ಪ.ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ತೆಲಂಗಾಣದ ಬ್ಯಾಂಕ್‌ಗೆ ಅಕ್ರಮವಾಗಿ ವರ್ಗಾಯಿಸಿ, ಚುನಾವಣೆಗೆ ಮತ್ತು ವೈಯಕ್ತಿಕ ಲಾಭಕ್ಕೆ ಬಳಸಿರುವುದು ಸಾಬೀತಾಗಿದೆ. ಈ ವಿಚಾರದಲ್ಲಿ ಸ್ವತಃ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವವರೆಗೂ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸಲಾಗುವುದಾಗಿ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಎಚ್ಚರಿಸಿದರು.ಬುಧವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇ.ಡಿ ತನಿಖೆ ಪೂರ್ಣಗೊಳ್ಳದೆ, ನ್ಯಾಯಾಲಯದಿಂದ ಕ್ಲೀನ್ ಚಿಟ್ ಸಿಗದಿದ್ದರೂ ನಾಗೇಂದ್ರ ಅವರನ್ನು ಸಂಪುಟಕ್ಕೆ ತಗೆದುಕೊಳ್ಳುವ ಅನಿವಾರ್ಯತೆ ಡಿ.ಕೆ. ಶಿವಕುಮಾರ್ ಅವರಿಗೆ ಏನಿತ್ತು?. ಹಿರಿಯ ಶಾಸಕರ ವಿರೋಧದ ನಡುವೆಯೂ ಈ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಒತ್ತಡವಿದೆಯೇ ಅಥವಾ ಪ.ಪಂಗಡದ ನಿರ್ದಿಷ್ಟ ವೋಟ್ ಬ್ಯಾಂಕ್ ಕೈ ತಪ್ಪಲಿದೆ ಎಂಬ ಹೆದರಿಕೆಯೇ ಎಂದು ಪ್ರಶ್ನಿಸಿದರು.
ನಾಗೇಂದ್ರ ಅವರ ವಿರುದ್ಧ ತನಿಖೆ ನಡೆಯುತ್ತಿದ್ದು, ಆರೋಪ ಸಾಬೀತಾದರೆ ಮತ್ತೆ ರಾಜೀನಾಮೆ ಪಡೆಯಬೇಕಾಗುತ್ತದೆ. ಇಷ್ಟೆಲ್ಲಾ ವಿರೋಧವಿದ್ದರೂ ಸಂಪುಟಕ್ಕೆ ಸೇರಿಸಿಕೊಳ್ಳುವ ಹಠ ಯಾಕೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಿ ಎಂದು ಅವರು ಆಗ್ರಹಿಸಿದರು.ಪ.ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ತೆಲಂಗಾಣದ ಬ್ಯಾಂಕ್‌ಗೆ ಅಕ್ರಮವಾಗಿ ವರ್ಗಾಯಿಸಿ, ಚುನಾವಣೆಗೆ ಮತ್ತು ವೈಯಕ್ತಿಕ ಲಾಭಕ್ಕೆ ಬಳಸಿರುವುದು ಸಾಬೀತಾಗಿದೆ. ಈ ವಿಚಾರದಲ್ಲಿ ಸ್ವತಃ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಇಂತಹ ಗಂಭೀರ ಆರೋಪ ಎದುರಿಸುತ್ತಿರುವವರನ್ನು ಮತ್ತೆ ಮಂತ್ರಿ ಮಾಡುವುದು ಪ.ಪಂಗಡಕ್ಕೆ ಬಗೆಯುವ ದ್ರೋಹ ಎಂದು ಕಿಡಿಕಾರಿದರು.
1996ರ ಜೈನ್ ಹವಾಲಾ ಪ್ರಕರಣದಲ್ಲಿ ಹೆಸರು ಕೇಳಿಬಂದ ಕೂಡಲೇ ಎಲ್.ಕೆ.ಅಡ್ವಾಣಿ ಅವರು ರಾಜೀನಾಮೆ ನೀಡಿ ನೈತಿಕತೆ ಮೆರೆದಿದ್ದರು. ತನಿಖೆಯಲ್ಲಿ ಆರೋಪ ಮುಕ್ತರಾದ ಮೇಲಷ್ಟೇ ಅವರು ಸಚಿವರಾಗಿದ್ದರು. 125 ವರ್ಷಗಳ ಇತಿಹಾಸ ಇದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಅಂತಹ ನೈತಿಕತೆ ಬೇಕಲ್ಲವೇ ಎಂದು ವಾಗ್ದಾಳಿ ನಡೆಸಿದರು.ನಾಗೇಂದ್ರ ಅವರಿಗೆ ಮತ್ತೆ ಮಂತ್ರಿಗಿರಿ ನೀಡುವುದನ್ನು ವಿರೋಧಿಸಿ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಸೋಮವಾರದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸುವುದಾಗಿ ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಬಿ. ಹರ್ಷವರ್ಧನ್, ಮುಖಂಡರಾದ ಡಾ.ಈ.ಸಿ. ನಿಂಗರಾಜೇಗೌಡ, ಎಂ. ಮೋಹನ್, ಮಹೇಶ್ ರಾಜೇ ಅರಸ್, ಸುಬ್ಬಣ್ಣ, ಸೋಮಸುಂದರ್ ಇದ್ದರು.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಬೀದಿಯಲ್ಲಿ ಹೋರಾಟ ಮಾಡಲು ಆಗಲ್ಲ. ಹೀಗಾಗಿ ಸದನದ ಒಳಗೆ ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಸಂಪುಟದಿಂದ ಕೈಬಿಡುವವರೆಗೂ ಸದನ ನಡೆಯಲು ಅವಕಾಶ ನೀಡುವುದಿಲ್ಲ.- ಟಿ.ಎಸ್.ಶ್ರೀವತ್ಸ, ಶಾಸಕರು