ರಾಜ್ಯದ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಹಾಗೂ ಗ್ರಾಮ ಪಂಚಾಯಿತಿ, ಸ್ಥಳೀಯಾಡಳಿತಕ್ಕೆ ಸೌಲಭ್ಯ, ಅನುದಾನಗಳನ್ನು ನೀಡದೇ ಜನರನ್ನು ಅಲೆದಾಟ ನಡೆಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಇದರ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಅ.25ರಿಂದ ನ.15ರವರೆಗೆ ಜಿಲ್ಲೆಯ ಗ್ರಾ.ಪಂ., ನ.ಪಂ. ಸೇರಿದಂತೆ ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ 1 ಕಿ.ಮೀ. ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪುಲ ತಿಳಿಸಿದರು.
ಮಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಹಾಗೂ ಗ್ರಾಮ ಪಂಚಾಯಿತಿ, ಸ್ಥಳೀಯಾಡಳಿತಕ್ಕೆ ಸೌಲಭ್ಯ, ಅನುದಾನಗಳನ್ನು ನೀಡದೇ ಜನರನ್ನು ಅಲೆದಾಟ ನಡೆಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಇದರ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಅ.25ರಿಂದ ನ.15ರವರೆಗೆ ಜಿಲ್ಲೆಯ ಗ್ರಾ.ಪಂ., ನ.ಪಂ. ಸೇರಿದಂತೆ ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ 1 ಕಿ.ಮೀ. ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪುಲ ತಿಳಿಸಿದರು.ಅವರು ಶನಿವಾರ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ರಾ.ಪಂ.ಗಳಿಗೆ ಅನುದಾನ, ಸೌಲಭ್ಯಗಳನ್ನು ನೀಡದೇ ಜನರನ್ನು ಸಮಸ್ಯೆಗೆ ದೂಡಿದೆ. ಕೇಂದ್ರ 16ನೇ ಹಣಕಾಸು ಬಿಡುಗಡೆ ಮಾಡಿದ್ದು, ಇದರಿಂದ ಗ್ರಾ.ಪಂ.ಗಳ ಅಸ್ತಿತ್ವ ಉಳಿಯುವಂತಾಗಿದೆ. ಕುಡಿಯುವ ನೀರಿನ ತೆರಿಗೆ ಹೆಚ್ಚಳ, ಪಿಂಚಣಿ ಸ್ಥಗಿತ, ವಸತಿ ಯೋಜನೆ ಇಲ್ಲ, ವಿಬಿ ಜಿ ರಾಮ್‌ಜಿ ಪರಿಣಾಮಕಾರಿ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ವಿಫಲ, 9-11, ಸರ್ವರ್ ಸಮಸ್ಯೆ, ಸರ್ವೆಗೆ ಜನ ಇಲ್ಲ ಮೊದಲಾದ ಸೌಲಭ್ಯಗಳು ಇಲ್ಲದೇ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಜಿಲ್ಲೆಯ ಗ್ರಾ.ಪಂ., ನ.ಪಂ., ಸ್ಥಳೀಯಾಡಳಿತ ಮಟ್ಟದಲ್ಲಿ 1 ಕಿ.ಮೀ. ಪಾದಯಾತ್ರೆ ಹಾಗೂ ಪ್ರತಿಭಟನೆ ಸಭೆ ನಡೆಸಲಿದ್ದೇವೆ. ಜಿಲ್ಲೆಯ ಒಟ್ಟು 250 ಕಡೆಗಳಲ್ಲಿ ಪಾದಯಾತ್ರೆ, ಪ್ರತಿಭಟನೆ ನಡೆಯಲಿದೆ ಎಂದರು. ಸ್ಟಿಂಗ್ ಆಪರೇಶನ್ ಸಮಗ್ರ ತನಿಖೆಯಾಗಲಿ:
ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಶನ್‌ನಲ್ಲಿ ದಕ್ಷಿಣ ಕನ್ನಡದ ಕಾಂಗ್ರೆಸ್ ಮುಖಂಡರ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇದರ ಸಮಗ್ರ ತನಿಖೆ ನಡೆಸುವಂತೆ ಹಾಗೂ ಇದೇ ಮಾದರಿಯಲ್ಲಿ ಜಿಲ್ಲೆಯ, ರಾಜ್ಯದ ಇತರೆಡೆ ಟಕೆಟ್ ಪಡೆಯಲು ಯತ್ನ ನಡೆದಿದೆಯಾ ಎಂಬ ಬಗ್ಗೆಯೂ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದರು.ಸ್ಟಿಂಗ್ ಆಪರೇಶನ್‌ನಲ್ಲಿ ಪುತ್ತೂರಿನ ಟಿಕೆಟ್ ವಿಚಾರ ಪ್ರಸ್ತಾಪವಾಗುತ್ತಿದೆ. ಅಲ್ಲಿ ಈಗ ಇರುವವರು ಇದ್ದಾರೋ, ಅದೇ ರೀತಿ ಬೇರೆ ಕಡೆಯೂ ಟಿಕೆಟ್ ಪಡೆದಿದ್ದಾರೆಯೋ. ಎಂಬಿತ್ಯಾದಿ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕು ಎಂದು ಅವರು ಆಗ್ರಹಿಸಿದರು.ಎಸ್‌ಐಆರ್ ಜಾಗೃತಿ ಪಾದಯಾತ್ರೆ:ಎಸ್‌ಐಆರ್ ಬಗ್ಗೆ ಗೊಂದಲ ಮೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ. ಮೂವರು ಚುನಾವಣಾ ಆಯುಕ್ತರು ಸ್ಪಷ್ಟನೆ ನೀಡಿದ ಬಳಿಕವೂ ಕಾಂಗ್ರೆಸ್ ಆರೋಪ ಮಾಡುತ್ತ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಕಾಂಗ್ರೆಸ್ ಗೆದ್ದರೆ ಅದು ಸರಿ, ಬಿಜೆಪಿ ಗೆದ್ದರೆ ಅದು ವೋಟ್ ಚೋರಿ ಎಂದು ಕಾಂಗ್ರೆಸ್ ಆರೋಪಿಸುತ್ತಿರುವುದು ಯಾವ ಆಧಾರದಲ್ಲಿ ಎಂಬುದೇ ತಿಳಿಯುತ್ತಿಲ್ಲ. ಇದರ ವಿರುದ್ಧ ಕೇಂದ್ರ ಬಿಜೆಪಿ ಸೂಚನೆಯಂತೆ ನ.5ರೊಳಗೆ ಜಿಲ್ಲೆಯಲ್ಲಿ ಪಾದಯಾತ್ರೆ ಎಸ್‌ಐಆರ್ ಜಾಗೃತಿ ಅಭಿಯಾನವನ್ನು ಬಿಜೆಪಿ ನಡೆಸಲಿದೆ ಎಂದರು.ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಸನ್ನ ಮಾರ್ತಾ, ಕವಿತಾ ಸನಿಲ್, ಶಾಂತಿಪ್ರಸಾದ್ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ದೇವಪ್ಪ ಪೂಜಾರಿ, ಸುಜಿತ್ ಪ್ರತಾಪ್, ದಿನೇಶ್ ಅಮ್ಟೂರ್, ಪುಷ್ಪಾ ಮೇದಪ್ಪ, ವಸಂತಿ ಮಚ್ಚಿನ, ವಿಕಾಸ್ ಪುತ್ತೂರು, ಸುಮಿತ್ರಾ ಕರಿಯ, ಲಕಿತಾ ಶೆಟ್ಟಿ, ಗಣೇಶ್ ಗೌಡ ನಾವೂರು, ಶಶಿಧರ ಕಲ್ಮಂಜ, ಜಗನ್ನಾಥ, ಉಮೇಶ್ ಕೋಟ್ಯಾನ್ ಇದ್ದರು.