ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಚುನಾವಣೆಯಲ್ಲಿ ಗೆಲ್ಲಲು ಶ್ರೀರಾಮನನ್ನು ಬೀದಿಗೆ ತಂದ ಬಿಜೆಪಿಯವರಿಗೆ ರಾಮನ ಶಾಪ ಖಂಡಿತಾ ತಟ್ಟುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀರಾಮ ಎಲ್ಲರಿಗೂ ದೇವರೇ. ನಮಗೂ ಶ್ರೀರಾಮ ದೇವರು. ಆದರೆ, ಈ ಬಿಜೆಪಿಯವರು ಶ್ರೀರಾಮನ ಹೆಸರು ಹೇಳಿಕೊಂಡು ಚುನಾವಣೆ ಮಾಡಲು ಹೊರಟಿದ್ದಾರೆ. ಬಿಜೆಪಿಯವರಿಗೆ ಸಂವಿಧಾನವೇ ಗೊತ್ತಿಲ್ಲ. ಭಾವನಾತ್ಮಕ ಸಂಬಂಧಗಳು, ಸರ್ಜಿಕಲ್ ಸ್ಟ್ರೈಕ್, ಪಾಕಿಸ್ತಾನದ ವಿಷಯ, ರಾಮನ ಜಪ, ಮುಂತಾದ ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಮಾಡುತ್ತಾರೆ ಎಂದು ಕುಟುಕಿದರು.
ದೆಹಲಿಯಲ್ಲಿ ಮುಷ್ಕರನಿರತರಾಗಿದ್ದ ರೈತರ ಮೇಲೆ ಡ್ರೋಣ್ ಮೂಲಕ ವಿಷದ ಗಾಳಿ ಬಿಡುತ್ತಾರೆ ಎಂದರೆ ಇವರ ಮನಸ್ಥಿತಿ ಹೇಗಿರಬೇಡ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಬರಗಾಲ ಬಂದು ಕುಡಿಯುವ ನೀರಿಗೂ ಸಂಕಷ್ಟವಾದರೂ ಕೇಂದ್ರಕ್ಕೆ ಕರುಣೆ ಬರಲಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನ ಕೇಳಲು ಕೋರ್ಟ್‍ಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಠಿಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದರೂ ಇವರಿಗೆ ನಾಚಿಕೆ ಇಲ್ಲ ಎಂದು ಕಿಡಿಕಾರಿದರು.ಕರ್ನಾಟಕದ ಬಿಜೆಪಿ ಸಂಸದರು ರಾಜ್ಯದ ಪರಿಸ್ಥಿತಿ ಬಗ್ಗೆ ಒಂದೇ ಒಂದು ಮಾತನಾಡಲಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಕೂಡ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ 1.56 ಲಕ್ಷ ಕೋಟಿ ರೂ.ಗಳನ್ನು ನೀಡಿಲ್ಲ. ಇದಕ್ಕೆಲ್ಲ ಮತದಾರ ಚುನಾವಣೆಯಲ್ಲಿ ಉತ್ತರ ಕೊಡುತ್ತಾನೆ ಎಂದರು.
ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಕರ್ನಾಟಕಕ್ಕೆ ಬಂದು ಮತ ಕೇಳುವ ಹಕ್ಕೂ ಇಲ್ಲ. ಬಿಜೆಪಿಯವರೇ 15 ಲಕ್ಷಕ್ಕೆ ಕಾದು ಕುಳಿತಿದ್ದಾರೆ. ಆದರೆ, ಆ ಹಣವೂ ಬಂದಿಲ್ಲ. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ನೀಡಿದ್ದು ಇದು ಬಡವರಿಗೆ ಅನುಕೂಲವಾಗಿದೆ ಎಂದು ಕುಟುಕಿದರು.ಇನ್ನು, ಗೀತಾ ಅವರ ಬಗ್ಗೆ ಮಾತನಾಡುವ ಮೊದಲು ಕೆ.ಎಸ್.ಈಶ್ವರಪ್ಪನವರಿಗೆ ಮೊದಲು ಉತ್ತರ ಕೊಡಲಿ. ಈಶ್ವರಪ್ಪ ಅವರನ್ನು ನೋಡಿದರೆ ಕನಿಕರ ಬರುತ್ತದೆ. ಈ ಸ್ಥಿತಿಗೆ ಅವರನ್ನು ತರಬಾರದಿತ್ತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ವೈ.ಎಚ್.ನಾಗರಾಜ್, ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಕಲೀಂ ಪಾಶಾ, ಶರತ್ ಮರಿಯಪ್ಪ, ಶಿವಕುಮಾರ್, ಆರಿಫ್, ಕಲಗೋಡು ರತ್ನಾಕರ್ ಮುಂತಾದವರಿದ್ದರು.ಏ.15ಕ್ಕೆ ಗೀತಾ ನಾಮಪತ್ರ ಸಲ್ಲಿಕೆ ಏ.15 ರಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭ ಡಿಸಿಎಂ ಡಿ.ಕೆ.ಶಿವಕುಮಾರ್, ಬೈಂದೂರಿನ ಮಾಜಿ ಶಾಸಕ ಸುಕುಮಾರ ಶೆಟ್ಟಿ, ಗೋಪಾಲ ಪೂಜಾರಿ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು, ಮುಖಂಡರು ಕಾರ್ಯಕರ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಲಿದ್ದಾರೆ. ಅಂದು ಬೆಳಗ್ಗೆ 10.30 ರಾಮಣ್ಣ ಶ್ರೇಷ್ಠಿ ಪಾರ್ಕ್‍ನಿಂದ ಗಾಂಧಿ ಬಜಾರ್, ನೆಹರೂ ರಸ್ತೆ, ಸೀನಪ್ಪ ಶೆಟ್ಟಿ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ. ಸಾವಿರಾರು ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ದಾಖಲೆ ಫಲಿತಾಂಶ; ಹೆಮ್ಮೆ ವಿಷಯಪಿಯುಸಿ ಫಲಿತಾಂಶದಲ್ಲಿ ಶೇ.6ರಷ್ಟು ಹೆಚ್ಚಳವಾಗಿದ್ದು, ಇದು ಹೆಮ್ಮೆಯ ವಿಷಯವಾಗಿದೆ. ಶಿಕ್ಷಣ ಸಚಿವನಾಗಿ ಸಮರ್ಥವಾಗಿ ಕೆಲಸ ಮಾಡಿದ್ದೇನೆಂಬ ತೃಪ್ತಿ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಈ ಬಾರಿ ಪಿಯು ಫಲಿತಾಂಶದಲ್ಲಿ ದಾಖಲೆಯ ಫಲಿತಾಂಶ ಬಂದಿದೆ. ಶೇ. 88ರಷ್ಟು ಫಲಿತಾಂಶ ಬಂದಿದ್ದು ಖುಷಿ ವಿಚಾರವಾಗಿದೆ. ದೇಶ ಒಳ್ಳೆಯ ದಿಕ್ಕಿನತ್ತ ಸಾಗಲು ಶಿಕ್ಷಣವೂ ಕೂಡ ಕಾರಣ ಎಂಬುದನ್ನು ರಾಜ್ಯ ಸರ್ಕಾರ ಸಾಬೀತು ಮಾಡಿದಂತಾಗಿದೆ. ಕೆಲವರು ನನ್ನ ಬಗ್ಗೆ ಟೀಕೆ ಮಾಡುತ್ತಾರೆ. ಕೆಲವು ನಿರ್ಧಾರ ತೆಗೆದುಕೊಂಡಾಗ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಆದರೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮೂರು ಬಾರಿಯ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಇದನ್ನು ಸಾಕಷ್ಟು ವಿದ್ಯಾರ್ಥಿಗಳು ಮತ್ತು ಪೋಷಕರು ಒಪ್ಪಿದ್ದಾರೆ ಎಂದರು.ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಿದ್ದೇನೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಕೂಡ ಸದ್ಯದಲ್ಲೇ ಪ್ರಕಟವಾಗಲಿದೆ. ಸರ್ಕಾರಿ ಶಾಲೆಗಳ ಗುಣಮಟ್ಟ ಕೂಡ ಹೆಚ್ಚಿದೆ. ನಾವು ನೀಡಿದ ಗ್ಯಾರಂಟಿಗಳು ಕೂಡ ಬಡವರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ ಎಂದರು.