ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರಧಾನಿ ನರೇಂದ್ರ ಮೋದಿ ಹೇಳುವ ಸುಳ್ಳು ಜನರಿಗೆ ತಿಳಿಯುತ್ತಿದೆ. ಈ ಬಾರಿ ಮೋದಿ ಹೇಳುವ ಸುಳ್ಳಿನಿಂದಲೇ ಬಿಜೆಪಿ ಅಭ್ಯರ್ಥಿಗಳು ಸೋಲುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭವಿಷ್ಯ ನುಡಿದರು.ನಗರದ ಗಾಡಿಕೊಪ್ಪದ ಲಗನಾ ಕಲ್ಯಾಣ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಎಲ್ಲ ಸಮಯದಲ್ಲೂ ಜನರನ್ನು ಸುಳ್ಳಿನಿಂದ ಮಂಕುಬೂದಿ ಎರಚಿ ಗೆಲ್ಲಲು ಸಾಧ್ಯವಿಲ್ಲ. ಕಳೆದ ಬಾರಿ ರಾಜ್ಯದಲ್ಲಿ ಗೆದ್ದಿದ್ದ ಅಷ್ಟು ಮಂದಿ ಬಿಜೆಪಿ ಸಂಸದರು ಮೋದಿ ಹೆಸರಿನಲ್ಲಿ ಗೆದ್ದಿದ್ದರು. ರಾಘವೇಂದ್ರ ಮೂರು ಬಾರಿ ಗೆದ್ದರೂ, ಮೋದಿ ಹೆಸರಿನಲ್ಲೇ ಗೆದ್ದಿದ್ದು. ಆದರೆ, ಈ ಬಾರಿ ನರೇಂದ್ರ ಮೋದಿ ಅವರ ಹೆಸರಿನಲ್ಲೇ ಸೋಲುತ್ತಾರೆ ಎಂದರು.
ಗೀತಾ ನನ್ನ ಅಕ್ಕ ಇರಬಹುದು, ಆದರೆ, ಜನರ ಧ್ವನಿಯಾಗಿ ಕೆಲಸ ಮಾಡ್ತಾರೆ. ಬಂಗಾರಪ್ಪ ಅವರು ಹಲವು ಜನಪರ ಕಾರ್ಯಕ್ರಮ ಕೊಟ್ಟಿದ್ದರು. ಆದರೂ 2009ರಲ್ಲಿ ಅವರು ಸೋಲು ಅನುಭವಿಸಬೇಕಾಯಿತು. ಅಲ್ಲಿಯವರೆಗೆ ಬಂಗಾರಪ್ಪ ಸೋಲಿಲ್ಲದ ಸರದಾರ ಆಗಿದ್ದರು. ಆ ಸೋಲು ನಮಗೆ ತುಂಬಾ ನೋವು ತಂದಿತ್ತು ಎಂದರು.ಈ ಬಾರಿ ಗೀತಾ ಈ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಲೋಕಸಭೆಯಲ್ಲಿ ಜನರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ರಾಘವೇಂದ್ರ ಕಳೆದ 15 ವರ್ಷದಲ್ಲಿ ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಕೂಡ ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಮಾತನಾಡಲಿಲ್ಲ ಎಂದು ಹರಿಹಾಯ್ದರು.- - -ಬಾಕ್ಸ್
ನಾವು 1990ರಲ್ಲೇ ಸಿಎಂ ಮಕ್ಕಳುಕಾಂಗ್ರೆಸ್ ಕಾರ್ಯಕರ್ತರ ಸಭೆ ಆರಂಭದಿಂದಲೂ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಯಡಿಯೂರಪ್ಪ ಕುಟುಂಬ ವಿರುದ್ಧ ಸಚಿವ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ ನಡೆಸಿದರು.
ನಿಮ್ಮಪ್ಪ 2009ರಲ್ಲಿ ಮುಖ್ಯಮಂತ್ರಿ. ನಮ್ಮಪ್ಪ 1990ರಲ್ಲೇ ಮುಖ್ಯಮಂತ್ರಿ. ನಾವು 1990ರಲ್ಲೇ ಮುಖ್ಯಮಂತ್ರಿ ಮಕ್ಕಳು. ಆದರೆ, ನಮ್ಮಪ್ಪ ಭ್ರಷ್ಟಾಚಾರದ ಹಣ ಮಾಡಿಲ್ಲ. ನಾವು ಯಾರೂ ಚೋಟಾ ಸಹಿ ಹಾಕಿ, ನಮ್ಮಪ್ಪನನ್ನು ಜೈಲಿಗೆ ಕಳುಹಿಸಲಿಲ್ಲ ಎಂದು ಹರಿಹಾಯ್ದರು.ಗೀತಾ ಅಭ್ಯರ್ಥಿಯಾದ ಬಳಿಕ ಜಿಲ್ಲೆಗೆ ಅವರ ಕೊಡುಗೆ ಏನೂ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಸಂಸದರಾಗುವ ಮೊದಲು ನೀವೇನೂ ಕಡಿದು ಹಾಕಿದ್ದೀರಿ? ನಿಮ್ಮಪ್ಪ ಮಾಡಿದ ಭ್ರಷ್ಟಾಚಾರದ ಹಣದಿಂದ ನೀವು ಸಂಸದರಾಗಿದ್ದು ಎಂದು ಸಚಿವ ಮಧು ಕುಟುಕಿದರು.- - --20ಎಸ್ಎಂಜಿಕೆಪಿ03:
ಶಿವಮೊಗ್ಗದ ಲಗನಾ ಕಲ್ಯಾಣ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿದರು.