ಸಾರಾಂಶ
ಹಾವೇರಿ: ಸಮರ್ಪಕವಾಗಿ ಯೂರಿಯಾ ರಸಗೊಬ್ಬರ ಪೂರೈಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ಮಳೆಯಿಂದ ಹಾನಿಯಾಗಿರುವ ಬೆಳೆಗಳಿಗೆ ಮಧ್ಯಂತರ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸಲು ಸಾಧ್ಯವಾಗದ ಈ ಸರ್ಕಾರ ರೈತ ವಿರೋಧಿ ಎಂದು ಆರೋಪಿಸಿದರು. ಕೃಷಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವೂ ಆಕ್ರೋಶ ಹೊರಹಾಕಿದರು.ಕೇಂದ್ರ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯಕ್ಕೆ ಯೂರಿಯಾ ಪೂರೈಸಿದರೂ ಕಾಂಗ್ರೆಸ್ ಸರ್ಕಾರ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳುತ್ತಿದೆ ಎಂದು ಜಿಲ್ಲಾ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.ಈ ವೇಳೆ ಮಾತನಾಡಿದ ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ, ರಾಜ್ಯಾದ್ಯಂತ ಯೂರಿಯಾ ಅಭಾವ ಆಗಲಿಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣ. ಯೂರಿಯಾ ಕೊರತೆಯ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದೇ ಇರುವುದರಿಂದ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಯೂರಿಯಾ ಗೊಬ್ಬರದ ಒಂದು ಚೀಲದ ಬೆಲೆ ₹1,666 ಇದ್ದು, ಕೇಂದ್ರ ಸರ್ಕಾರ ಅದಕ್ಕೆ ₹1400 ಸಬ್ಸಿಡಿ ನೀಡಿ ಕೇವಲ ₹266ಕ್ಕೆ ನೀಡುತ್ತಿದೆ. ಈ ಸಬ್ಸಿಡಿ ಹಣವನ್ನು ಕಬಳಿಸಿ, ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳುವ ದುರುದ್ದೇಶದಿಂದ ರಾಜ್ಯ ಸರ್ಕಾರದ ಅಧಿಕಾರಿಗಳು, ಮಾರಾಟಗಾರರು, ಫ್ಯಾಕ್ಟರಿಗಳೊಂದಿಗೆ ಶಾಮೀಲಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಈ ಬಾರಿ ಹೆಚ್ಚಾಗಿ ಮಳೆಯಾಗಿದ್ದು, ರೈತರು ಎರಡೆರಡು ಸಲ ಬಿತ್ತನೆ ಮಾಡಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರೈತರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಬೆಳೆಹಾನಿ ಸಮೀಕ್ಷೆ ಮಾಡಿಸಿಲ್ಲ. ಮಧ್ಯಂತರ ಪರಿಹಾರ ನೀಡುವಲ್ಲಿಯೂ ಮೌನ ವಹಿಸಿದೆ. ರೈತರಿಗೆ ಪಂಗನಾಮ ಹಾಕುವ ಸ್ಥಿತಿಯಲ್ಲಿ ಇದೆ. ಕೇಂದ್ರ 8.73 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ರಾಜ್ಯಕ್ಕೆ ನೀಡಿದ್ದು, ಈ ಸರ್ಕಾರ 6.37 ಲಕ್ಷ ಮೆಟ್ರಿಕ್ ಟನ್ ಪೂರೈಸಿದೆ. ಇನ್ನೂ 2.43 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ನೀಡದೇ ಕಾಳಸಂತೆಯಲ್ಲಿ ಮಾರಾಟ ಮಾಡಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿರುವುದು ಗೊತ್ತಿದ್ದರೂ ಮುನ್ನೆಚ್ಚರಿಕೆ ವಹಿಸದೇ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ರಾಜ್ಯದ ಪ್ರತಿಯೊಬ್ಬ ರೈತರಿಗೂ ಸಮರ್ಪಕ ಯೂರಿಯಾ ಸಿಗಬೇಕು. ಅಲ್ಲಿಯವರೆಗೂ ಬಿಜೆಪಿ ನಿರಂತರ ಹೋರಾಟ ಮಾಡುತ್ತದೆ. ಸೊಸೈಟಿಗಳಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ರೈತರಿಗೆ ಬಿಜೆಪಿ ಕಾರ್ಯಕರ್ತರು ಬೆಂಬಲ ನೀಡಿ, ಗೊಬ್ಬರ ಸಿಗುವಂತೆ ನೋಡಿಕೊಳ್ಳಬೇಕು. ಯೂರಿಯಾ ಡಬಲ್ ಹಣ ವಸೂಲಿ ಮಾಡುವ ಹಾಗೂ ಗೊಬ್ಬರ ಕೊಡಲಿಕ್ಕೆ ತೊಂದರೆ ಮಾಡಿದ್ದರೆ, ಅಂತಹ ಮಾರಾಟಗಾರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕೃಷಿ ಸಚಿವರು ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ರಾಜ್ಯ ಪ್ರವಾಸವನ್ನು ಕೈಗೊಳ್ಳದಿರುವುದು ಈ ನಾಡಿನ ರೈತರ ದುರ್ದೈವ. ಸಚಿವ ಚೆಲುವರಾಯ ಸ್ವಾಮಿ ಅವರು ಮೊದಲು ಯಾವ ಜಿಲ್ಲೆಯಲ್ಲಿ ಯಾವ ಬೆಳೆಗಳನ್ನು ಬೆಳೆಯುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು. ಉಡಾಫೆ ಉತ್ತರ ಕೊಡುವುದನ್ನು ಕೈಬಿಡಬೇಕು. ಕೂಡಲೇ ಯೂರಿಯಾ ಗೊಬ್ಬರವನ್ನು ಪೂರೈಸಬೇಕು. ಇಲ್ಲವಾದರೆ ಹೆದ್ದಾರಿ ತಡೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿದರು. ಸಿದ್ದರಾಜ ಕಲಕೋಟಿ, ಮಂಜುನಾಥ ಓಲೇಕಾರ, ಕಲ್ಯಾಣಕುಮಾರ ಶೆಟ್ಟರ್, ನಂಜುಂಡೇಶ್ ಕಳ್ಳೇರ, ಪಾಲಾಕ್ಷಗೌಡ ಪಾಟೀಲ, ಸಂತೋಷ ಆಲದಕಟ್ಟಿ, ಬಸವರಾಜ ಕಳಸೂರ, ಗಿರೀಶ ತುಪ್ಪದ, ಕಿರಣಕುಮಾರ ಕೋಣನವರ, ರುದ್ರೇಶ ಚಿನ್ನಣ್ಣನವರ, ನಿರಂಜನ ಹೇರೂರ, ವೆಂಕಟೇಶ ನಾರಾಯಣಿ, ವಿಜಯಕುಮಾರ ಚಿನ್ನಿಕಟ್ಟಿ, ಭೋಜರಾಜ ಕರೂದಿ, ಸಂತೋಷಕುಮಾರ ಪಾಟೀಲ, ಬಸವರಾಜ ಕುಲಕರ್ಣಿ, ಸುರೇಶ ಹೊಸಮನಿ, ಶಿವಾನಂದ ಮ್ಯಾಗೇರಿ, ಪರಮೇಶ್ವರಪ್ಪ ಮೇಗಳಮನಿ, ಸುಭಾಸ್ ಸಿರಿಗೇರಿ, ಶಿವಲಿಂಗಪ್ಪ ತಲ್ಲೂರು, ಭಾರತಿ ಜಂಬಗಿ, ಲಲಿತಾ ಗುಂಡೇನಹಳ್ಳಿ, ಮಂಜುನಾಥ ಗಾಣಿಗೇರ, ಮಹೇಶ ಕಮಡಳ್ಳಿ, ಗಂಗಾಧರ ಬಾಣದ, ನಾಗೇಂದ್ರ ಕಡಕೊಳ, ಜಗದೀಶ ಬಸೇಗಣ್ಣಿ, ಜಗದೀಶ ಮಲಗೋಡ ಮೊದಲಾದವರು ಇದ್ದರು.