ಕಂಪ್ಲಿ: ತಮಿಳುನಾಡು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಬಿಜೆಪಿಗೆ ಸ್ಪಷ್ಟವಾದ ಗೆಲುವು ಸಿಗಲಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ವಿವರವಾಗಿ ಅಭಿಪ್ರಾಯ ಹಂಚಿಕೊಂಡರು.ದಾವಣಗೆರೆ, ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭಾರೀ ಹಣ ವ್ಯಯ ಮಾಡಿದ್ದರೂ ಜನರಲ್ಲಿ ಬಿಜೆಪಿ ಪರ ಹವಾ ಇದೆ. ದಾವಣಗೆರೆಯಲ್ಲಿ ಎರಡರಿಂದ ಮೂರು ಸಾವಿರ ಮತಗಳ ಅಂತರದಲ್ಲಿ, ಬಾಗಲಕೋಟೆಯಲ್ಲಿ ಸುಮಾರು ಐದು ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಾಣಿಜ್ಯ ಅನಿಲದ ದರ ಏರಿಕೆ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ. ಜಾಗತಿಕ ಪರಿಸ್ಥಿತಿಗಳ ಪರಿಣಾಮವಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದರು.ಇರಾನ್, ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯ ಸಮಯದಲ್ಲೇ ದರ ಏರಿಕೆ ಮಾಡಬೇಕಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಅದು ತಡವಾಗಿದೆ ಎಂದರು.
ರಾಜ್ಯ ರಾಜಕೀಯದಲ್ಲಿ ವೇಗವಾದ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ವದಂತಿಗಳು ಕೇಳಿಬರುತ್ತಿವೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವ ಸಾಧ್ಯತೆಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದರು.
ತುಂಗಭದ್ರಾ ಜಲಾಶಯದ ಗೇಟ್‌ಗಳ ದುರಸ್ತಿ ಕಾರ್ಯದಿಂದ ರೈತರು ಒಂದು ಹಂಗಾಮಿನ ಬೆಳೆ ಕಳೆದುಕೊಂಡಿದ್ದಾರೆ. ಹಾನಿಗೊಳಗಾದ ರೈತರಿಗೆ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಜಲಾಶಯದ ಗೇಟ್‌ಗಳಿಗೆ ಸಂಬಂಧಿಸಿದ ಹಳೆಯ ಚೈನ್‌ಗಳು ಇನ್ನು ಬದಲಾಯಿಸದಿರುವುದು ಆತಂಕಕಾರಿ ವಿಷಯ. ಅವು ನೀರಿನ ಒತ್ತಡ ತಾಳದೆ ಮುರಿದು ಬೀಳುವ ಸಾಧ್ಯತೆ ಇದ್ದು, ಇದರಿಂದ ಮತ್ತೊಂದು ಬೆಳೆ ಹಾನಿಯಾಗುವ ಭೀತಿ ಇದೆ. ತಕ್ಷಣವೇ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮೇ 9ರಂದು ಚಿತ್ರದುರ್ಗನಲ್ಲಿ ನಡೆಯಲಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಭಿನಂದನಾ ಸಮಾರಂಭಕ್ಕೆ ಸುಮಾರು 10 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದು, ಇದು 2028ರ ವಿಧಾನಸಭಾ ಚುನಾವಣೆಗೆ ಒಗ್ಗಟ್ಟಿನ ವೇದಿಕೆಯಾಗಿ ಪರಿಣಮಿಸಲಿದೆ ಎಂದರು.ಇದೇ ವೇಳೆ ಜಾತಿ ಸಮೀಕ್ಷೆಯ ನಂತರ ಕ್ಷೇತ್ರ ಪುನರ್ವಿಂಗಡಣೆ ಸಾಧ್ಯತೆ ಎದುರಾಗಬಹುದು ಎಂದರು.
ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಹಾಗೂ ಬಿಜೆಪಿ ಮುಖಂಡರಿದ್ದರು.