ಸಾರಾಂಶ
ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ದೊಡ್ಡ ಅಂತರದಿಂದ ಜಯ ಸಾಧಿಸುತ್ತಾರೆ. ಚನ್ನಪಟ್ಟಣದಲ್ಲಿ ನಿಖಿಲ್ ಕೂಡಾ ಗಣನೀಯ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ
ಗದಗ: ಮಹಾರಾಷ್ಟ್ರ ಮತ್ತು ರಾಜ್ಯದ 3 ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ವಿಶ್ವಾಸ ವ್ಯಕ್ತ ಪಡಿಸಿದರು.
ಅವರು ಶುಕ್ರವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ದೊಡ್ಡ ಅಂತರದಿಂದ ಜಯ ಸಾಧಿಸುತ್ತಾರೆ. ಚನ್ನಪಟ್ಟಣದಲ್ಲಿ ನಿಖಿಲ್ ಕೂಡಾ ಗಣನೀಯ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಸಂಡೂರಿನಲ್ಲಿ ಸಮಬಲದ ಹೋರಾಟ ಇದೆ, ಅಲ್ಲಿಯೂ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.ಸಮೀಕ್ಷೆಗಳು ಏನೇ ಹೇಳಿದರೂ ಗೆಲುವು ನಮ್ಮದೆ ಎಂಬ ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ಏನು ಬೇಕಾದರೂ ಮಾತನಾಡಬಹುದು. ಮೂರಲ್ಲ, ನಾಲ್ಕು ಕ್ಷೇತ್ರ ಗೆಲ್ಲುತ್ತೇವೆ ಎಂತಲೂ ಹೇಳಬಹುದು. ಹುಟ್ಟಿಸಿಕೊಂಡು ಹೇಳುತ್ತಾರೆ, ಹೇಳಲಿ ಬಿಡಿ, ಅವರು ಹೇಳುವುದರಿಂದ ಜನರ ಮನಸ್ಥಿತಿ ಬದಲಾಗುವುದಿಲ್ಲ ಎಂದು ಪಾಟೀಲ್ ಹೇಳಿದರು.
ನಾವಿದ್ದಾಗಲೇ ಕಾಂಗ್ರೆಸ್ ಕಚೇರಿ ಕಟ್ಟಿಕೊಳ್ಳಿ ಎಂದು ಗೃಹ ಸಚಿವರು ಹೇಳಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ಸಿ.ಸಿ. ಪಾಟೀಲ್, ಪರಮೇಶ್ವರ ಅವರಿಗೆ ಗುಪ್ತಚರ ಇಲಾಖೆ ಏನಾದರೂ ಮಾಹಿತಿ ನೀಡಿದೆಯಾ? ಈಗಿನ ಕಾಲಮಾನದಲ್ಲಿ ಏನಾಗುತ್ತೆ ಅಂತಾ ಗೊತ್ತಿಲ್ಲ ಎಂದಿದ್ದಾರೆ, ಇದು ಕೂಡಾ ವಿಚಿತ್ರವಾಗಿದೆ. ಮುಖ್ಯಮಂತ್ರಿ ಹೆಚ್ಚೆಚ್ಚು ದೆಹಲಿಗೆ ಓಡಾಡುತ್ತಿದ್ದಾರೆ. ನನ್ನ ನಂತರ ಯಾರಿಗೆ ಸಿಎಂ ಮಾಡುತ್ತೀರಿ ಅಂತಾ ಕೇಳಲು ಹೋಗಿದ್ದಾರೆ ಅನ್ನಿಸುತ್ತದೆ ಎಂದ ಅವರು, ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಯಡಿಯೂರಪ್ಪ ಅವರಲ್ಲ, ಪಕ್ಷದ ವರಿಷ್ಠರು ಎಂದರು.