ಹುಬ್ಬಳ್ಳಿ: ಪಶ್ಚಿಮ ಬಂಗಾಳ, ಆಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳೊಂದಿಗೆ ಗೆಲವು ಸಾಧಿಸಿದ ಹಿನ್ನೆಲೆ ಸೋಮವಾರ ನಗರದ ದುರ್ಗದಬೈಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿರುವ ಐತಿಹಾಸಿಕ ಮತ್ತು ಭರ್ಜರಿ ಜಯವು ಸತ್ಯ, ಧರ್ಮ ಮತ್ತು ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿದೆ. ಈ ಗೆಲುವಿನ ಮೂಲಕ ಬಂಗಾಳದ ಜನತೆ ದಬ್ಬಾಳಿಕೆಯ ಆಡಳಿತವನ್ನು ಕಿತ್ತೊಗೆದು, ಅಭಿವೃದ್ಧಿಯ ಪರವಾದ ಸ್ಪಷ್ಟ ತೀರ್ಪು ನೀಡಿದ್ದಾರೆ. ವಿರೋಧ ಪಕ್ಷದ ಕಾರ್ಯಕರ್ತರ ಮೇಲಿನ ನಿರಂತರ ಹಲ್ಲೆಗಳು ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯ ಮೂಲಕ ವಿರೋಧಿಗಳ ಧ್ವನಿ ಅಡಗಿಸುವ ಷಡ್ಯಂತ್ರಗಳು ನಡೆದಿದ್ದವು. ಈ ಭಯದ ಮತ್ತು ಉಸಿರುಗಟ್ಟಿಸುವ ವಾತಾವರಣದ ನಡುವೆಯೂ, ಜನತೆ ಬದಲಾವಣೆಯ ದೃಢ ಸಂಕಲ್ಪ ಮಾಡಿದ್ದರು ಎಂಬುದನ್ನು ಈ ಫಲಿತಾಂಶ ಸಾಬೀತುಪಡಿಸಿದೆ ಎಂದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪಂಚರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಪುದುಚೆರಿ, ಅಸ್ಸಾಂ ಬಿಜೆಪಿ ವಿಜಯಶಾಲಿಯಾಗಿ ಇತಿಹಾಸ ಬರೆದಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಅಲ್ಲಿ ಮಹಿಳೆಯರು ಸುರಕ್ಷಿತವಾಗಿ ಇರಲಿಲ್ಲ. ರಾಜ್ಯದಲ್ಲಿ ಭಯಭೀತ ವಾತಾವರಣದಿಂದಾಗಿ ಅಲ್ಲಿನ ಜನರು ಬೇಸತಿದ್ದರು. ಅಸ್ಸಾಂ ರಾಜ್ಯದಲ್ಲಿ ಹೇಮಂತ್ ಬಿಸ್ವ ಶರ್ಮಾ ಕಳೆದ 2 ಅವಧಿಯಲ್ಲಿ ಉತ್ತಮ ಆಡಳಿತವನ್ನು ನೀಡಿದ್ದಾರೆ. ಅವರ ಆಡಳಿತ ವೈಖರಿ ಮೆಚ್ಚಿ ಮತದಾರರು ಮತ್ತೆ ಬಿಜೆಪಿಗೆ ಹ್ಯಾಟ್ರಿಕ್ ಮಾಡಲು ಸಮ್ಮತಿಸಿದ್ದಾರೆ. ಇನ್ನು ಪುದುಚೇರಿಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕ ಅಶೋಕ ಕಾಟವೆ, ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ವೆಂಕಟೇಶ ಕಾಟವೆ, ಪ್ರವೀಣ್ ಪವಾರ್, ರಾಮನಗೌಡ ಶೆಟ್ಟಿನಗೌಡ್ರ, ಮಹಿಳಾಮೋರ್ಚಾ ಅಧ್ಯಕ್ಷೆ ಅಕ್ಕಮ್ಮ ಹೆಗಡೆ, ಪ್ರಧಾನ ಕಾರ್ಯದರ್ಶಿ ಅರ್ಚನಾ ಕೆ, ಪಾಲಿಕೆ ಸದಸ್ಯರಾದ ಉಮಾ ಮುಕುಂದ, ಶಿವು ಮೆಣಸಿನಕಾಯಿ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿದ್ದರು.ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತಕ್ಕ ಉತ್ತರ: ಶೆಟ್ಟರಹುಬ್ಬಳ್ಳಿ:
ಪ್ರಧಾನಿ ನರೇಂದ್ರ ಮೋದಿ ಬಗೆಗಿನ ಟೀಕೆ, ಮಹಿಳಾ ಮೀಸಲಾತಿ ವಿರೋಧಿಸಿದ್ದಕ್ಕಾಗಿ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಜನತೆ ತಕ್ಕ ಉತ್ತರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿಯೇ ಕಾಂಗ್ರೆಸ್ ಹೆಸರಿಲ್ಲದಂತಾಗಲಿದೆ ಎಂದು ಸಂಸದ ಜಗದೀಶ ಶೆಟ್ಟರ ಭವಿಷ್ಯ ನುಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಗಳಲ್ಲಿ ಬಿಜೆಪಿಗೆ ಮತದಾರರು ಭವ್ಯ ಬೆಂಬಲ ನೀಡಿದ್ದಾರೆ. ಪಕ್ಷದ ಆಡಳಿತ ಮತ್ತು ಅಭಿವೃದ್ಧಿ ಕಾರ್ಯವೈಖರಿಯನ್ನು ಮೆಚ್ಚಿ ಜನತೆ ನೀಡಿರುವ ಈ ಬೆಂಬಲ ಅತ್ಯಂತ ಸಂತಸ ತಂದಿದೆ ಎಂದರು.
ಈ ರಾಜ್ಯಗಳ ಚುನಾವಣಾ ಫಲಿತಾಂಶವು ಕರ್ನಾಟಕದ ಮೇಲೆಯೂ ಪ್ರಭಾವ ಬೀರಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚುವುದು ನಿಶ್ಚಿತವಾಗಿದೆ. ಮುಂದೆ ಕರ್ನಾಟಕದಲ್ಲೂ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.