಾರದಿಂದ ರೈತರಿಗೆ ಯಾವುದೇ ರೀತಿಯ ನೆರವು ನೀಡಿಲ್ಲ. ನದಿ ಪಾತ್ರದಲ್ಲಿ, ಬೋರ್‌ವೆಲ್‌ ಮೇಲೆ ಅವಲಂಬಿತ ರೈತರಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಬೆಳೆಗಳು ಹಾನಿಗೀಡಾಗಿವೆ. ಹಾಡುಹಗಲೇ ಕರೆಂಟ್ ಕಣ್ಣುಮುಚ್ಚಾಲೆ ಆಡುತ್ತಿದೆ. ಈ ದುಸ್ಥಿತಿಗೆ ತಂಗಡಗಿ ಅವರೇ ನೇರ ಹೊಣೆ ಎಂದು ತೀವ್ರವಾಗಿ ಟೀಕಿಸಿದರು.

ಕೂಡಲೇ ನಮ್ಮ ರೈತರಿಗೆ ಪ್ರತಿ ಎಕರೆಗೆ ₹೫೦ ಸಾವಿರಗಳಂತೆ ಬರ ಪರಿಹಾರ ನೀಡಬೇಕು, ಇಲ್ಲದಿದ್ದರೆ, ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ, ಎಂಎಲ್‌ಸಿ ಹೇಮಲತಾ ನಾಯಕ್, ಡಾ.ಬಸವರಾಜ ಕ್ಯಾವಟರ್, ಚಂದ್ರು ನಾಡಗೌಡ, ರೈತ ಸಂಘಟನೆಯ ಶರಣೆಗೌಡ ಕೆಸರಟ್ಟಿ ಮಾತನಾಡಿದರು.

ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮೂಲಕ ಜಿಲ್ಲಾಧಿಕಾರಿ ಹಾಗೂ ಜೆಸ್ಕಾಂ ಎಇಇ ವಿ. ಮಂಜುನಾಥ, ನೀರಾವರಿ ಎಇಇ ವೆಂಕಟೇಶ್ವರರಾವ್ ಅವರಿಗೆ ಮನವಿ ಸಲ್ಲಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಕೆ. ಕರಿಯಪ್ಪ, ವೀರೇಶ ಸಾಲೋಣಿ, ಶಿವಶರಣೇಗೌಡ ಯರಡೋಣಿ, ಜಿ. ತಿಮ್ಮನಗೌಡ, ಉಮೇಶ ಭಂಗಿ, ಚಂದ್ರಶೇಖರ ಮುಸಾಲಿ, ಶಿವಶರಣಪ್ಪ ಶಿವಪೂಜಿ, ವಿಕ್ರಮ ಮೇಟಿ, ಶರಣೇಗೌಡ ಕೊಟ್ನೇಕಲ್, ಶರಣಪ್ಪ ಕೊತ್ತವಾಲ್, ಶರಣಪ್ಪ ದೊಡ್ಡಮನಿ, ಶರಣಪ್ಪ ಗದ್ದಿ, ಪ್ರಭುರಾಜ್ ಬೂದಿ, ಮೌನೇಶ್ ದಢೇಸೂಗೂರು, ಚಂದ್ರಶೇಖರ ಬೆನ್ನೂರು, ಸೋಮಶೇಖರ ಬೇರ್‍ಗಿ, ರತ್ನಕುಮಾರಿ, ಶಿವಲೀಲಾ ಅಯೋಧ್ಯ ಭಾಗವಹಿಸಿದ್ದರು.ಬಸವರಾಜ್ ಎತ್ತಿನಮನಿ, ದೇವರಾಜ ನಾಯಕ್, ಮಂಜುನಾಥ್ ಮಸ್ಕಿ ನಿರ್ವಹಿಸಿದರು.ನೀರು ಮಾರಿಕೊಳ್ಳಬೇಡಿ: ತುಂಗಭದ್ರಾ ಜಲಾಶಯದ ನೀರು ಇರುವುದು ಕೃಷಿಗಾಗಿ. ರೈತರಿಗಾಗಿ ಈ ನೀರಿಗೆ ಆದ್ಯತೆ. ಆದರೆ, ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಹಾಗೂ ಸಚಿವ ಶಿವರಾಜ ತಂಗಡಗಿ ಅಂಥವರು ಹಾಡುಹಗಲೇ ಬೃಹತ್ ಕಾರ್ಖಾನೆಗಳಿಗೆ ವಾಮಮಾರ್ಗದಲ್ಲಿ ನೀರು ಹರಿಸುವ ಮೂಲಕ ಕಾರ್ಖಾನೆ ಮಾಲೀಕರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಕಾನೂನುಬಾಹಿರ ಕೃತ್ಯ. ಕೂಡಲೇ ಕಾರ್ಖಾನೆಗಳಿಗೆ ನೀರು ನಿಲ್ಲಿಸಿ, ಡಿಸೆಂಬರ್ ಅಂತ್ಯದ ವರೆಗೆ ಕಾಲುವೆಯಲ್ಲಿ ನೀರು ಹರಿಸಬೇಕು. ನಾನು ಕಾಡಾ ಅಧ್ಯಕ್ಷನಾಗಿದ್ದಾಗ ಕಾರ್ಖಾನೆಗಳಿಗೆ ನೀರು ಪೂರೈಸುವುದನ್ನು ಬಂದ್ ಮಾಡಿ ರೈತರಿಗೆ ನೆರವಾಗಿದ್ದೆ. ಆ ಕೆಲಸವನ್ನು ಸಚಿವ ಶಿವರಾಜ ತಂಗಡಗಿ ಮಾಡಬೇಕು ಎಂದು ರೈತ ಮುಖಂಡ ಹಾಗೂ ತುಂಗಭದ್ರ ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಒತ್ತಾಯಿಸಿದರು.