ಸಾರಾಂಶ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಏ.11ರಂದು ಯಲ್ಲಾಪುರದಲ್ಲಿ ಬೃಹತ್ ಜನಾಕ್ರೋಶ ಯಾತ್ರೆ ನಡೆಯಲಿದೆ.
ಕಾರವಾರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಏ.11ರಂದು ಯಲ್ಲಾಪುರದಲ್ಲಿ ಬೃಹತ್ ಜನಾಕ್ರೋಶ ಯಾತ್ರೆ ನಡೆಯಲಿದೆ. ಪಕ್ಷದ ನಾಯಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಟ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ತರುವಾಯ ಜನಸಾಮಾನ್ಯರ ಬದುಕು ದುರ್ಬರವಾಗಿದೆ. ಪ್ರತಿಯೊಂದು ವಸ್ತುಗಳೂ ದುಬಾರಿಯಾಗಿವೆ. ಭ್ರಷ್ಟ ಕಾಂಗ್ರೆಸ್ ರಾಜ್ಯ ಸರ್ಕಾರದ ಬೆಲೆ ಏರಿಕೆ, ಮುಸ್ಲಿಂ ತುಷ್ಠೀಕರಣ ಹಾಗೂ ದಲಿತರ ಹಣ ಲೂಟಿ ವಿರುದ್ಧ ಜನಾಕ್ರೋಶ ಯಾತ್ರೆ ನಡೆಯಲಿದೆ. ರಾಜ್ಯದ ತಂಡದ ಪ್ರಮುಖರು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಶಾಸಕರು, ವಿಪ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.ಯಲ್ಲಾಪುರದ ಗ್ರಾಮದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ 10.30ಕ್ಕೆ ಪೂಜೆ ಸಲ್ಲಿಸಿ, ಅಲ್ಲಿಂದ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕವಾಗಿ ತೆರಳಿ ವೈ.ಟಿ.ಎಸ್.ಎಸ್ ಕಾಲೇಜು ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ರೂಪಾಲಿ ಎಸ್.ನಾಯ್ಕ ವಿನಂತಿಸಿದ್ದಾರೆ.