ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಬಿಜೆಪಿ ಕೆಲವರಿಗೆ ಮಾತ್ರ ಸೀಮಿತವಾಗಿರುವ ಪಕ್ಷವಾಗಿದ್ದ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಕೊಡಗು ಮೈಸೂರು ಕ್ಷೇತ್ರದ ಕಾಂಗ್ರಸ್ ಆಭ್ಯರ್ಥಿ ಎಂ.ಲಕ್ಷ್ಮಣ ಗೌಡ ಆರೋಪಿಸಿದ್ದಾರೆ.ಸುಂಟಿಕೊಪ್ಪ ವಾಹನ ಚಾಲಕರ ವೇದಿಕೆಯ ಮುಂಭಾಗ ಗುರುವಾರ ಸಾರ್ವಜನಿಕರಲ್ಲಿ ಮತಯಾಚಿಸಿ ಮಾತನಾಡಿದ ಅವರು, ಲೋಕಸಭಾ ಸದಸ್ಯರಾಗಿದ್ದ ಪ್ರತಾಪ್ ಸಿಂಹ ಅವರು ಇಲ್ಲಿ ಕಚೇರಿ ತೆರೆದಿರಲಿಲ್ಲ. ನಾನು ಗೆದ್ದರೆ 15 ದಿನ ಮಡಿಕೇರಿ ಮತ್ತು 15 ದಿನ ಮೈಸೂರಿನಲ್ಲಿರುತ್ತೇನೆ ಎಂದು ಭರವಸೆ ನೀಡಿದರು.
ಮತದಾನದ ಹೆಚ್ಚಳ ದೇಶದ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದು ಲಕ್ಷ್ಮಣ್ ಅಭಿಪ್ರಾಯಪಟ್ಟರು.ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಈ ಹಿಂದಿನ ಲೋಕಸಭಾ ಸದಸ್ಯರು 10 ವರ್ಷ ಲೋಕಸಭೆಯಲ್ಲಿ ಕೊಡಗಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿಲ್ಲ. ಹಾಗೆಯೇ 20 ವರ್ಷಕ್ಕೂ ಹೆಚ್ಚುಕಾಲ ವಿಧಾನಸಭೆಯಲ್ಲಿ ಕೊಡಗನ್ನು ಪ್ರತಿನಿಧಿಸಿದವರು ಕೊಡಗಿನ ಜ್ವಲಂತ ಸಮಸ್ಯೆಗಳ ಧ್ವನಿ ಎತ್ತಲಿಲ್ಲ ಎಂದು ವಾಗ್ದೊಳಿ ನಡೆಸಿದರು.ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಕಾಂಗ್ರೆಸ್ ಮುಖಂಡ ಚಂದ್ರಮೌಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಅನೂಪ್, ಗ್ರಾ.ಪಂ.ಮಾಜಿ ಸದಸ್ಯರಾದ ರೋಸ್‌ಮೇರಿ ರಾಡ್ರಿಗಸ್, ರತ್ನಾ, ರಜಾಕ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.ಅಪ್ಪಚ್ಚು ರಂಜನ್ ಲೇವಡಿ:
ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡರೋ ಇಲ್ಲ ಎ. ಮಂಜುವೋ ಎಂದು ಗೊತ್ತಾಗುತ್ತಿಲ್ಲ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅನುಮಾನ ವ್ಯಕ್ತಪಡಿಸಿದರು.ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಅಧಿಕಾರಿಗಳನ್ನು ಅರಕಲಗೂಡಿಗೆ ಕರೆಸಿಕೊಂಡು ಸಭೆ ಮಾಡಲಾಗುತ್ತಿದೆ. ಇದು ಯಾಕೆ ಎಂದು ಪ್ರಶ್ನಿಸಿದರು.ಅಧಿಕಾರಿಗಳು ಜಿಲ್ಲೆಯಲ್ಲಿ ನೆಮ್ಮದಿಯಿಂದ ಕೆಲಸ ಮಾಡಲಾಗುತ್ತಿಲ್ಲ. ಇದರಿಂದ ಅಧಿಕಾರಿಗಳು ವರ್ಗಾವಣೆ ಪಡೆದು ಬೇರೆಡೆಗೆ ಹೋಗುತ್ತಿದ್ದಾರೆ. ವೈದ್ಯರಿಗೆ ಜಿಲ್ಲೆಯಲ್ಲಿ ಕೆಲಸ ಮಾಡಲಾಗುತ್ತಿಲ್ಲ. ಜಿಲ್ಲೆಯಲ್ಲಿ ದ್ವೇಷ ರಾಜಕಾರಣವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.ವಿನಾಕಾರಣ ಬಿಜೆಪಿ ಕಾರ್ಯಕರ್ತರ ಮೇಲೆ 107 ಸೆಕ್ಷನ್ ಹಾಕಲಾಗುತ್ತಿದೆ. ನಮ್ಮನ್ನು ರಾಜಕೀಯವಾಗಿ ಶಕ್ತಿಗುಂದಿಸಲು ಪ್ರಯತ್ನಿಸಲಾಗುತ್ತಿದೆ. ನೀವು ಈ ರೀತಿ ಮಾಡಿದರೆ ನಾವೂ ಅದನ್ನೇ ಮಾಡಬೇಕಾಗುತ್ತದೆ ಎಂದು ರಂಜನ್ ಎಚ್ಚರಿಸಿದರು.