ದೇಶಕ್ಕಾಗಿ ಬಿಜೆಪಿ ಸ್ಥಾಪನೆ ಮಾಡಲಾಗಿದೆ: ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ

| Published : Apr 08 2025, 12:31 AM IST

ದೇಶಕ್ಕಾಗಿ ಬಿಜೆಪಿ ಸ್ಥಾಪನೆ ಮಾಡಲಾಗಿದೆ: ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷಕ್ಕಿಂತ ದೇಶ ಮೊದಲು ಎಂಬ ಧ್ಯೇಯದಿಂದ, ಅಧಿಕಾರಕ್ಕೆ ಅಂಟಿಕೊಳ್ಳದೆ ದೇಶಕ್ಕಾಗಿ ಬಿಜೆಪಿಯನ್ನು ಸ್ಥಾಪನೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪಕ್ಷಕ್ಕಿಂತ ದೇಶ ಮೊದಲು ಎಂಬ ಧ್ಯೇಯದಿಂದ, ಅಧಿಕಾರಕ್ಕೆ ಅಂಟಿಕೊಳ್ಳದೆ ದೇಶಕ್ಕಾಗಿ ಬಿಜೆಪಿಯನ್ನು ಸ್ಥಾಪನೆ ಮಾಡಲಾಗಿದೆ ಎಂದು ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ಎಸ್. ಸಂಜೀವ್ ರೆಡ್ಡಿ ಹೇಳಿದರು.

ನಗರದ ಪಟೇಲ್ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬಿಜೆಪಿ ಈ ದೇಶದಲ್ಲಿ ಮೊದಲು ಸಂಸತ್ ಚುನಾವಣೆ ಎದುರಿಸಿದಾಗ ಬರೀ ಇಬ್ಬರು ಸಂಸದರು ಮಾತ್ರ ಗೆದ್ದು ಬಂದಿದ್ದರು. ಆಗ ನಮ್ಮ ಪಕ್ಷವನ್ನು ನೋಡಿ ನಗಾಡಿದ್ದರು. ಆಗ ಸ್ವತಃ ಅಟಲ್ ಬಿಜಾರಿ ವಾಜಪೇಯಿಯವರೇ ಸೋತಿದ್ದರು. ಇದರಿಂದ ಮನನೊಂದ ಕಾರ್ಯಕರ್ತರೊಬ್ಬರು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಈಗ ಬಿಜೆಪಿ ಜಗತ್ತಿನಲ್ಲಿಯೇ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ. ಪಕ್ಷದ ಯಶಸ್ಸಿನ ಹಿಂದೆ ಈ ದೇಶದ ಮಹಾನ್ ನಾಯಕರ ಶ್ರಮವಿದೆ ಎಂದು ಸ್ಮರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಕ್ರಾಂತಿಕಾರಿ ಬೆಳವಣಿಗೆಗಳು ದೇಶದಲ್ಲಿ ಆಗಿವೆ. ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈಗ ಜಗತ್ತು ಭಾರತೀಯರನ್ನು ನೋಡುವ ರೀತಿ ಬದಲಾಗಿದೆ. ಗೌರವಯುತವಾಗಿ ಕಾಣುತ್ತಿದ್ದಾರೆ ಎಂದರು.

ಬಿಜೆಪಿ ಹೋರಾಟದಿಂದ ಬಂದಿದೆ. ಬಿಜೆಪಿಯಲ್ಲಿ ಮೊದಲು ಪಕ್ಷ, ಆನಂತರ ವ್ಯಕ್ತಿಗೆ ಸ್ಥಾನವನ್ನು ಕೊಡಲಾಗಿದೆ. ನಮ್ಮಿಂದ ಪಕ್ಷವಲ್ಲ, ಪಕ್ಷದಿಂದ ನಾವು ಎಂಬುದನ್ನು ಅರಿತುಕೊಂಡು ಕಾರ್ಯಕರ್ತರು ಸಂಘಟನೆ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಕಾರ್ಯಕರ್ತರು ತಮ್ಮ ಕರ್ತವ್ಯ ಅರಿತು ಕೆಲಸ ಮಾಡಬೇಕು. ಬಿಜೆಪಿಗೆ ಹಲವಾರು ಜನರು ಬಂದು ಹೋಗುತ್ತಾರೆ. ಆದರೆ, ಪಕ್ಷ ಇರುತ್ತದೆ. ಪಕ್ಷವನ್ನು ಬಲಿಷ್ಠಗೊಳಿಸಲು ಪ್ರತಿಯೊಬ್ಬರೂ ಸಂಘಟನೆ ಕೆಲಸ ಮಾಡೋಣ ಎಂದರು.

ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಮೇಟಿ, ನಗರ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರು ದೇವಲಾಪುರ, ಹೊನ್ನೂರಪ್ಪ, ನಾಗೇಂದ್ರ, ನಟರಾಜ, ಉಮಾದೇವಿ, ಪೂರ್ಣಿಮಾ, ಲಲಿತಾ, ಭಾರತಿ, ಲತಾ, ಅನುರಾಧ ಮತ್ತಿತರರಿದ್ದರು.