ಯಾರಿಗೆ ಬಿಜೆಪಿ ಟಿಕೆಟ್? ಆಕಾಂಕ್ಷಿಗಳ ಎದೆಬಡಿತ ಹೆಚ್ಚಳ

| Published : Mar 24 2024, 01:34 AM IST

ಯಾರಿಗೆ ಬಿಜೆಪಿ ಟಿಕೆಟ್? ಆಕಾಂಕ್ಷಿಗಳ ಎದೆಬಡಿತ ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲ ಕುತೂಹಲಗಳಿಗೆ ಟಿಕೆಟ್ ಘೋಷಣೆಯ ಬಳಿಕವಷ್ಟೇ ತೆರೆ ಬೀಳಲಿದೆ.

ಕಾರವಾರ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಸಮೀಪಿಸುತ್ತಿದ್ದಂತೆ ಆಕಾಂಕ್ಷಿಗಳ ಎದೆಬಡಿತ ಹೆಚ್ಚಿಸಿದೆ. ಟಿಕೆಟ್‌ಗಾಗಿ ಕೊನೆಗಳಿಗೆಯ ಪ್ರಯತ್ನ ನಡೆಸಿದ ಆಕಾಂಕ್ಷಿಗಳೂ ಈಗ ಟಿಕೆಟ್ ಘೋಷಣೆಯನ್ನು ಎದುರುನೋಡುತ್ತ ತುದಿಗಾಲಿನ ಮೇಲೆ ನಿಂತಿದ್ದಾರೆ. ಉತ್ತರ ಕನ್ನಡದ ಟಿಕೆಟ್ ನೀಡಿಕೆ ಈಗ ಹೈಕಮಾಂಡ್ ಅಂಗಳದಲ್ಲಿದೆ. ಆಕಾಂಕ್ಷಿಗಳು ಸದ್ಯ ಯಾರ ಮೇಲೂ ಪ್ರಭಾವ ಬೀರುವಂತಿಲ್ಲ. ತಮ್ಮ ತಮ್ಮ ನಾಯಕರ ಮೇಲೆ ಒತ್ತಡ ಹಾಕಿ, ಮನವಿ ಮಾಡಿ ಆಗಿದೆ. ಎಲ್ಲ ಆಕಾಂಕ್ಷಿಗಳ ವರದಿಯೂ ಹೈಕಮಾಂಡ್‌ ತಲುಪಿದೆ. ಹಾಗಾಗಿ ಎಲ್ಲ ಆಕಾಂಕ್ಷಿಗಳು ದೆಹಲಿಯತ್ತ ಕಿವಿಯಗಲಿಸಿ ಕುಳಿತಿದ್ದಾರೆ. ಈಗ ಕೇವಲ 3- 4 ಅಭ್ಯರ್ಥಿಗಳ ಹೆಸರು ಮಾತ್ರ ಅಂತಿಮ ಪಟ್ಟಿಯಲ್ಲಿದೆ. ಸಂಸದ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಚಕ್ರವರ್ತಿ ಸೂಲಿಬೆಲೆ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನೆರಡು ದಿನಗಳೊಳಗೆ ಟಿಕೆಟ್ ಘೋಷಣೆ ಆಗುವ ಸಾಧ್ಯತೆ ಇದೆ.

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಮೂಲಕ ತಮಗೆ ಟಿಕೆಟ್ ಸಿಗಲಿದೆ ಎಂದು ಬಿಂಬಿಸುತ್ತಿದ್ದಾರೆ. ಆದರೆ ಟಿಕೆಟ್ ಯಾರಿಗೆ ಸಿಗಲಿದೆ ಎನ್ನುವುದು ಬಿಜೆಪಿ ಮುಖಂಡರಿಗೂ ಗೊತ್ತಾಗುತ್ತಿಲ್ಲ. ಹೈಕಮಾಂಡ್‌ ಘೋಷಣೆ ಬಳಿಕವಷ್ಟೇ ನಮಗೂ ಗೊತ್ತಾಗಲಿದೆ ಎಂದು ಅಭಿಪ್ರಾಯ ಪಡುತ್ತಿದ್ದಾರೆ.

ಈಗಾಗಲೆ ಕಾಂಗ್ರೆಸ್‌ನಿಂದ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಟಿಕೆಟ್ ಘೋಷಣೆಯಾದರೂ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರು ಗಂಭೀರವಾಗಿ ಪ್ರಚಾರ ಕಾರ್ಯದಲ್ಲಿ ಇನ್ನೂ ತೊಡಗಿಕೊಂಡಿಲ್ಲ. ಕಾಂಗ್ರೆಸ್ ಮುಖಂಡರೂ ಬಿಜೆಪಿಯಿಂದ ಯಾರಿಗೆ ಟಿಕೆಟ್ ಘೋಷಣೆಯಾಗಲಿದೆ ಎನ್ನುವ ಬಗ್ಗೆ ಕುತೂಹಲದಿಂದ ಇದ್ದಾರೆ.

ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿಯ ಬಗ್ಗೆ ಭಾರಿ ಕುತೂಹಲದಿಂದ ಇದ್ದಾರೆ. ಸಂಸದ ಅನಂತಕುಮಾರ ಹೆಗಡೆ ಅವರಿಗೇ ಟಿಕೆಟ್ ಸಿಗಲಿದೆಯೇ ಅಥವಾ ಹೊಸ ಮುಖಕ್ಕೆ ಮಣೆ ಹಾಕಲಿದೆಯೇ ಎನ್ನುವುದು ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಎಲ್ಲ ಕುತೂಹಲಗಳಿಗೆ ಟಿಕೆಟ್ ಘೋಷಣೆಯ ಬಳಿಕವಷ್ಟೇ ತೆರೆ ಬೀಳಲಿದೆ.