ಕೋಮು ಸಾಮರಸ್ಯ ಕದಡಿಸಿ ಗೆದ್ದ ಬಿಜೆಪಿ: ಗೀತಾ ವಾಗ್ಳೆ

| Published : Jul 07 2025, 11:48 PM IST

ಕೋಮು ಸಾಮರಸ್ಯ ಕದಡಿಸಿ ಗೆದ್ದ ಬಿಜೆಪಿ: ಗೀತಾ ವಾಗ್ಳೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆಗಳನ್ನೇ ಸರಿಯಾಗಿ ನೀಡಲಾಗದ ಸರ್ಕಾರ ಎಂಬುದಾಗಿ ಹೇಳಿರುವ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ತಮ್ಮ ಪಕ್ಷದ ಮಹಿಳೆಯರನ್ನೇ ಮೊದಲು ವಿಚಾರಿಸಿ ಈ ಹೇಳಿಕೆ ನೀಡಬೇಕಿತ್ತು. ಅಧ್ಯಕ್ಷರೇ, ನಿಮ್ಮ ಪಕ್ಷದಲ್ಲೇ ಅದೆಷ್ಟೋ ಮಹಿಳೆಯರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದು, ಅವರಲ್ಲಿ ಇವುಗಳ ಬಗ್ಗೆ ವಿಚಾರಿಸಿ ಕೊಳ್ಳುವುದು ಒಳಿತು ಎಂದು ಗೀತಾ ವಾಗ್ಳೆ ಕುಟುಕಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿಯವರ ವಿರುದ್ಧ ಹೇಳಿಕೆ ನೀಡುವ ಮೊದಲು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರು ವಾಸ್ತವವನ್ನು ತಿಳಿದುಕೊಂಡು ಮಾತನಾಡಲಿ. ಧರ್ಮ ಜಾತಿಗಳ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಮೂಲಕ, ಜಿಲ್ಲೆಯಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳನ್ನು ವೈಭವೀಕರಿಸುವ ಮೂಲಕ ಕೋಮು ಸಾಮರಸ್ಯವನ್ನು ಕದಡಿಸಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿರುವುದು ಎಲ್ಲರಿಗೂ ತಿಳಿದಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಗೀತಾ ವಾಗ್ಳೆ ಹೇಳಿದ್ದಾರೆ.

ಸೌಮ್ಯಾ ರೆಡ್ಡಿಯವರು ಜಿಲ್ಲೆಯ ವಾಸ್ತವ ಪರಿಸ್ಥಿತಿಗೆ ಕನ್ನಡಿ ಹಿಡಿದಿದ್ದಾರಷ್ಟೇ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜನರೆಡೆಗೆ ತಲುಪುತ್ತಿರುವುದು ಬಿಜೆಪಿಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಕಾರಣದಿಂದ ಅವರು ಈ ಯೋಜನೆಗಳ ಬಗ್ಗೆ ಪದೇಪದೆ ಅಪಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನೇ ಸರಿಯಾಗಿ ನೀಡಲಾಗದ ಸರ್ಕಾರ ಎಂಬುದಾಗಿ ಹೇಳಿರುವ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ತಮ್ಮ ಪಕ್ಷದ ಮಹಿಳೆಯರನ್ನೇ ಮೊದಲು ವಿಚಾರಿಸಿ ಈ ಹೇಳಿಕೆ ನೀಡಬೇಕಿತ್ತು. ಅಧ್ಯಕ್ಷರೇ, ನಿಮ್ಮ ಪಕ್ಷದಲ್ಲೇ ಅದೆಷ್ಟೋ ಮಹಿಳೆಯರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದು, ಅವರಲ್ಲಿ ಇವುಗಳ ಬಗ್ಗೆ ವಿಚಾರಿಸಿ ಕೊಳ್ಳುವುದು ಒಳಿತು ಎಂದು ಗೀತಾ ವಾಗ್ಳೆ ಕುಟುಕಿದ್ದಾರೆ.ಸರ್ಕಾರಿ ಬಸ್‌ಗಳ ಲಭ್ಯತೆಯ ಬಗ್ಗೆ ಪ್ರಶ್ನಿಸುವ ಅಧ್ಯಕ್ಷರಿಗೆ ಈಗ ಇವರ ಪಕ್ಷದಲ್ಲಿರುವ ಪ್ರಮೋದ್ ಮಧ್ವರಾಜ್ ಅವರು ನಮ್ಮ ಪಕ್ಷದ ಸರ್ಕಾರದಲ್ಲಿ ಸಚಿವರಾಗಿದ್ದಾಗ ಉಡುಪಿಗೆ ತರಿಸಿದ್ದ ನೂರಾರು ಬಸ್‌ಗಳನ್ನು ಖಾಸಗಿ ಬಸ್ ಮಾಲೀಕರ ಒತ್ತಡಕ್ಕೆ ಮಣಿದು ಓಡಾಟವನ್ನು ನಿಲ್ಲಿಸಿ, ಕೊರೋನಾದ ನೆಪ ಹೇಳಿ ಉಡುಪಿಯಿಂದಲೇ ಬಸ್‌ಗಳನ್ನು ಕಾಣೆಯಾಗಿಸಿದ್ದನ್ನು ಮತದಾರರು ಮರೆತಿಲ್ಲ ಎಂದವರು ನೆನಪಿಸಿದ್ದಾರೆ.ಇನ್ನು ಧಾರ್ಮಿಕ ಕೇಂದ್ರಗಳಿಗೆ ಅನುದಾನದ ವಿಷಯದಲ್ಲಿ ಬಿಜೆಪಿಯ ರಾಜಕೀಯ ಹೊಸದೇನಲ್ಲ. ಆದರೆ ಸಿದ್ಧರಾಮಯ್ಯ ನೇತೃತ್ವದ ನಮ್ಮ ಪಕ್ಷದ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಈ ಹಿಂದೆ ನೀಡಿದುದಕ್ಕಿಂತಲೂ ಹೆಚ್ಚು ಅನುದಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಸಚಿವರಾಗಿ ರಾಮಲಿಂಗಾ ರೆಡ್ಡಿ ಅವರು ಒದಗಿಸಿಕೊಟ್ಟಿರುತ್ತಾರೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಅನ್ನುವಂತೆ ಸುಳ್ಳು ಹೇಳುವುದೇ ನಮ್ಮ ಜನ್ಮ ಸಿದ್ಧ ಹಕ್ಕು ಎಂಬಂತೆ ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ಒಬ್ಬರಿಗಿಂತ ಒಬ್ಬರು ನಿಸ್ಸೀಮರು ಎಂದು ಗೀತಾ ವಾಗ್ಳೆ ಹೇಳಿದ್ದಾರೆ.