ಕನ್ನಡಪ್ರಭ ವಾರ್ತೆ ದಾವಣಗೆರೆ/ಬಾಗಲಕೋಟೆ:
ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದ್ದು, ಎರಡೂ ಕ್ಷೇತ್ರದ ವಾತಾವರಣ ಬಿಜೆಪಿ ಪರವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಪರ ಶೋಭಯಾತ್ರೆಯಲ್ಲಿ ಪಾಲ್ಗೊಂಡು, ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆಯ ರ್‍ಯಾಲಿ, ಪ್ರಚಾರದ ವೇಳೆ ಜನರಿಂದ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಉಭಯ ಕ್ಷೇತ್ರಗಳ ಗೆಲುವಿಗೆ ಇದೇ ಸಾಕ್ಷಿ. ನಾವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ರ್‍ಯಾಲಿಯಲ್ಲಿ ಭಾಗವಹಿಸಿದ್ದಾರೆ. ನಮ್ಮ ಅಭ್ಯರ್ಥಿಗಳು ಎರಡೂ ಕ್ಷೇತ್ರಗಳಲ್ಲೂ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಲಿದ್ದಾರೆ. ಕಳೆದ 12 ವರ್ಷಗಳ ನರೇಂದ್ರ ಮೋದಿ ಆಡಳಿತವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಅದೇ ಅಲೆಯು ಎರಡೂ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಲಿವೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶವಿದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಜನರು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ. ಉಪ ಚುನಾವಣೆಯ ಫಲಿತಾಂಶವು 2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ದಿಕ್ಕು ತೋರಿಸಲಿದೆ ಎಂದು ಅಭಿಪ್ರಾಯಪಟ್ಟರು. ಬಿಎಸ್‌ವೈ ನೇತೃತ್ವದಲ್ಲಿ ಗೆಲುವು; ಜಿ.ಎಂ.ಸಿದ್ದೇಶ್ವರ:ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 25 ಸಾವಿರ ಮತಗಳಿಗೂ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಕೇಂದ್ರ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಮಾತನಾಡಿ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಉಪ ಚುನಾವಣೆಯ ಮೂಲಕ ಬಿಜೆಪಿ ಧ್ವಜ ಹಾರಾಡಲಿದೆ. ದಕ್ಷಿಣ ಬಿಜೆಪಿ ಟಿಕೆಟ್ ಕುರಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗೆಲ್ಲಾ ನಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.ಕಮಲ ಅರಳುವುದು ಶತಸಿದ್ಧ; ಬಿ.ವೈ.ವಿಜಯೇಂದ್ರ ವಿಶ್ವಾಸ:
ಸದ್ಯದ ವಾತಾವರಣ ಗಮನಿಸಿದರೆ ಬಾಗಲಕೋಟೆಯಲ್ಲಿ ಕಮಲ (ಬಿಜೆಪಿ) ಅರಳುವುದು ಶತಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಶಿರಾ, ಕೆ.ಆರ್.ಪೇಟೆ ಉಪ ಚನಾವಣೆಯಲ್ಲಿ ಕಾಂಗ್ರೆಸ್ ತಂತ್ರ, ಕುತಂತ್ರ ಮಾಡಿದ್ದು ನೋಡಿದ್ದೇನೆ. ಸಿಎಂ ಸೇರಿ ಸಚಿವ ಸಂಪುಟದ ಸದಸ್ಯರೆಲ್ಲ ಝಂಡಾ ಊರ್ತಾರೆ, ಸೂಟಕೇಸ್ ಅಲ್ಲ ಗೋಣಿಚೀಲದಲ್ಲಿ ಹಣ ತರ್ತಾರೆ. ಬಡ ವಿರೋಧಿ, ದಲಿತ ವಿರೋಧಿ, ಯುವಕರ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆಡಳಿತ ಪಕ್ಷ ಏನೇ ಹರಸಾಹಸ ಮಾಡಿದರೂ ಬಾಗಲಕೋಟೆ, ದಾವಣಗೆರೆಯಲ್ಲಿ ನಮ್ಮ ಗೆಲುವು ತಡೆಯಲು ಸಾಧ್ಯವಿಲ್ಲ. ಯಾವುದೇ ಕ್ಷಣದಲ್ಲೂ ಸಹ ನಮ್ಮ ಕಾರ್ಯಕರ್ತರು ಮೈಮರೆಯಬಾರದು. ಮತ ಹಾಕುವ ಕೊನೆಯ ದಿನದವರೆಗೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.ನಾನು ನಿನ್ನೆ ಬೆಂಗಳೂರಿನಿಂದ ಯಡಿಯೂರಪ್ಪ ಅವರ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ. ಯಡಿಯೂರಪ್ಪನವರು ಇಟ್ಟ ಗುರಿ, ದಿಟ್ಟ ಹೆಜ್ಜೆ ತಪ್ಪಿಲ್ಲ. ಕ್ಷೇತ್ರದಲ್ಲಿ ಇದ್ದ ಸಣ್ಣಪುಟ್ಟ ಗೊಂದಲ ಬಗೆಹರಿಸುತ್ತೇವೆ. ಎಲ್ಲ ನಾಯಕರು ಒಗ್ಗಟ್ಟಾಗಿ ಚರಂತಿಮಠರ ಗೆಲುವಿಗೆ ಹೋರಾಟ ಮಾಡುತ್ತೇವೆ ಎಂದು ವಿಜಯೇಂದ್ರ ಹೇಳಿದರು.