ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಬಿಜೆಪಿಯವರಿಗೆ ಚುನಾವಣೆ ಬಂದಾಗ ರಾಮ ನೆನಪಾಗುತ್ತಾನೆ. ಹಿಂದಿನ ಚುನಾವಣೆಯಲ್ಲಿ ಪುಲ್ವಾಮ ಬಾಂಬ್ ದಾಳಿ ಪ್ರಕರಣ ಬಳಸಿಕೊಂಡರು. ಅಂತಹ ವಿಚಾರಗಳ ಮೇಲೆ ಅವರು ಚುನಾವಣೆ ಮಾಡುತ್ತಾರೆ. ನೀವು ನಿಜವಾಗಿಯೂ ಹಿಂದೂಗಳಾ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಪ್ರಶ್ನಿಸಿದ್ದಾರೆ.ಕೊಡಗಿನ ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಿಗೆ ಕೃಷ್ಣ, ಬೀರಮ್ಮ ಹಿಂದುಳಿದ ವರ್ಗಗಳ ದೇವರು ಯಾರು ಕಾಣಲ್ವಾ? ಅದನ್ಯಾರಾದರೂ ಕೇಳುತ್ತಾರಾ? ಭಾವನಾತ್ಮಕವಾಗಿ ಮತಗಳನ್ನು ಪಡೆಯುವುದು ಮಾತ್ರ ಬಿಜೆಪಿಯವರಿಗೆ ಗೊತ್ತು ಎಂದರು.
ರಾಮನ ಬಾಣ ಅವರಿಗೆ ಹೊಡೆಯುತ್ತದೆ ಹೊರತೂ ನಮಗಲ್ಲ. ರಾಮ, ಬೀರಮ್ಮ ಸೇರಿದಂತೆ ಎಲ್ಲಾ ಧರ್ಮಗಳಿಗೆ ಗೌರವ ಕೊಡುವವನೇ ನಿಜವಾದ ಹಿಂದು. ಯಾರು ಹಿಂದುತ್ವ ಅಂತ ಹೋಗುತ್ತಾನೋ ಅವನು ಡೂಪ್ಲಿಕೇಟ್ ಹಿಂದು. ಅವರೆಲ್ಲಾ ಸ್ವಾರ್ಥಿಗಳು. ಮನುಷ್ಯತ್ವ ಇಟ್ಟುಕೊಂಡು ಹೋಗುವವನು ನಿಜವಾದ ಹಿಂದು ಎಂದು ಅಭಿಪ್ರಾಯಪಟ್ಟರು.ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದವರು. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗಿದ್ದರಲ್ವಾ ಆಗ ರಾಮ ಎಲ್ಲಿ ಹೋಗಿದ್ದ. ರಾಮ ಏಕೆ ಬಿಜೆಪಿಯವರಿಗೆ ರಿವರ್ಸ್ ಹೊಡೆದರು. ನಮಗೆ ಯಾಕೆ ರಾಮ ಆಶೀರ್ವಾದ ಮಾಡಿದರು. ಯಾಕೆ ಅಂದರೆ ಬಿಜೆಪಿಯವರು ಮಾಡಿದ ಕೆಲಸ ಹಾಗೆ ಇದೆ ಎಂದು ಟೀಕಿಸಿದರು.
ನಾನು ಇಲ್ಲಿಂದಲೇ ರಾಮನಿಗೆ ನಮಸ್ಕಾರ ಮಾಡುತ್ತೇನೆ. ಅಲ್ಲಿಗೆ ಹೋಗುವವರು ದುರಾಸೆ ಇಟ್ಟುಕೊಂಡಿದ್ದರೆ ರಾಮ ಶಾಪ ಕೊಡುತ್ತಾನೆ ಎಂದು ಟೀಕಿಸಿದರು.ಮೋದಿಯವರಾದಿಯಾಗಿ ಯಾರಾದರೂ ವೈಯಕ್ತಿಕವಾಗಿಯಾದರೂ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದಾರಾ?
2023 ಚುನಾವಣೆಯಲ್ಲಿ ನಾನು ಪ್ರಣಾಳಿಕೆ ಉಪಾಧ್ಯಕ್ಷನಾಗಿದ್ದೆ.ಈ ಭಾಗದ ಎಷ್ಟೊಂದು ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ. ಬಿಜೆಪಿಯವರು ಟ್ಯಾಕ್ಸ್ ಜಾಸ್ತಿ ಮಾಡಿದರು. ಆರ್ಥಿಕ ಮೂಲ ಕಾಂಗ್ರೆಸ್ ಆಗುತ್ತದೆ.ಜನರ ಮನೆಯ ಬೆಳಕು ಮಾಡುವುದು ಕಾಂಗ್ರೆಸ್ ಎಂದು ವಿಶ್ಲೇಷಿಸಿದರು.
ಶಿಕ್ಷಕರ ನೇಮಕಾತಿಗೆ ಸುಪ್ರೀಂ ಕೋರ್ಟ್ ತಡೆ ಹಿನ್ನೆಲೆ ಅಡ್ವೋಕೇಟ್ ಜನರಲ್ ಅವರ ಮಾರ್ಗದರ್ಶನದಲ್ಲಿ ಮುಂದುವರಿಯಲಾಗುವುದು. ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಆರ್ಡರ್ ನೀಡಿದ್ದೇವೆ. 600 ಶಿಕ್ಷಕರ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಅದನ್ನು ಹೊರತುಪಡಿಸಿ ಉಳಿದವರ ನೇಮಕಾತಿ ಆಗಿದೆ. 43 ಸಾವಿರ ಶಿಕ್ಷಕರ ಕೊರತೆ ಇದೆ. ಅದಕ್ಕೆ ಅತಿಥಿ ಶಿಕ್ಷಕರನ್ನು ತೆಗೆದುಕೊಂಡಿದ್ದೇವೆ ಎಂದರು.ಮುಂದೆ 15-20 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು. ಅದನ್ನು ಈಗಾಗಲೇ ಮುಖ್ಯಮಂತ್ರಿ ಅವರ ಬಳಿಯೂ ಕೋರಿದ್ದೇನೆ. ಅವರು ಅದಕ್ಕಾಗಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದುಕೊಂಡಿದ್ದೇನೆ ಎಂದರು.