ಮೀಸಲಾತಿ ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ: ಸುನೀಲ್‍ಕುಮಾರ್‌

| Published : Sep 12 2024, 01:58 AM IST

ಮೀಸಲಾತಿ ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ: ಸುನೀಲ್‍ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ತಲತಲಾಂತರದಿಂದ ಮೀಸಲಾತಿ ಮೂಲಕ ಪರಿಶಿಷ್ಟ ಜಾತಿ, ಪಂಗಡ ಏಳಿಗೆ ಕಂಡಿದೆ. ಆದರೆ, ಮೀಸಲಾತಿ ರದ್ದತಿ ಕುರಿತ ರಾಹುಲ್ ಗಾಂಧಿಯವರ ಹೇಳಿಕೆಯಿಂದ ಗಾಬರಿ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್‍ಕುಮಾರ್ ಹೇಳಿದರು.

ಕಾಂಗ್ರೆಸ್‌ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ । ರಾಹುಲ್‌ಗಾಂಧಿ ಹೇಳಿಕೆ ಖಂಡನೀಯ । ಜಿಲ್ಲಾ ಬಿಜೆಪಿ ಸದಸ್ಯತ್ವ ಅಭಿಯಾನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಲತಲಾಂತರದಿಂದ ಮೀಸಲಾತಿ ಮೂಲಕ ಪರಿಶಿಷ್ಟ ಜಾತಿ, ಪಂಗಡ ಏಳಿಗೆ ಕಂಡಿದೆ. ಆದರೆ, ಮೀಸಲಾತಿ ರದ್ದತಿ ಕುರಿತ ರಾಹುಲ್ ಗಾಂಧಿಯವರ ಹೇಳಿಕೆಯಿಂದ ಗಾಬರಿ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್‍ಕುಮಾರ್ ಹೇಳಿದರು.

ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ನಡೆದ ಸದಸ್ಯತ್ವ ಅಭಿಯಾನದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ಮೀಸಲಾತಿ ರದ್ದು ಮಾಡಿ ಬಿಡುತ್ತಿತ್ತೇನೋ ಎಂಬಷ್ಟು ಆತಂಕ ನಿರ್ಮಾಣವಾಗಿದೆ. ಈ ಹೇಳಿಕೆಯನ್ನು ಖಂಡಿಸುತ್ತೇವೆ. ಮೀಸಲಾತಿಯನ್ನು ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ ಎಂದರು.

ಶೋಷಿತರಿಗೆ ನೀಡುತ್ತಿರುವ ಮೀಸಲಾತಿ ರದ್ದುಗೊಳಿಸುವ ಹೇಳಿಕೆ ನೀಡುವ ಮೂಲಕ ಆ ವರ್ಗಕ್ಕೆ ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ದಲಿತ, ಶೋಷಿತ ವರ್ಗದ ವಿರೋಧಿ ಎಂಬುದು ಅವರ ಹೇಳಿಕೆಯಿಂದ ಸಾಬೀತಾಗಿದೆ. ಈ ಹೇಳಿಕೆಯನ್ನು ಖಂಡಿಸಿ ನಾಳೆಯಿಂದ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.

ಮೀಸಲಾತಿಗೆ ನಾವು ಇವತ್ತು ಕೂಡ ಬದ್ಧರಿದ್ದೇವೆ. ಅದು ಮುಂದುವರಿಯಲಿದೆ. ರಾಹುಲ್ ಗಾಂಧಿಯವರ ಹೇಳಿಕೆಯನ್ನು ಈ ದೇಶದ ಜನರು ಸಮರ್ಥಿಸಲು ಸಾಧ್ಯವಿಲ್ಲ ಎಂದ ಅವರು, ರಾಹುಲ್‌ಗಾಂಧಿ ಅವರು ದೇಶದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ರಾಹುಲ್ ಗಾಂಧಿಯವರು ಅಮೆರಿಕದಿಂದ ವಾಪಸ್ ಬರುವುದರ ಒಳಗೆ ಕಾಂಗ್ರೆಸ್ ಇದಕ್ಕೆ ಪಶ್ಚಾತ್ತಾಪದ ಹೇಳಿಕೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಮೀಸಲಾತಿಗೆ ಸಂಬಂಧಿಸಿ ಕೇವಲ ಮೊಸಳೆಕಣ್ಣೀರನ್ನು ಇಲ್ಲಿನವರೆಗೆ ಕಾಂಗ್ರೆಸ್ ಸುರಿಸಿದೆ. ಸಂವಿಧಾನದ ಕುರಿತು ಕಾಂಗ್ರೆಸ್ ಕೇವಲ ಭಾಷಣ ಮಾಡಿದೆ. ಕೈನಲ್ಲಿ ಸಂವಿಧಾನದ ಪುಸ್ತಕ ಮಾತ್ರ ಹಿಡಿದುಕೊಂಡಿದ್ದರು. ಆದರೆ, ಮನಸ್ಸಿನಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಯನ್ನೇ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ನಮ್ಮ ದೇಶದ ಚುನಾವಣಾ ವ್ಯವಸ್ಥೆ ಸರಿಯಾಗಿಲ್ಲ. ನಿರುದ್ಯೋಗ ಸಮಸ್ಯೆ ಮತ್ತು ಭ್ರಷ್ಟಾಚಾರ ಹೆಚ್ಚಿದೆ ಎಂದು ನಮ್ಮ ದೇಶದ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಯನ್ನು ರಾಹುಲ್‌ಗಾಂಧಿ ಅವರು ನೀಡಿದ್ದಾರೆ ಎಂದು ಹೇಳಿದ ಸುನೀಲ್‌ ಕುಮಾರ್‌, ಇದು ಖಂಡನೀಯ ಎಂದು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಎಸ್‌ಐಟಿ ಮೂಲಕ ಮುಚ್ಚಿ ಹಾಕುವ ಯತ್ನವನ್ನು ರಾಜ್ಯ ಸರ್ಕಾರ ನಡೆಸಿತ್ತು. ಈಡಿ ತನಿಖೆಯಿಂದ ಸತ್ಯಸಂಗತಿ ಬಯಲಾಗಿದೆ. ನಿಗಮದ ಅಧ್ಯಕ್ಷ ನಾಗೇಂದ್ರ ಅವರು ಎ-1 ಆರೋಪಿಯಾಗಿದ್ದಾರೆ. ಈ ಹಗರಣದ ಸಂಪೂರ್ಣ ಹೊಣೆಗಾರಿಕೆಯನ್ನು ಸಿಎಂ ಸಿದ್ದರಾಮಯ್ಯ ಹೊರಬೇಕೆಂದು ಒತ್ತಾಯಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ಧ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ಆರ್. ದೇವರಾಜಶೆಟ್ಟಿ ಸದಸ್ಯತ್ವ ಅಭಿಯಾನ ಕುರಿತು ಮಾತನಾಡಿದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್. ಸಿ. ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಡಾ. ನರೇಂದ್ರ, ರವೀಂದ್ರ ಬೆಳವಾಡಿ, ಪುಣ್ಯಪಾಲ್ ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮಧುಕುಮಾರ್ ರಾಜ್‌ ಅರಸ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಿಂತಾ ಅನಿಲ್ ಸ್ವಾಗತಿಸಿದರು. 11 ಕೆಸಿಕೆಎಂ 1ಚಿಕ್ಕಮಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ನಡೆದ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಶಾಸಕ ವಿ.ಸುನೀಲ್‌ಕುಮಾರ್‌ ಅವರು ಉದ್ಘಾಟಿಸಿದರು. ದೇವರಾಜ್‌ಶೆಟ್ಟಿ, ಕಲ್ಮರುಡಪ್ಪ, ರವೀಂದ್ರ ಬೆಳವಾಡಿ, ಪುಣ್ಯಪಾಲ್‌ ಇದ್ದರು.