ಹರಿಯಾಣದಲ್ಲಿ ಬಿಜೆಪಿ ಜಯಭೇರಿ: ಸಂಭ್ರಮಾಚರಣೆ

| Published : Oct 09 2024, 01:35 AM IST

ಸಾರಾಂಶ

ಹರಿಯಾಣ ರಾಜ್ಯದಲ್ಲಿ ಬಿಜೆಪಿ ಗೆಲುವು ಹರ್ಷ ತಂದಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಕೈ ಬಿಟ್ಟಿದೆ. ಭಾರೀ ಕುತೂಹಲ ಕೆರಳಿಸಿದ್ದ ಹರಿಯಾಣದಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ ಎಂದು ವಿಪಕ್ಷಗಳು ಬೊಬ್ಬೆ ಹಾಕಿದ್ದವು. ಆದರೆ, ಬಿಜೆಪಿ ಸತತವಾಗಿ ಮೂರನೇ ಬಾರಿಗೆ ಅಧಿಕಾರದತ್ತ ದಾಪುಗಾಲು ಇಟ್ಟಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹರಿಯಾಣ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿರುವುದಕ್ಕೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ಸರ್ಕಲ್‌ನಲ್ಲಿ ನೆರೆದಿದ್ದ ಕೇಸರಿ ಪಡೆಯ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಪ್ರಧಾನಿ ಮೋದಿ ಅವರ ಪರವಾಗಿ ಜಯಘೋಷ ಮೊಳಗಿಸಿದರು.

ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮಾತನಾಡಿ, ಹರಿಯಾಣ ರಾಜ್ಯದಲ್ಲಿ ಬಿಜೆಪಿ ಗೆಲುವು ಹರ್ಷ ತಂದಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಕೈ ಬಿಟ್ಟಿದೆ. ಭಾರೀ ಕುತೂಹಲ ಕೆರಳಿಸಿದ್ದ ಹರಿಯಾಣದಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ ಎಂದು ವಿಪಕ್ಷಗಳು ಬೊಬ್ಬೆ ಹಾಕಿದ್ದವು. ಆದರೆ, ಬಿಜೆಪಿ ಸತತವಾಗಿ ಮೂರನೇ ಬಾರಿಗೆ ಅಧಿಕಾರದತ್ತ ದಾಪುಗಾಲು ಇಟ್ಟಿದೆ. ಜನಾಶೀರ್ವಾದಿಂದ ಅಧಿಕಾರ ದೊರಕಿರುವುದು ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.

ಹರಿಯಾಣ ರಾಜ್ಯದಲ್ಲಿ ಒಟ್ಟು ೯೦ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ೪೭ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಬಹುಮತ ಪಡೆದಿದ್ದರೆ, ಕಾಂಗ್ರೆಸ್ ೩೭ ಸ್ಥಾನಗಳಲ್ಲಿ ಪಕ್ಷೇತರರು ೬ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ, ಒಟ್ಟಾರೆ ಕಾಂಗ್ರಸ್ ಹೀನಾಯವಾಗಿ ಸೋಲನ್ನಪ್ಪಿದೆ. ಆದರೆ, ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಬಿಜೆಪಿ ಗೆಲ್ಲಬೇಕಿತ್ತು, ರಾಜ್ಯದ ಅಭಿವೃದ್ಧಿಗಾಗಿ ೩೭೦ನೇ ಕಾಲಂ ತೆಗೆದು ಸಾಕಷ್ಟು ಯೋಜನೆ ಜಾರಿಮಾಡಿದ್ದರು. ಅಲ್ಲಿನ ಭಾರತೀಯರ ಮಾನ-ಪ್ರಾಣ, ಉದ್ಯೋಗ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಲಾಗಿತ್ತು. ಆದರೆ, ಒಟ್ಟು ೯೦ ವಿಧಾನಸಭಾ ಕ್ಷೇತ್ರಗಳಲ್ಲಿ ೨೮ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ ಎಂದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೂಡಾ ಹಗರದಿಂದ ಪಾರಾಗಲು ಜನಗಣತಿ ಬಗ್ಗೆ ಮಾತನಾಡುತ್ತಿದ್ದಾರೆ, ತಮ್ಮ ತಪ್ಪುಗಳನ್ನು ಮುಚ್ಚಿಸಲು ಜನರ ಮನಸ್ಸನ್ನು ಬೇರೆ ಕಡೆಗೆ ತಿರುಗಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಿ, ಮುಡಾ ಹಗರಣದ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ವಕೀಲ ಕ್ರಾಂತಿಮಂಜು, ನಗರಸಭಾ ಮಾಜಿ ಸದಸ್ಯರಾದ ಪ್ರಸನ್ನ, ಚಂದ್ರ, ಮಾಧ್ಯಮ ವಕ್ತಾರ ಸಿ.ಟಿ. ಮಂಜುನಾಥ್, ಸಿದ್ದರಾಜು, ಹೊಸಹಳ್ಳಿ ಶಿವು, ಶಿವಲಿಂಗು, ನಂದೀಶ್, ಆನಂದ್ ಮತ್ತಿತರರಿದ್ದರು.