ಪ್ರಜ್ವಲ್‌ ಎಂಬ ರಾಕ್ಷಸನ ಪರ ಬಿಜೆಪಿ ನಿಂತಿದೆ: ಸುಪ್ರಿಯಾ

| Published : May 01 2024, 01:19 AM IST

ಪ್ರಜ್ವಲ್‌ ಎಂಬ ರಾಕ್ಷಸನ ಪರ ಬಿಜೆಪಿ ನಿಂತಿದೆ: ಸುಪ್ರಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ನೂರಾರು ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಸಂಸದ ಪ್ರಜ್ವಲ್ ಒಬ್ಬ ರಾಕ್ಷಸಿ ಮನಸ್ಥಿತಿ ಹೊಂದಿದವನು. ಬಡ, ಅಮಾಯಕ, ತನ್ನ ತಾಯಿಯ ವಯಸ್ಸಿನವರನ್ನೂ ಬಿಡದೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಹುಬ್ಬಳ್ಳಿ:

ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಜ್ವಲ್‌ ರೇವಣ್ಣ ಕಾಮಕಾಂಡವು ಇಂದು ಜಗಜ್ಜಾಹೀರಾಗಿದೆ. ಇಂತಹ ರಾಕ್ಷಸನ ಪರವಾಗಿ ಬಿಜೆಪಿ ನಿಂತಿರುವುದು ಎಷ್ಟು ಸರಿ ಎಂದು ಎಐಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷೆ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇಟ್‌ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರಾರು ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಸಂಸದ ಪ್ರಜ್ವಲ್‌ ಒಬ್ಬ ರಾಕ್ಷಸಿ ಮನಸ್ಥಿತಿ ಹೊಂದಿದವನು. ಬಡ, ಅಮಾಯಕ, ತನ್ನ ತಾಯಿಯ ವಯಸ್ಸಿನವರನ್ನೂ ಬಿಡದೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇಂಥವರ ಪರ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಈ ಹಿಂದೆಯೇ ಬಿಜೆಪಿ ಮುಖಂಡರೊಬ್ಬರು, ಕಳೆದ ಡಿಸೆಂಬರ್‌ನಲ್ಲೇ ಪ್ರಜ್ವಲ್‌ ನಡತೆಯ ಕುರಿತು ಪ್ರಧಾನಿಗೆ ದಾಖಲೆಗಳೊಂದಿಗೆ ಪತ್ರ ಬರೆದಿದ್ದಾರೆ. ಆದರೆ, ಪ್ರಧಾನಿಗಳು ಇಂತಹ ರಾಕ್ಷಸನಿಗೆ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್‌ ನೀಡಿ ಅವರ ಪರ ಪ್ರಚಾರ ಮಾಡಿರುವುದು ಎಷ್ಟು ಸರಿ ಎಂದರು.

ಇದು ಬರೀ ಲೈಂಗಿಕ ಹಗರಣವಲ್ಲ, ಇದೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ‍ವಾಗಿದೆ. ಪ್ರಜ್ವಲ್‌ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಅವರ ವಯಸ್ಸನ್ನು ನೋಡದೆ ನೂರಾರು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಸಾವಿರಾರು ವಿಡಿಯೋ ಹೊರಬಂದಿದೆ. ಇಂತಹ ರಾಕ್ಷಸನ ಬಗ್ಗೆ ಬಿಜೆಪಿ ಕ್ರಮ ಕೈಗೊಳ್ಳದೇ ಸಮರ್ಥನೆಯಂತಹ ಹೇಳಿಕೆ ನೀಡುತ್ತಿರುವುದು ಖಂಡನಾರ್ಹ ಎಂದರು.

ದೇಶಬಿಟ್ಟು ಏಕೆ ಓಡಿಹೋದ?:

ಕೆಲವು ನಾಯಕರು ಪ್ರಜ್ವಲ್‌ ಅವರ ಬಗ್ಗೆ ಸಮರ್ಥನೆ ನೀಡುತ್ತಿದ್ದಾರೆ. ಈ ವಿಡಿಯೋ ನಕಲಿಯಾಗಿವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ನಕಲಿಯಾಗಿದ್ದರೆ ಪ್ರಜ್ವಲ್‌ ಏಕೆ ಹೆದರಿ ದೇಶಬಿಟ್ಟು ಓಡಿಹೋಗಬೇಕಿತ್ತು. ಸುಳ್ಳಾಗಿದ್ದರೆ ದೇಶದಲ್ಲಿದ್ದುಕೊಂಡೇ ತನಿಖೆ ಎದುರಿಸಬೇಕಿತ್ತು ಎಂದರು.

ಬಿಜೆಪಿಯು ಯಾವಾಗಲೂ ಇಂತಹ ಭ್ರಷ್ಟರ ಪರವಾಗಿಯೇ ಏಕೆ ನಿಲ್ಲುತ್ತದೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಎಲ್ಲಡೆ ಪ್ರಚಾರ ಪಡೆಯುವ ಇವರು ಇಂತಹ ರಾಕ್ಷಸಿ ಮನಸ್ಥಿತಿಯಿರುವ ವ್ಯಕ್ತಿಯ ಪರ ನಿಲ್ಲುತ್ತಿರುವುದು ಸರಿಯಲ್ಲ. ಈ ಘಟನೆ ರಾಷ್ಟ್ರಾದ್ಯಂತ ಚರ್ಚೆಯಾಗುತ್ತಿದ್ದರೂ ಸಹ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಏನು ಮಾಡುತ್ತಿದ್ದಾರೆ. ಇಂಥವರ ಮೇಲೆ ಏಕೆ ಕ್ರಮಕ್ಕೆ ಒತ್ತಾಯಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ಕೂಡಲೇ ಪ್ರಧಾನಿ ಮಂತ್ರಿ ನರೇಂದ್ರ ಮೋದಿ, ಕೇಂದ್ರದ ಗೃಹಸಚಿವ ಅಮಿತ್‌ ಶಾ ದೇಶದ ಜನತೆಯ ಮುಂದೆ ಬಂದು ಬಹಿರಂಗ ಕ್ಷಮೆಯಾಚಿಸಲಿ, ಕಠಿಣ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಈ ವೇಳೆ ಕಾಂಗ್ರೆಸ್‌ ಗ್ರಾಮೀಣ ಅಧ್ಯಕ್ಷ ಅನೀಲಕುಮಾರ ಪಾಟೀಲ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೀಪಾ ಗೌರಿ, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಸೇರಿದಂತೆ ಹಲವರಿದ್ದರು.