2029 ಹಾಗೂ ಅದರ ನಂತರದ ಎಲ್ಲ ಚುನಾವಣೆಗೆ ಸರಳ ದಾರಿ ಮಾಡಿಕೊಳ್ಳಲು ಬಿಜೆಪಿ ಮಹಿಳಾ ಮೀಸಲಾತಿ ಮುಖವಾಡ ಹಾಕಿಕೊಂಡಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಹುಬ್ಬಳ್ಳಿ:

ಪಂಚರಾಜ್ಯ ಚುನಾವಣೆ ಗೆಲ್ಲಲು ಕೇಂದ್ರ ಸರ್ಕಾರ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಜತೆಗೆ 3 ಮಸೂದೆ ಜಾರಿಗೊಳಿಸಲು ಮುಂದಾಗಿತ್ತು, ಅದು ವಿಫಲವಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಕಾಂಗ್ರೆಸ್‌ ಮಹಿಳಾ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿರುವ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಬಿಜೆಪಿ ಮಹಿಳಾ ಮೀಸಲಾತಿಯ ಮುಖವಾಡ ಧರಿಸಿದೆ ಎಂದು ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆಯಲ್ಲಿ ಯಾವುದೇ ಬಿಲ್‌ ಮಂಡಿಸುವ ಮುನ್ನ ಎಲ್ಲ ಸಂಸದರಿಗೆ ಎರಡ್ಮೂರು ದಿನ ಮೊದಲೇ ಬಿಲ್‌ ಪ್ರತಿಯನ್ನು ಕಳುಹಿಸಬೇಕು. ಅದಾದ ನಂತರ ಲೋಕಸಭೆಯಲ್ಲಿ ಮಂಡಿಸಿ, ಚರ್ಚೆಯ ನಂತರ ಪಾಸ್‌ ಮಾಡಬೇಕೆಂಬ ನಿಯಮವಿದೆ. ಆದರೆ, ಬಿಜೆಪಿ 24 ಗಂಟೆ ಮೊದಲು 3 ಮಸೂದೆ ಒಳಗೊಂಡ ಪ್ರತಿ ನೀಡುವ ಮೂಲಕ ತರಾತುರಿಯಲ್ಲಿ ಪಾಸ್‌ ಮಾಡಲು ಮುಂದಾಯಿತು. ಇದಕ್ಕೆ ನಾವು ವಿರೋಧಿಸಿದೆವು ಎಂದರು.ಕಾಂಗ್ರೆಸ್‌ ಮಹಿಳಾ ಪರವಾದ ಪಕ್ಷ. ಇಂದಿರಾ ಗಾಂಧಿ ಅವರು 1976ರಲ್ಲಿ ಮಹಿಳೆಯರ ಮೀಸಲಾತಿಗೆ ಮುನ್ನುಡಿ ಬರೆದರೆ ರಾಜೀವ್‌ ಗಾಂಧಿ ನೇತೃತ್ವದ ಸರ್ಕಾರ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಮೂಲಕ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 33ರಷ್ಟು ಮೀಸಲಾತಿ ಅನುಷ್ಠಾನಗೊಳಿಸಲು ಶ್ರಮಿಸಿದೆ. ಆದರೆ, ಅಂದಿನ ಎನ್‌ಡಿಎ ಸರ್ಕಾರ ಬಿಲ್‌ ಪಾಸ್‌ ಆಗದಂತೆ ವಿರೋಧ ವ್ಯಕ್ತಪಡಿಸಿವೆ. ಇಂದು ಅದೇ ಬಿಜೆಪಿ ಸರ್ಕಾರ ಕ್ಷೇತ್ರ ಮರುವಿಂಗಡಣೆ ಕಾಯ್ದೆ, ಮಹಿಳಾ ಮೀಸಲಾತಿ ಅನುಷ್ಠಾನ ಕಾಯ್ದೆ ಮತ್ತು ಕೇಂದ್ರಾಡಳಿತ ಪ್ರದೇಶ ತಿದ್ದುಪಡಿ ಸೇರಿದಂತೆ 3 ಕಾಯ್ದೆ ಲೋಕಸಭೆಯಲ್ಲಿ ಮಂಡಿಸಿ, ಷಡ್ಯಂತ್ರಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.2029 ಹಾಗೂ ಅದರ ನಂತರದ ಎಲ್ಲ ಚುನಾವಣೆಗೆ ಸರಳ ದಾರಿ ಮಾಡಿಕೊಳ್ಳಲು ಬಿಜೆಪಿ ಮಹಿಳಾ ಮೀಸಲಾತಿ ಮುಖವಾಡ ಹಾಕಿಕೊಂಡಿದೆ. ಅದರ ಜತೆಗೆ 3 ಕಾಯ್ದೆ ಕ್ಲಬ್‌ ಮಾಡಿ ಅನುಷ್ಠಾನಕ್ಕೆ ಮುಂದಾದ ಕ್ರಮ ವಿರೋಧಿಸಿದ ವಿಪಕ್ಷಗಳ ನಡೆಯನ್ನು ಖಂಡಿಸಿ, ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಬಿಜೆಪಿಯ ಷಡ್ಯಂತ್ರದ ಬಗ್ಗೆ ರಾಜ್ಯದ ಜನರಿಗೆ ತಿಳಿಸುವ ಕೆಲಸ ಕಾಂಗ್ರೆಸ್‌ ಮಾಡಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ದೀಪಾ ಗೌರಿ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಪಾಲಿಕೆ ಸದಸ್ಯೆ ಸುವರ್ಣ ಕಲಕುಂಟ್ಲಾ, ಸ್ವಾತಿ ಮಳಗಿ ಸೇರಿದಂತೆ ಹಲವರಿದ್ದರು.