- ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತರು ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪಗೆ ಬೆಂಬಲ- - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ದಕ್ಷಿಣ ಕ್ಷೇತ್ರದ ಹಿಂದುಳಿದ ವರ್ಗಗಳಷ್ಟೇ ಅಲ್ಲ, ಅಲ್ಪಸಂಖ್ಯಾತರು, ದಲಿತರೂ ಅಭಿವೃದ್ಧಿ ವಂಚಿತರಾಗಿದ್ದು, ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರನ್ನು ದೊಡ್ಡಮಟ್ಟದಲ್ಲಿ ಬೆಂಬಲಿಸುವ ಮೂಲಕ ಗೆಲ್ಲಿಸಲಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರ 25 ವರ್ಷದಿಂದಲೂ ಅಭಿವೃದ್ಧಿ ವಂಚಿತವಾಗಿದೆ. ಕ್ಷೇತ್ರದಲ್ಲಿ ಸುಮಾರು 90 ಸಾವಿರಕ್ಕೂ ಅಧಿಕ ಹಿಂದುಳಿದ ವರ್ಗಗಳ ಮತದಾರರಿದ್ದಾರೆ. ಹಿಂದುಳಿದ ವರ್ಗಗಳ ಜೊತೆಗೆ ಅಲ್ಪಸಂಖ್ಯಾತರು, ದಲಿತರು ಸಹ ಈ ಬಾರಿ ಬಿಜೆಪಿಗೆ ಮತ ನೀಡಲಿದ್ದಾರೆ ಎಂದರು.ದಕ್ಷಿಣ ಕ್ಷೇತ್ರದಲ್ಲಿ ತಾವು ಪ್ರವಾಸ ಮಾಡಿದ್ದು, ಹೋದ ಕಡೆಗೆಲ್ಲಾ ಬಿಜೆಪಿ ಪರ ದೊಡ್ಡ ಒಲವು ವ್ಯಕ್ತವಾಗುತ್ತಿದೆ. ಅಹಿಂದ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳನ್ನೇ ಕಡೆಗಣಿಸಿದ್ದಾರೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಮೀಸಲಿಟ್ಟ ಹಣವನ್ನೇ ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಬಳಸಿದೆ. ಇದು ಹಿಂದುಳಿದ ಸಮಾಜಗಳಿಗೂ ಅರಿವಾಗಿದೆ. ಅಭಿವೃದ್ಧಿ ವಂಚಿತ ಸಮುದಾಯಗಳು ದಕ್ಷಿಣ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಇಡೀ ದಕ್ಷಿಣ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಈ ಕ್ಷೇತ್ರ ಅಭಿವೃದ್ಧಿ ಶೂನ್ಯವಾಗಿದೆ. ಚುನಾವಣೆ ವೇಳೆ ಕೇವಲ ಮತ ಪಡೆದು, ಅಧಿಕಾರ ಅನುಭವಿಸಲಿಕ್ಕಷ್ಟೇ ಇಲ್ಲಿನ ಜನರನ್ನು ಕಾಂಗ್ರೆಸ್ ಪಕ್ಷ ಸೀಮಿತಗೊಳಿಸಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು, ಹಿಂದುಳಿದ ಸಮುದಾಯಗಳನ್ನು ಕೇವಲ ಮತ ಬ್ಯಾಂಕ್ ಲೆಕ್ಕಕ್ಕೆ ಮಾತ್ರ ಬಳಸಿಕೊಳ್ಳುತ್ತಿದೆ. ಹಾಗಾಗಿಯೇ, ಕ್ಷೇತ್ರ ಅಲ್ಪಸಂಖ್ಯಾತರು ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಿ, ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಲ್ಪಸಂಖ್ಯಾತರು ಉಪ ಚುನಾವಣೆಯಲ್ಲಿ ಸಂಪೂರ್ಣ ಕೈಬಿಡಲಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ದುರಾಡಳಿತದಿಂದ ನಲುಗಿ ಹೋಗಿರುವ ದಕ್ಷಿಣ ಕ್ಷೇತ್ರವನ್ನು ಅಲ್ಲಿನ ಎಲ್ಲ ವರ್ಗಗಳ ಮತದಾರರು ಇನ್ನು ಮುಂದೆ ಕಾಂಗ್ರೆಸ್ ಮುಕ್ತ ಕ್ಷೇತ್ರವನ್ನಾಗಿಸಲು ತೀರ್ಮಾನಿಸಿದ್ದಾರೆ. ರಾಜ್ಯದ ಜನರಿಗೆ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಗಳು ಹೊಸ ದಿಕ್ಸೂಚಿಯಾಗಲಿವೆ. ನಮ್ಮ ಪಕ್ಷದ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಭಾರಿ ಬಹುಮತದೊಂದಿಗೆ ಗೆಲುವು ದಾಖಲಿಸುವುದು ನಿಶ್ಚಿತ. ಈಗಾಗಲೇ ಕ್ಷೇತ್ರಾದ್ಯಂತ ಕಾಂಗ್ರೆಸ್ ವಿರೋಧಿ ಅಲೆಯು ನಿರ್ಮಾಣವಾಗಿದೆ. ಕಾಂಗ್ರೆಸ್ಸನ್ನು ತೊಲಗಿಸಿ, ಬಿಜೆಪಿ ಗೆಲ್ಲಿಸಲು ಜನರು ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಗ್ಗಳ್ಳಿ ವೀರೇಶ ಬಾತಿ, ತಿಪ್ಪೇಸ್ವಾಮಿ, ಜಿ.ಲಕ್ಷ್ಮೀ, ಅಶ್ವಿನಿ, ಎಚ್.ಸಿ. ಜಯಮ್ಮ, ಲಿಂಗರಾಜ, ಮಹೇಂದ್ರ ಹೆಬ್ಬಾಳ್, ಗೊಲ್ಲರಹಟ್ಟಿ ತಿಪ್ಪೇಸ್ವಾಮಿ ಇತರರು ಇದ್ದರು.- - -
(ಕೋಟ್) ದಾವಣಗೆರೆಯಲ್ಲಿ ಪ್ರಜಾಪ್ರಭುತ್ವವನ್ನು ಪಾಳೇಗಾರಿಕೆ ಸಂಸ್ಕೃತಿಯಿಂದ ಹೊರತರಲು ಉಪ ಚುನಾವಣೆ ನೆರವಾಗಲಿದೆ. ಸಂಪತ್ತಿಗೆ ಸವಾಲು ಹಾಕುವುದಾಗಿ ಕ್ಷೇತ್ರದ ಮತದಾರರೆ ಈಗ ಬಹಿರಂಗವಾಗಿ ಹೇಳುತ್ತಿದ್ದಾರೆ. ಹಾಗಾಗಿ, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ದಲಿತರು ಸಹ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುತ್ತಾರೆ. ಕಾಂಗ್ರೆಸ್ ಅಭ್ಯರ್ಥಿಯ ಕುಟುಂಬವು ಹೈಕಮಾಂಡ್ ನಾಯಕರನ್ನೇ ಹೆದರಿಸಿ, ಟಿಕೆಟ್ ಪಡೆದಿದೆ.- ರಘು ಕೌಟಿಲ್ಯ, ರಾಜ್ಯಾಧ್ಯಕ್ಷ.
- - --24ಕೆಡಿವಿಜಿ3: ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.