ದ.ಕ.ದಲ್ಲಿ ಉಲ್ಭಣಿಸಿದ ಬಿಜೆಪಿ ವರ್ಸಸ್‌ ಕಾಂಗ್ರೆಸ್‌ ರಾಜಕೀಯ ಸಮರ:

| Published : Aug 24 2024, 01:19 AM IST

ದ.ಕ.ದಲ್ಲಿ ಉಲ್ಭಣಿಸಿದ ಬಿಜೆಪಿ ವರ್ಸಸ್‌ ಕಾಂಗ್ರೆಸ್‌ ರಾಜಕೀಯ ಸಮರ:
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮಗಾಂಧಿಯವರನ್ನು ಕೊಂದವನನ್ನು ದೇವರೆಂದು ಪೂಜಿಸುವ ಬಿಜೆಪಿಯವರು ನಮ್ಮನ್ನು ಬಿಡುತ್ತಾರೆಯೇ ಎಂದು ಐವನ್‌ ಡಿಸೋಜಾ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ ಘಟನೆ ವಿರೋಧಿಸಿ ಬಿಜೆಪಿ ಕಚೇರಿಗೆ ಕಾಂಗ್ರೆಸ್‌ ಪಾದಯಾತ್ರೆ ಹಮ್ಮಿಕೊಂಡಿದ್ದರೆ, ಇದಕ್ಕೆ ಪ್ರತಿಯಾಗಿ ಕೈ ಪಾದಯಾತ್ರೆ ತಡೆಗೆ ಬಿಜೆಪಿ ಪಾಳಯ ಪಕ್ಷದ ಕಚೇರಿಯಲ್ಲಿ ಟೊಂಕಕಟ್ಟಿ ನಿಂತಿತ್ತು. ಈ ವಿದ್ಯಮಾನಗಳು ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಕಾಂಗ್ರೆಸ್‌ ವರ್ಸಸ್‌ ಬಿಜೆಪಿ ನಡುವೆ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ.

ಬೆಳಗ್ಗೆ ಜೆಪ್ಪು ವೆಲೆನ್ಸಿಯಾದ ಐವನ್‌ ಡಿಸೋಜಾ ಮನೆಯಿಂದ ಕೆಪಿಸಿಸಿ ವಕ್ತಾರ ಎಂ.ಜಿ.ಹೆಗಡೆ ನೇತೃತ್ವದಲ್ಲಿ ಕಾಂಗ್ರೆಸಿಗರು ಪಾದಯಾತ್ರೆ ನಡೆಸಿದರು. ಈ ಪಾದಯಾತ್ರೆಯನ್ನು ಪಿವಿಎಸ್‌ ಬ‍ಳಿಯ ಬಿಜೆಪಿ ಕಚೇರಿ ವರೆಗೆ ನಡೆಸಿ ಮುತ್ತಿಗೆ ಹಾಕುವುದಾಗಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಚಪ್ಪಲಿ ಹಾರ ಸಿದ್ಧಪಡಿಸಿಕೊಂಡು ಬಿಜೆಪಿಗರು ಸೇರಿದ್ದರು. ಆದರೆ ಪಾದಯಾತ್ರೆಯನ್ನು ಕಂಕನಾಡಿಯಲ್ಲೇ ಕೊನೆಗೊಳಿಸಲಾಯಿತು. ಕರಾವಳಿಯಲ್ಲಿ ಗಾಂಧಿಯೇ ಗೆಲ್ಲೋದು: ಬಳಿಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಂ.ಜಿ.ಹೆಗಡೆ, ಕೈಲಾಗದ ಹೇಳಿಕೆ ನೀಡಿ ಜಿಲ್ಲೆಯ ಶಾಂತಿ ಕದಡುವ ಬಿಜೆಪಿ ಆಟ ಕರಾವಳಿಯಲ್ಲಿ ನಡೆಯದು. ನಾರಾಯಗುರುಗಳ ಸಂದೇಶ ಒಪ್ಪಿದ ಕರಾವಳಿಯಲ್ಲಿ ಗಾಂಧಿಯೇ ಗೆಲ್ಲುವುದು ಹೊರತು ಗೋಡ್ಸೆಯಲ್ಲ ಎಂದರು.

ವೃತ್ತಿಯಲ್ಲಿ ವೈದ್ಯರಾಗಿರುವ ಶಾಸಕ ಡಾ. ಭರತ್‌ ಶೆಟ್ಟಿಯವರು ಐವನ್‌ ಡಿಸೋಜಾರ ತಲೆಗೆ ಕಲ್ಲು ಹೊಡೆಯಬೇಕಿತ್ತು. ರಾಹುಲ್‌ ಗಾಂಧಿಯವರ ಕಪಾಳಕ್ಕೆ ಹೊಡೆಯಬೇಕು ಎಂಬ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ತಾವು ಶಾಸಕನಾಗಲು ಅಯೋಗ್ಯ ಎಂಬುದನ್ನು ಸಾಬೀತಪಡಿಸಿದ್ದಾರೆ. ನಿಮ್ಮ ದ್ವೇಷದ ಸಂಸ್ಕೃತಿಗೆ ವಿರುದ್ಧವಾಗಿ ರಾಹುಲ್‌ ಗಾಂಧಿಯವರ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಗಳನ್ನು ತೆರೆಯುವ ಮಾತಿನಂತೆ ಕರಾವಳಿಯುದ್ದಕ್ಕೂ ಬಿಜೆಪಿಯ ಹಿಂಸಾತ್ಮಕ ಮಾತು, ಕೃತ್ಯಗಳಿಗೆ ಪ್ರೀತಿಯ ಉತ್ತರ ನೀಡಿ ಗೆಲ್ಲುತ್ತೇವೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ, ಐವನ್‌ ಡಿಸೋಜಾರವರು ಬಡವರು, ರಿಕ್ಷಾದವರಿಗೆ ತೊಂದರೆ ಆದಾಗ ಪ್ರತಿಭಟನೆ ಮಾಡುವ ಮೂಲಕ ತನ್ನ ಶಕ್ತಿಯನ್ನು ಬೆಳೆಸಿಕೊಂಡವರು. ಇಂತಹ ಐವನ್‌ರನ್ನು ಹೆಡೆಮುರಿಕಟ್ಟಬೇಕೆಂಬ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.

ಪೊಲೀಸ್‌ ಇಲಾಖೆಗೆ ನೀಡಿರುವ ಭರವಸೆಯಂತೆ ಕಂಕನಾಡಿವರೆಗೆ ಮಾತ್ರ ಪಾದಯಾತ್ರೆ ನಡೆಸುವ ಭರವಸೆಯನ್ನು ನಾವು ಪಾಲಿಸಿದ್ದೇವೆ. ಜನಪ್ರತಿನಿಧಿಯೊಬ್ಬರ ಮನೆ ಮೇಲೆ ಕಲ್ಲು ತೂರಾಟ ನಡೆಸಿದವರನ್ನು 24 ಗಂಟೆಯಲ್ಲಿ ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿ ಅವರಿಗೆ ಜೈಲು ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾಜಿ ಶಾಸಕ ಜೆ.ಆರ್‌. ಲೋಬೋ, ಮುಖಂಡರಾದ ಪಿ.ವಿ. ಮೋಹನ್‌, ದೇವಿಪ್ರಸಾದ್‌ ಶೆಟ್ಟಿ ಮತ್ತಿತರರು ಮಾತನಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಪದ್ಮರಾಜ್‌ ಪೂಜಾರಿ, ಮಮತಾ ಗಟ್ಟಿ, ಸುರೇಶ್‌ ಬಳ್ಳಾಲ್‌, ಶಾಹುಲ್‌ ಹಮೀದ್‌, ಶಾಲೆಚ್‌ ಪಿಂಟೋ, ಅಪ್ಪಿ, ಪ್ರವೀಣ್‌ಚಂದ್ರ ಆಳ್ವ, ವಿಶ್ವಾಸ್‌ ಕುಮಾರ್‌ ದಾಸ್‌, ಅನಿಲ್‌ ಕುಮಾರ್‌, ಸಲೀಂ, ಪ್ರಕಾಶ್‌ ಸಾಲಿಯಾನ್‌, ವಿಕಾಸ್‌ ಶೆಟ್ಟಿ, ಸುಹಾನ್‌ ಆಳ್ವ ಮತ್ತಿತರರಿದ್ದರು.

ಜಿಲ್ಲಾ ಕಾಂಗ್ರೆಸ್‌ ನಾಯಕರು ವೆಲೆನ್ಸಿಯಾದಿಂದ ಕಂಕನಾಡಿ ವೃತ್ತದವರೆಗೆ ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನ ಕೂಗುತ್ತಾ ಪಾದಯಾತ್ರೆ ನಡೆಸಿದರು. ಕಂಕನಾಡಿ ವೃತ್ತದ ಬ್ಯಾರಿಕೇಡ್‌ಗಳೊಂದಿಗೆ ನೂರಾರು ಸಂಖ್ಯೆಯ ಪೊಲೀಸರು ಪ್ರತಿಭಟನಾಕಾರರನ್ನು ತಡೆದಾಗ ಅಲ್ಲೇ ರಸ್ತೆಯ ಫುಟ್‌ಪಾತ್‌ನಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.ಬಾಂಗ್ಲಾ ಮಾದರಿ ಎಂದು ಹೇಳಿಲ್ಲ: ಐವನ್‌ ಡಿಸೋಜಾ

ಐವನ್‌ ಡಿಸೋಜಾ ಮಾತನಾಡಿ, ಬಿಜೆಪಿಯವರಿಗೆ ಬಾಂಗ್ಲಾದೇಶವೆಂದರೆ ಅದು ಮುಸ್ಲಿಂ ರಾಷ್ಟ್ರ. ಹಾಗಾಗಿ ನಾನು ಹೇಳಿದ ವಿಚಾರವನ್ನು ತಿರುಚಿ ರಾಜ್ಯಾದ್ಯಂತ ಹೋರಾಟ ಮಾಡಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಲ್ಲು ಬಿಸಾಡುವುದು ಬಿಜೆಪಿ ಗೂಂಡಾ ಸಂಸ್ಕೃತಿಯನ್ನು ತೋರಿಸುತ್ತದೆ. ಈ ಸಂಸ್ಕೃತಿ ಮೇಲೆ ಬಿಜೆಪಿಗೆ ನಂಬಿಕೆ ಇರಬಹುದು. ಯಾಕೆಂದರೆ ಮಹಾತ್ಮಗಾಂಧಿಯವರನ್ನು ಕೊಂದವನನ್ನು ದೇವರೆಂದು ಪೂಜಿಸುವ ಬಿಜೆಪಿಯವರು ನಮ್ಮನ್ನು ಬಿಡುತ್ತಾರೆಯೇ ಎಂದು ಐವನ್‌ ಡಿಸೋಜಾ ಪ್ರಶ್ನಿಸಿದರು.ಶಾಸಕರ ಮೇಲೆ ರೌಡಿಶೀಟ್‌ ತೆರೆಯಲಿ:

ಗೂಂಡಾ ಸಂಸ್ಕೃತಿಯ ಮಂಗಳೂರು ಬಿಜೆಪಿ ಶಾಸಕರ ಮೇಲೆ ರೌಡಿಶೀಟ್ ತೆರೆಯಬೇಕು. ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ಗೂಂಡಾ ಸಂಸ್ಕೃತಿಯ ಶಾಸಕರು. ಅಂಥವರ ವರ್ತನೆಯೇ ಗೂಂಡಾ ಮತ್ತು ಗೋಡ್ಸೆ ಸಂಸ್ಕತಿ. ವೇದವ್ಯಾಸ ಕಾಮತ್‌ಗೆ ಶಾಲಾ ಮಕ್ಕಳ ಶಾಪ ಇದೆ. ಇಲ್ಲಿಯೂ ಗೂಂಡಾಗಿರಿ ಮಾಡುತ್ತಾನೆ, ಅಲ್ಲಿ ವಿಧಾನಸೌಧದಲ್ಲೂ ಅದೇ ಮಾಡುತ್ತಾನೆ. ಅಂಥವರನ್ನು ಮಟ್ಟ ಹಾಕಲು ನಾನು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಐವನ್‌ ಡಿಸೋಜಾ ಹೇಳಿದರು.

ನನ್ನ ಮನೆಗೆ ಕಲ್ಲು ಎಸೆದಾಗ ನಾನು ಬೆಂಗಳೂರಿನಲ್ಲಿ ಇದ್ದೆ. ನನಗೆ ಆ ಬಳಿಕ ಮಾಹಿತಿ ಬಂದು ಪೊಲೀಸರ ಜೊತೆ ಮಾತನಾಡಿದೆ. ನಾನು ರಾಜ್ಯಪಾಲರು ಹಾಗೂ ಅವರ ಸ್ಥಾನದ ಬಗ್ಗೆ ಗೌರವ ಹೊಂದಿದವನು. ನಾನು ಈ ಪಾದಯಾತ್ರೆಗೆ ಬರಲು ಕಾರಣ ಬಿಜೆಪಿಯವರ ಗೂಂಡಾ ಪ್ರವೃತ್ತಿ. ಅವರು ನನ್ನ ವಿರುದ್ಧ ಕಾನೂನು ಹೋರಾಟ ಮಾಡಲಿ, ನಾನೂ ಮಾಡುತ್ತೇನೆ ಎಂದರು.