ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಾವು ಜನರ ಬದುಕಿನ ಮೇಲೆ ಮತ ಕೇಳುತ್ತೇವೆಯೇ ಹೊರೆತು ಬಿಜೆಪಿಯವರಂತೆ ಜನರ ಭಾವನೆಯನ್ನು ಕೆರಳಿಸಿ ಮತ ಕೇಳುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ರಾಜ್ಯದ ಜನ ತಮ್ಮ ಬದುಕು ಕಟ್ಟಿಕೊಳ್ಳಲು ಕಾಂಗ್ರೆಸ್‌ನ್ನು ಆಡಳಿತಕ್ಕೆ ತಂದಿದ್ದಾರೆ. ಆದರೆ, ಸಂಕಷ್ಟದ ಕಾಲದಲ್ಲಿ ಈ ರಾಜ್ಯದ ಜನರ ನೆರವಿಗೆ ಬಾರದ ಬಿಜೆಪಿಗೆ ಮತ ಕೇಳಲು ನೈತಿಕತೆ ಇಲ್ಲ. ನಮ್ಮ ಗ್ಯಾರೆಂಟಿಗಳನ್ನು ಜನ ಅನುಭವಿಸುತ್ತಿದ್ದಾರೆ. ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆಗೆ ಅದ್ಭುತ ಸ್ಪಂದನೆ ಸಿಕ್ಕಿದೆ ಎಂದರು.ಕಾಂಗ್ರೆಸ್ ಸರ್ಕಾರ ಬಡ ಜನರ ಅಭಿವೃದ್ಧಿಗಾಗಿ ಆಡಳಿತ ಮಾಡಿದರೆ, ಬಿಜೆಪಿ ಜನರಿಗಾಗಿ ಯಾವ ಯೋಜನೆಗಳನ್ನು ಮಾಡದೆ ಕೇವಲ ಧರ್ಮವನ್ನು ಮಧ್ಯೆ ತಂದು ಜನರ ಮನಸ್ಸುಗಳನ್ನು ಒಡೆಯುವುದನ್ನು ಬಿಟ್ಟರೆ ಬೇರೆ ಏನೂ ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.ನಾವು ಬಡಕುಟುಂಬಗಳಿಗೆ ಸಹಾಯವಾಗಲಿ ಎಂದು ಮಹಿಳೆಯರಿಗೆ 2000 ಸಾವಿರ ರು. ಕೊಟ್ಟರೆ, ಎಚ್.ಡಿ.ಕುಮಾರಸ್ವಾಮಿ ಅವರು ಇದರಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದಿದ್ದಾರೆ. ಗ್ಯಾರೆಂಟಿಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿ ನಂತರ ತಪ್ಪಾದರೆ ಕ್ಷಮಿಸಿ ಎಂದರೆ ಒಪ್ಪಿಕೊಳ್ಳಲಾಗುತ್ತದೆಯೇ ಎಂದು ಕುಟುಕಿದರು.ಮೊದಲಿಗೆ ಗೃಹಲಕ್ಚ್ಮಿ ಯೋಜನೆಗೆ ಅತ್ತೆ ಸೊಸೆ ಜಗಳ ಆಡುತ್ತಾರೆ ಎಂದರು. ಯಾವುದಾದರೂ ಗಲಾಟೆ ನಡೆಯಿತಾ? ಮಾಜಿ ಸಚಿವ ಅರಗ ಜ್ಞಾನೇಂದ್ರ ಗ್ಯಾರೆಂಟಿಯನ್ನು 420 ಎಂದರು. ನಂತರ ನಮ್ಮ ಸಮಾವೇಶದಲ್ಲಿ ಭಾಗವಹಿಸಿದರು. ಅವರು ಅರಗ ಜ್ಞಾನೇಂದ್ರ ಅಲ್ಲ, ಅರ್ಧ ಜ್ಞಾನೇಂದ್ರ. ಗ್ಯಾರೆಂಟಿಯ ಲಾಭ ಪಡೆಯುತ್ತಿರುವ ರಾಜ್ಯದ ಉದ್ದಗಲದ 1.20 ಕೋಟಿ ಕುಟುಂಬದ ಮಹಿಳೆಯರು ಸ್ವಾಭಿಮಾನದ ಹಿನ್ನಲೆಯಲ್ಲಿ ಹೋರಾಡಬೇಕು. ಯಡಿಯೂರಪ್ಪ, ಅಶೋಕಣ್ಣನಿಗೆ, ಶೋಭಕ್ಕಗೆ ರಾಜ್ಯದ ಜನರು ಉತ್ತರಕೊಡಬೇಕಿದೆ ಎಂದರು.3450 ಕೋಟಿ ಹಣ ಕೇಂದ್ರದಿಂದ ಬಿಡುಗಡೆ ಮಾಡುವುದಾಗಿ ಹೇಳಿ ಕೊನೆಗೆ ನಯಾಪೈ ಕೊಡಲಿಲ್ಲ. ಬಿಜೆಪಿ ಈಗ ಮೋದಿ ಗ್ಯಾರೆಂಟಿ ಎಂದು ಹೇಳುತ್ತಿದೆ. ನಮ್ಮದು ಹಾಗಲ್ಲ. ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಸಾಮೂಹಿಕ ಗ್ಯಾರೆಂಟಿ. ಅಡಕೆ ಸಂಶೋಧನಾ ಕೇಂದ್ರ ಆರಂಭಿಸುವುದಾಗಿ ಹೇಳಿ ಏನು ಆಯಿತು? ಸದಾನಂದ ಗೌಡರು ಡಿಸಿಎಂ ಮತ್ತು ಸಿಎಂ ಅವರನ್ನು ಅಯೋಗ್ಯ ಎಂದು ಪದ ಬಳಕೆ ಮಾಡಿದ್ದಾರೆ. ನಾವು ಅಯೋಗ್ಯರೆ, ಬರಗಾಲದ ಹಣ ಕೊಡಿಸಲು ನಿಮ್ಮ ಕೊಡುಗೆ ಏನು ಎಂಬುದು ಸದಾನಂದ ಗೌಡರು ಉತ್ತರಿಸಲಿ ಎಂದು ಹರಿಹಾಯ್ದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ, ಸಚಿವ ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಬಿ.ಕೆ.ಸಂಗಮೇಶ್ವರ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.ಆಯನೂರು ಮಂಜುನಾಥ್ ಅಧಿಕೃತ ಅಭ್ಯರ್ಥಿ. ನೈರುತ್ಯ ಪದವೀಧರ ಅಭ್ಯರ್ಥಿ ಆಯ್ಕೆಯನ್ನು ಬದಲಾವಣೆ ಮಾಡುವ ಹಕ್ಕು ನನಗೆ ಇಲ್ಲ. ನನಗೆ ಯಾವ ದೂರು ಬಂದಿಲ್ಲ. ಪ್ರಶ್ನೆ ಮಾಡುವ ಹಕ್ಕು ಆಕಾಂಕ್ಷಿಗಳಿಗೆ ಇರುತ್ತದೆ. ಸದ್ಯಕ್ಕೆ ಆಯನೂರು ಮಂಜುನಾಥ್ ನಮ್ಮ ಅಧಿಕೃತ ಅಭ್ಯರ್ಥಿ. -ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ.