ಸಾರಾಂಶ
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಹಿಂದೆಯೂ ಮುಷ್ಕರ ಮಾಡಿದ್ದರು. ಆಗ ಭರವಸೆ ನೀಡಿದ ಸರ್ಕಾರ ಇಂದಿಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ವಿಷಯವಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.ಗುರುವಾರ ಪಟ್ಟಣದ ತಹಸೀಲ್ದಾರ ಕಚೇರಿ ಆವರಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ, ವೈಯಕ್ತಿಕವಾಗಿ ಮತ್ತು ಪಕ್ಷದ ಪರವಾಗಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಸರ್ಕಾರ ನೌಕರರ ಬೇಡಿಕೆಗಳಿಗೆ ಮೊದಲು ಸ್ಪಂದಿಸಬೇಕು. ಅವರ ಸಮಸ್ಯೆಗಳು ಈಡೇರಿದಾಗಲೇ ಕಾರ್ಯಾಂಗ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬಲ್ಲದು. ಗ್ರಾಮದ ಆಡಳಿತ ಮಾಡುವ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳನ್ನೇ ಕೊಡದೆ ಸಾರ್ವಜನಿಕರ ಸೇವೆ ಮಾಡಲು ಸರ್ಕಾರ ಹೇಳುತ್ತಿರುವುದು ಯಾವ ನ್ಯಾಯ? ಆದಷ್ಟು ಬೇಗ ನಾನೂ ಮುಖ್ಯಮಂತ್ರಿಗಳಿಗೆ ಈ ಕುರಿತು ಪತ್ರ ಬರೆದು ಗ್ರಾಮಾಡಳಿತ ಅಧಿಕಾರಿಗಳ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವೆ. ಈ ಸಮಸ್ಯೆ ಈಡೇರದೇ ಇದ್ದರೆ ರಾಜ್ಯಾದ್ಯಂತ ಪಕ್ಷ ನಿಮ್ಮ ಪರವಾಗಿ ಹೋರಾಡಲು ಸಿದ್ಧರಾಗುತ್ತೇವೆ ಎಂದು ಹೇಳಿದರು.
ಗ್ರಾಮಾಡಳಿತ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್. ಗುಡಿಸದಾಗರ, ಪಿ.ಪಿ. ತಳವಾರ, ಪ್ರಶಾಂತ ಹೊನ್ನಳ್ಳಿ, ಎ.ಎ. ಮುಲ್ಲಾ, ಎಂ.ಬಿ. ಮುಜಾವರ್, ಅನುಷಾ ಪಾಟೀಲ, ಸಿದ್ದು ಸರೋರ, ವಿಜಯ ರೋಣದ, ಭಾಗ್ಯಶ್ರೀ ಹನಗುಂಟಿ ಇತರರು ಇದ್ದರು.ಮುಂದುವರದ ಮುಷ್ಕರ: ತಾಲೂಕು ಕಚೇರಿ ಆವರಣದಲ್ಲಿ ಕೇವಲ ಮೂರು ದಿನಗಳವೆರೆಗೆ ಮುಷ್ಕರ ನಡೆಸುವುದಾಗಿ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್. ಗುಡಿಸಾಗರ ಹೇಳಿದ್ದರು. ಆದರೆ ಜಿಲ್ಲಾಮಟ್ಟದ ಅಥವಾ ರಾಜ್ಯಮಟ್ಟದ ಸಂಘದ ಸಂಘಟಕರ ನಿರ್ದೇಶನ ಇಲ್ಲದ ಕಾರಣ,ನಿರ್ದೇಶನ ಬರುವವರೆಗೂ ಇದೇ ಸ್ಥಳದಲ್ಲಿ ಮುಷ್ಕರ ಮುಂದುವರಿಸಿರುವುದಾಗಿ ಗುಡಿಸಾಗರ ಶುಕ್ರವಾರ ಪತ್ರಿಕೆಗೆ ತಿಳಿಸಿದ್ದಾರೆ.